September 19, 2024

ಸಂವಿಧಾನ ಬದ್ಧ ಹಕ್ಕುಗಳಾದ ಆರೋಗ್ಯ, ಶಿಕ್ಷಣ ಪಡೆಯಲಾಗಿಲ್ಲ

0
ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ

ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ

ಚಿಕ್ಕಮಗಳೂರು:-ಆರೋಗ್ಯ ಮತ್ತು ಶಿಕ್ಷಣವನ್ನು ಪ್ರತಿಯೊಬ್ಬ ನಾಗರೀಕರನೂ ಪಡೆಯಬೇಕೆಂಬ ಸಂವಿಧಾನ ಬದ್ಧವಾದ ಹಕ್ಕನ್ನು ಈವರೆಗೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಿಷಾಧ ವ್ಯಕ್ತಪಡಿಸಿದರು.

ಅವರು ಇಂದು ನಗರದ ವಿಜಯಪುರದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಹಯೋಗದಲ್ಲಿ ಆರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಪಟ್ಟಣ ಪ್ರದೇಶದಲ್ಲಿ ಈ ಆಸ್ಪತ್ರೆ ಸಾರ್ವಜನಿಕವಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕೆಂಬುದು ಆಶಯವಾಗಿದೆ. ಆದರೆ ಇಲ್ಲಿ ೨೪x೭ ವೈದ್ಯರು ಮತ್ತು ದಾದಿಯರು ಇರುವುದರ ಜೊತೆಗೆ ಉತ್ತಮ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.

ನಗರದ ನಾಗರೀಕರು ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ನಗರದ ಕೇಂದ್ರ ಭಾಗದಲ್ಲಿ ಆರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನದ ಜೊತೆಗೆ ಸಿಎಸ್‌ಆರ್ ಅನುದಾನ ಬಳಸಿ ಹಿರೇಮಗಳೂರು ಆಸ್ಪತ್ರೆ ಮಾದರಿಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಭರವಸೆ ನೀಡಿದರು.

ಈಗಾಗಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಉದ್ಘಾಟನೆಯಾಗಲಿದೆ. ಮೆಡಿಕಲ್ ಕಾಲೇಜು ಕಾಮಗಾರಿ ಈ ವರ್ಷ ಸಂಪೂರ್ಣವಾಗಿ ಮುಗಿಸಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ಉತ್ತಮ ಗುಣಮಟ್ಟದ ಚಿಕಿತ್ಸೆ ಸ್ಥಳೀಯ ಆಸ್ಪತ್ರೆಗಳಲ್ಲಿ ದೊರೆಯಬೇಕೆಂಬ ಉದ್ದೇಶದಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇಂದು ಆರಂಭಿಸಲಾಗಿದೆ. ಇಂದು ಶಿಕ್ಷಣ ಮತ್ತು ಆರೋಗ್ಯ ಪಡೆಯುವುದು ಸವಾಲಾಗಿದ್ದು, ಹಿಂದೆ ಪ್ರಕೃತಿ ಜೊತೆ ಹೊಂದಿಕೊಂಡ ಪರಿಣಾಮ ಆರೋಗ್ಯವಾಗಿ ಆನಂದದಿಂದ ಇದ್ದರು ಎಂದು ಹೇಳಿದರು.

ಈಗ ವಿಜ್ಞಾನ ಮುಂದುವರೆದಿದೆ. ಹೊಸಹೊಸ ಚಿಕಿತ್ಸಾ ವಿಧಾನಗಳನ್ನು ಕಂಡುಕೊಳ್ಳಲಾಗಿದೆ. ಇದಕ್ಕೆ ಸವಾಲಾಗಿ ರೋಗಗಳು ಹೆಚ್ಚಾಗುತ್ತಿವೆ. ಹಿಂದೆ ಡೆಂಗ್ಯೂ ಜ್ವರ ಕೇಳಿರಲಿಲ್ಲ. ಪ್ಲೇಟ್‌ಲೇಟ್ಸ್ ಹೆಸರೇ ಗೊತ್ತಿರಲಿಲ್ಲ. ಜೀವನ ಪದ್ದತಿ ಆರೋಗ್ಯದಲ್ಲಿ ಬದಲಾವಣೆಗಳು ಆಗಿರುವುದು ಪರಿಸರದ ಮೇಲೆ ಆಗಿರುವ ದುಷ್ಪರಿಣಾಮ ಪ್ರಮುಖ ಕಾರಣ ಎಂದು ವಿಷಾಧಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಪಡೆಯಲು ಸಾರ್ವಜನಿಕರು ಈ ಆಸ್ಪತ್ರೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು ಆರೋಗ್ಯವೇ ಭಾಗ್ಯ ಎಂಬ ಉದ್ದೇಶದಿಂದ ಸರ್ಕಾರ ಸ್ಥಳೀಯವಾಗಿ ಜನರಿಗೆ ಕೈಗೆಟುಕಬೇಕೆಂಬ ದೃಷ್ಟಿಯಿಂದ ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ ಎಂದರು.

ಈ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರು ಆಸ್ಪತ್ರೆಗೆ ಬರುವ ರೋಗಿಗಳ ಆರೋಗ್ಯ ಕಾಪಾಡಲು ಸಹಕರಿಸಿ ಒಳ್ಳೆಯ ಸೇವೆ ಸಲ್ಲಿಸಿ ಎಂದು ಶುಭ ಹಾರೈಸಿದರು.

ವೈದ್ಯೋ ನಾರಾಯಣ ಹರಿ ಎಂದರೆ ಸಾಲದು. ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾದಾಗ ಅವರಿಗೆ ತಪ್ಪಿನ ಅರಿವು ಆಗುತ್ತದೆ. ಇದು ಆಗದಿದ್ದರೆ ವೈದ್ಯರ ನೈತಿಕ ಶಕ್ತಿ ಕುಂದಿಸಿದಂತಾಗುತ್ತದೆ ಎಂದು ವೈದ್ಯರಿಗೆ ದೈರ್ಯ ತುಂಬಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ನಗರಸಭೆ ಸದಸ್ಯ ಸಿ.ಪಿ ಲಕ್ಷ್ಮಣ, ಯಮುನಾ ಚನ್ನಬಸಪ್ಪ ಶೆಟ್ಟಿ, ತಾರಾ ಭೋಜೇಗೌಡ ಮತ್ತಿತರರು ಉಪಸ್ಥಿತರಿದ್ದರು.ಪಂಚಾಕ್ಷರಿ ಸ್ವಾಗಿತಿಸಿದರು.

Inauguration of Urban Primary Health Center in Vijayapur

 

About Author

Leave a Reply

Your email address will not be published. Required fields are marked *

You may have missed