September 21, 2024

ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧ

0
ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ

ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ೧೮ ವರ್ಷದೊಳಗಿನ ಹೆಣ್ಣು ಹಾಗೂ ೨೧ ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಇಂದು ನಗರದ ತಾಲ್ಲೂಕು ಪಂಚಾಯಿತಿ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು, ಮಕ್ಕಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಗುವು ತಾಯಿಯ ಗರ್ಭದಲ್ಲಿರುವಾಗಲೇ ಹಲವಾರು ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಫಲವನ್ನು ಪಡೆದು ಜನಿಸುತ್ತದೆ. ಮಕ್ಕಳು ದೇಶದ ಆಸ್ತಿ, ಮಕ್ಕಳು ನಂಬಿಕೆ, ನೆಮ್ಮದಿ, ಸುಖ, ಸಂತೋಷದ ಹಾಗೂ ಕಲಿಯುವ ವಾತಾವರಣದಲ್ಲಿ ಬೆಳೆದು ಬಂದರೆ ಅವರಿಗೆ ಅರ್ಥಪೂರ್ಣ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹುಟ್ಟುವ ಪ್ರತಿ ಮಗುವನ್ನು ಅಕ್ಕರೆಯಿಂದ ಜಾಗರೂಕತೆಯಿಂದ ಬೆಳೆಸಿ ಎಂದರು.

ಯಾವುದೇ ಮಗುವು ಅನಾಥರಾಗದಂತೆ, ರೋಗರುಜಿನಗಳಿಗೆ ಬಲಿಯಾಗದಂತೆ, ಅಂಗವಿಕಲವಾಗದೆ, ಎಂತಹದೇ ಪ್ರಸಂಗದಲ್ಲೂ ಮಕ್ಕಳು ಒತ್ತಡಕ್ಕೆ ಬೀಳದೆ ಬದುಕಲು-ಜೀವನ ನಡೆಸಲು, ಎಳೆ ವಯಸ್ಸಿನಲ್ಲೆ ದುಡಿಯದಂತೆ, ಭವಿಷ್ಯವಿಲ್ಲದ, ಕನಸಿಲ್ಲದವರಾಗದಂತೆ ನೋಡಿಕೊಳ್ಳುವ ಹೊಣೆ ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದ ಅವರು ಮಕ್ಕಳನ್ನು ಲೈಂಗಿಕ ದೃಷ್ಟಿಯಿಂದ ನೋಡುವುದು, ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಮಕ್ಕಳೊಂದಿಗೆ ಅಶ್ಲೀಲ ಪದಗಳನ್ನಾಡುವುದು, ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಈ ಕೃತ್ಯಗಳನ್ನು ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಯೊಬ್ಬ ಸಾರ್ವಜನಿಕರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಬಾಲ್ಯ ವಿವಾಹ ತಡೆಗಟ್ಟಲು ಕ್ರಮ ವಹಿಸಬೇಕು ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸಿಕೊಳ್ಳದೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದ ಅವರು ಮಹಿಳೆಯರು ಹಾಗೂ ಮಕ್ಕಳಿಗಿರುವ ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರ ಸುರಕ್ಷಿತ ಬದುಕಿಗೆ ಸಹಕಾರಿಯಾಗಿ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನದ ಆಶಯದಂತೆ ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು ಸರ್ಕಾರವು ಮಕ್ಕಳ ರಕ್ಷಣೆ ಕುರಿತು ಹಲವರು ಯೋಜನೆಗಳನ್ನು ಜಾರಿ ಮಾಡಿದೆ ಮಕ್ಕಳು ಬೆಳೆದು ಸಮುದಾಯ, ರಾಜ್ಯ, ದೇಶವನ್ನು ಮುನ್ನಡೆಸಬೇಕೆಂಬುದು ಸರ್ಕಾರದ ಆಶಯ, ಮಕ್ಕಳು ಯಾವುದೇ ಕಿರುಕುಳ, ಅಡೆತಡೆಗಳಿಲ್ಲದೆ ಬಾಲ್ಯವನ್ನು ಅನುಭವಿಸಬೇಕು ಆಟ-ಪಾಠಗಳಲ್ಲಿ, ಶಿಕ್ಷಣ, ಓಡಾಟಗಳಲ್ಲಿ ತೊಡಗಿದಾಗ ಸಧೃಡ ಮನಸ್ಸಿನಿಂದ ಬೆಳೆಯಲು ಸಾಧ್ಯವಾಗುತ್ತದೆ ಎಂದ ಅವರು ಕಾನೂನಿನ ಚೌಕಟ್ಟಿನಲ್ಲಿ ಮಕ್ಕಳ ರಕ್ಷಣೆಯಲ್ಲಿ ಮುಂದಾಗಿ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಕೆ ತಾರನಾಥ್ ಮಾತನಾಡಿ ಮಕ್ಕಳಿಗಾಗುವ ಅಡೆಚಣೆಗಳು, ತೊಂದರೆಗಳನ್ನು ಗುರುತಿಸಲು ಅವರ ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ಗ್ರಾಮ ಪಂಚಾಯಿತಿಗಳು ಪ್ರತಿ ವರ್ಷ ಮಕ್ಕಳ ಪರಿಸ್ಥಿತಿ ಹಾಗೂ ವಿಚಾರಗಳ ಕುರಿತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಬೆಯನ್ನು ನಡೆಸಲಾಗುತ್ತದೆ ಇದರಿಂದ ಮಕ್ಕಳು ಮುಕ್ತ ಮನಸಿನಿಂದ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಗಾರದಲ್ಲಿ ಮಕ್ಕಳ ಅಭಿವೃದ್ಧಿ ಸಮಿತಿ ಸದಸ್ಯ, ಬೆಂಗಳೂರು ಲಕ್ಷ್ಮಿಪ್ರಸನ್ನ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಪಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಸಿ., ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

Child marriage is a punishable offence

About Author

Leave a Reply

Your email address will not be published. Required fields are marked *