September 22, 2024

ಟೈಲರ್‍ಸ್ ವೃತ್ತಿಬಾಂಧವರು ಒಗ್ಗಟ್ಟು ಪ್ರದರ್ಶಿಸಿ

0
ಟೈಲರ್ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಟೈಲರ್ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಚಿಕ್ಕಮಗಳೂರು:  ಟೈಲರ್‍ಸ್ ವೃತ್ತಿಬಾಂಧವರಿಗೆ ಸಹಕಾರ ಸಂಘದಿಂದ ಸುಮಾರು ೧೧ ಲಕ್ಷ ರೂ.ಗಳ ಸಾಲಸೌಲಭ್ಯ ಒದಗಿಸಿ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಿದೆ ಎಂದು ಟೈಲರ್ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಅಶೋಕ್ ಹೇಳಿದರು.

ನಗರದ ಡಿ.ಎಸ್.ಎಂ.ಎಸ್ ಆವರಣದಲ್ಲಿ ಟೈಲರ್ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಸಂಘವು ಪ್ರಾರಂಭಗೊಂಡು ಮೂರನೇ ವರ್ಷವು ಕಳೆದಿದ್ದು, ೨೭೦ ಸದಸ್ಯರುಗಳ ಸಂಖ್ಯಾಬಲವಿದೆ. ಸಹಕಾರ ಸಂಘದಲ್ಲಿ ೨.೭೦ ಲಕ್ಷ ರೂಗಳನ್ನು ಠೇವಣಿ ಇರಿಸಲಾಗಿದೆ. ಜೊತೆಗೆ ಡಿಸಿಸಿ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆಯಲ್ಲಿ ೬ ಲಕ್ಷ ರೂ.ಗಳನ್ನು ಇರಿಸಿಕೊಂಡು ಸಂಘವು ಮುನ್ನೆಡೆಯುತ್ತಿದೆ ಎಂದರು.

ಸದಸ್ಯರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ೩೩ ಕುಟುಂಬದ ೧೧೫ ಮಂದಿಗೆ ಯಶಸ್ವಿನಿ ಕಾರ್ಡ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಶಾಲಾಸಮವಸ್ತ್ರ ತಯಾರಿಸುವ ನಿಟ್ಟಿನಲ್ಲಿ ನೇರವಾಗಿ ಗುತ್ತಿಗೆ ಪಡೆಯುವ ಆಲೋಚನೆಯಿದೆ ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಟೈಲರ್ ವೃತ್ತಿಬಾಂಧವರು ಅನೇಕ ಸವಲತ್ತಿನಿಂದ ವಂಚಿತರಾಗಿದ್ದಾರೆ. ಸರ್ಕಾರದ ಸವಲತ್ತುಗಳು ಪಡೆದುಕೊಳ್ಳಲು ಟೈಲರ್‍ಸ್ ಕಾರ್ಮಿಕರು ಸಂಘಟನೆ ಜೊತೆಗೂಡಿದರೆ ಮಾತ್ರ ಸೌಲಭ್ಯದ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದರು.

ಉಪಾಧ್ಯಕ್ಷೆ ಜೈನಾಬಿ ಸಿಖಂದರ್ ಮಾತನಾಡಿ, ಟೈಲರ್ ಕಾರ್ಮಿಕರ ಸಹಕಾರದಿಂದ ಬಹಳಷ್ಟು ಉಪಯೋಗವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸಾಲಸೌಲಭ್ಯ ಒದಗಿಸುವ ಮೂಲಕ ಶ್ರಮಿಸುತ್ತಿದ್ದು, ಸಾಲ ಪಡೆದಂತಹ ಸದಸ್ಯರುಗಳು ನಿಗಧಿತ ಸಮಯಕ್ಕೆ ಮರುಪಾವತಿಸಿದರೆ ಇತರೆ ಸದಸ್ಯರಿಗೆ ಸಾಲದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಹೆಚ್.ಆರ್.ರಾಜು, ಸಿ.ಯುವರಾಜ್, ವಜೀರ್ ಅಹ್ಮದ್, ಬಿ.ಸಿ.ಶೋಭಾ, ಲಕ್ಷ್ಮೀಕಾಂತ್, ಸತೀಶ್, ಪಾಂಡುಕುಮಾರ್, ಮಂಜುನಾಥ್, ಕಾರ್ಯದರ್ಶಿ ಸಿ.ಎನ್.ಜಾನಕಿ, ಪಿಗ್ನಿ ಸಂಗ್ರಹಕ ಸಿ.ಎಸ್.ರುದ್ರೇಶ್ ಹಾಗೂ ಸದಸ್ಯರುಗಳು ಹಾಜರಿದ್ದರು.

Annual General Meeting of All Members of Tailor Co-operative Society

About Author

Leave a Reply

Your email address will not be published. Required fields are marked *

You may have missed