September 22, 2024

ಕನ್ನಡಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮೆಲ್ಲರ ಹೆಮ್ಮೆ

0
ಕರ್ನಾಟಕ ಸರ್ಕಾರ ಕರ್ನಾಟಕ ೫೦ ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಚಾಲನೆ

ಕರ್ನಾಟಕ ಸರ್ಕಾರ ಕರ್ನಾಟಕ ೫೦ ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಚಾಲನೆ

ಚಿಕ್ಕಮಗಳೂರು: ಕನ್ನಡ ಭಾಷೆಗೆ ೦೮ ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು. ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ೫೦ ವರ್ಷಗಳು ಸಂದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ೫೦ ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಲಭಿಸಿರುವ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ಬೇರೆ ಯಾವುದೇ ಭಾಷೆಗೆ ಬಂದಿರುವುದಿಲ್ಲ ಎಂದ ಅವರು ಕನ್ನಡ ಭಾಷೆಯ ಹಿರಿಮೆ ಗರಿಮೆ, ಕನ್ನಡ ನಾಡಿನ ಕಂಪು ವಿಶ್ವದಾದ್ಯಂತ ಪಸರಿಸಲಿ ಎಂದ ಅವರು ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿ ನಾಡು ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ.

ಹಚ್ಚ ಹಸಿರಿನ, ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ, ಸಾಧು ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ಧೀಮಂತ ಶಕ್ತಿ ಇದೆ. ಈ ಸಮೃದ್ಧ ಸುಂದರ ನಾಡಿನಲ್ಲಿರುವ ನಾವೆಲ್ಲರೂ ಭಾಷಾ ಪ್ರೇಮವನ್ನು ಬೆಳೆಸಿಕೊಂಡು ಎಲ್ಲಾ ಜಾತಿ, ಮತ, ಪಂಥಗಳ ಜನರು ಒಗ್ಗೂಡಿ ಕನ್ನಡ ರಥ ಯಾತ್ರೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಹಕರಿಸುವಂತೆ ಹೇಳಿದರು.

ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಮಾತನಾಡಿ ಕನ್ನಡ ಭಾಷೆಗೆ ೨೦೦೦ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು, ಭಾಷೆ ಉಳಿಸಿ ಬೆಳೆಸುವಲ್ಲಿ ಅನೇಕ ಕವಿಗಳು, ಸಾಧು ಸಂತರು, ಶ್ರಮಿಸಿದ್ದಾರೆ. ಕನ್ನಡ ಕೇವಲ ಭಾಷೆಯಾಗದೆ ನಮ್ಮ ಉಸಿರೆಂದು ಭಾವಿಸಿದ್ದಲ್ಲಿ ಕನ್ನಡ ಕಂಪು ವಿಶ್ವದಾದ್ಯಂತ ಹರಡುತ್ತದೆ.

ಮಕ್ಕಳಲ್ಲಿ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಕುರಿತ ಮಾಹಿತಿಯ ಬೀಜವನ್ನು ಭಿತ್ತಿದ್ದಲ್ಲಿ ಅದರ ಮಹತ್ವವು ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಿದ್ದಲ್ಲಿ ಅದರ ಬಳಕೆ ಹೆಚ್ಚಾಗಿ ಕನ್ನಡದ ಉಳಿವು ಸಾಧ್ಯ ಎಂದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಣಗೊಳಿಸುವ ಕನಸು ಕಂಡ ಮೊದಲ ವ್ಯಕ್ತಿ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ ೫೦ ವರ್ಷ ಪೂರ್ಣಗೊಂಡಿದೆ. ಕನ್ನಡ ನಾಡು ಅನೇಕರಿಗೆ ಜೀವನ ರೂಪಿಸಿ ಕೊಡುವ ಪ್ರದೇಶವಾಗಿದೆ ಎಂದರು

ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇಕಡಾ ೬೦ ರಷ್ಟು ಪ್ರದರ್ಶಿಸುವುದು ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ, ನಗರಸಭೆ ಸಹಯೋಗದಲ್ಲಿ ನಾಮಫಲಕಗಳಲ್ಲಿ ಶೇಕಡಾ ೬೦ ರಷ್ಟು ಕನ್ನಡ ಭಾಷೆ ಪ್ರದರ್ಶಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಶಾಸಕ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಕನ್ನಡ ರಥ ಯಾತ್ರೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದರು. ಈಗ ರಥವು ಜಿಲ್ಲೆಗೆ ಆಗಮಿಸಿದ್ದು, ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಲಿದೆ ಎಂದು ಹೇಳಿದರು.

ಜಾನಪದ ಕಲಾ ತಂಡಗಳು, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಥವು ಜಿಲ್ಲಾಧಿಕಾರಿಗಳ ಕಛೇರಿ ಆವರಣದಿಂದ ಬೋಳರಾಮೇಶ್ವರ ರಸ್ತೆ ಮಾರ್ಗವಾಗಿ ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ ಮಾರ್ಗವಾಗಿ ಜಿಲ್ಲಾ ಪಂಚಾಯಿತಿವರೆಗೆ ತಲುಪಿ ಕಡೂರಿಗೆ ಬಿಳ್ಕೋಡಲಾಯಿತು.

Karnataka Govt Launches Kannada Jyoti Rath for Karnataka 50th Anniversary

About Author

Leave a Reply

Your email address will not be published. Required fields are marked *

You may have missed