September 22, 2024
ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ಚಿಕ್ಕಮಗಳೂರು:  ಕ್ರೀಡಾಕೂಟ ವಿದ್ಯಾರ್ಥಿಗಳಿಗೆ ಶಾರೀರಿಕ ಹಾಗೂ ಮಾನಸಿಕವಾಗಿ ಸಮತೋಲನ ಕಾಪಾಡಲು ಸಹಕಾರಿ. ಹೀಗಾಗಿ ಪಠ್ಯದೊಂದಿಗೆ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿಮುಖ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಪ್ರೌಡಶಾಲಾ ಸಹ ಶಿಕ್ಷಕರ ಸಂಘ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ನಿರಂತರ ಭಾಗವಹಿಸುವುದರಿಂದ ಕ್ರೀಡಾಸಕ್ತಿ ಮೂಡಲಿದೆ. ಜೊತೆಗೆ ಆರೋಗ್ಯಯುತ ಶರೀರ ಪಡೆದುಕೊಳ್ಳಬಹುದು ಎಂದ ಅವರು, ಕ್ರೀಡಾಕೂಟದಲ್ಲಿ ಹಲವಾರು ರೀತಿಯ ಕ್ರೀಡೆಗಳಿವೆ. ಆಸಕ್ತಿ ಹೊಂದಿರುವ ಕ್ರೀಡೆಯಲ್ಲಿ ಸ್ಪರ್ಧಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ವಿದ್ಯಾರ್ಥಿದೆಸೆಯಿಂದಲೇ ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಕ್ರೀಡಾಮನೋಭಾವನೆ ರೂಢಿಸಿಕೊಳ್ಳಬೇಕು. ಗೆಲುವಿಗೆ ಮಾತ್ರ ಸೀಮಿತರಾಗದೆ ಸ್ಪರ್ಧಿಸುವ ಗುಣ ಬೆಳೆಸಿಕೊಳ್ಳಬೇಕು. ಇಂದು ಸೋತವರು ಮುಂದೊಂದು ದಿನ ಗೆಲುವಿನ ನಗೆ ಬೀರುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ದಸರಾ ಕ್ರೀಡಾಕೂಟಕ್ಕೆ ಪುರಾತನ ಇತಿಹಾಸವಿದೆ. ನಾಡಹಬ್ಬದ ದಸರಾದ ವೇಳೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೂ ಕ್ರೀಡಾಕೂಟ ಆಯೋಜಿಸಿತ್ತು. ಹಿಂದಿನ ಕಾಲದಲ್ಲಿ ನಾಡಹಬ್ಬದಂದು ಕುಸ್ತಿ ನಡೆಯುತ್ತಿದ್ದವು. ಇದೀಗ ಕ್ರೀಡಾಕೂಟ ಆಯೋಜಿಸಿ ದಸರಾ ವೈಭವವನ್ನು ಉಳಿಸುತ್ತಿದೆ ಎಂದರು.

ಇಂದು ವಲಯ ಮಟ್ಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಶ್ರಮವಿಟ್ಟು ಕ್ರೀಡೆಯಲ್ಲಿ ಆಟವಾಡಿದರೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಬಹುದು. ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಅಗತ್ಯ. ಇದರಿಂದ ಜಿಲ್ಲೆಯ ಹೆಸರಿನ ಕೀರ್ತಿಪತಾಕೆ ಎಲ್ಲೆಡೆ ರಾರಾಜಿಸುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್, ಟಿಪಿಓ ಶೇರಾಲಿ, ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್, ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಗಂಗಾಧರ್, ಉಪಾಧ್ಯಕ್ಷರಾದ ಪ್ರಹ್ಲಾದ್, ಕಾರ್ಯದರ್ಶಿ ಉಮೇಶ್, ಇಸಿಓ ವೀರೇಶ್ ಕೌಲಗಿ, ಜಗಧೀಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್-೧ ಅಧ್ಯಕ್ಷ ಶಂಕರೇಗೌಡ, ತಾಲ್ಲೂಕು ಅಧ್ಯಕ್ಷ ಪ್ರವೀಣ್ ಪಿಂಟೋ, ಸಿದ್ಧಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Taluk level high school sports meet

About Author

Leave a Reply

Your email address will not be published. Required fields are marked *

You may have missed