September 19, 2024

Yagachi Reservoir has enough water to supply drinking water to the city: ಯಗಚಿ ಜಲಾಶಯದಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸುವಷ್ಟು ನೀರು

0
ಬೇಲೂರಿನ ಯಗಚಿ ಜಲಾಶಯಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭೇಟಿ

ಬೇಲೂರಿನ ಯಗಚಿ ಜಲಾಶಯಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭೇಟಿ

ಚಿಕ್ಕಮಗಳೂರು: ಮಳೆ ಅಭಾವ ತಲೆದೋರಿದರೂ ಚಿಕ್ಕಮಗಳೂರು ನಗರಕ್ಕೆ ಮುಂದಿನ ಎರಡು ವರ್ಷಗಳ ಕಾಲ ಅಬಾಧಿತವಾಗಿ ಕುಡಿಯುವ ನೀರು ಪೂರೈಸುವಷ್ಟು ನೀರು ಯಗಚಿ ಜಲಾಶಯದಲ್ಲಿ ಸಂಗ್ರಹವಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಮುಂಗಾರು ಕ್ಷೀಣಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಗುರುವಾರ ನಗರಕ್ಕೆ ನೀರು ಪೂರೈಸುವ ಬೇಲೂರಿನ ಯಗಚಿ ಜಲಾಶಯಕ್ಕೆ ಭೇಟಿ ನೀಡಿ ನೀರು ಸಂಗ್ರಹಣೆಯ ಪ್ರಮಾಣವನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂದೆ ಎದುರಾಗಬಹುದಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮರ್ಪಕ ನೀರು ಪೂರೈಕೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಮುಂಜಾಗ್ರತೆಯಾಗಿ ಪರಿಶೀಲಿಸುವ ಸಲುವಾಗಿ ನಗರಸಭೆ ಸದಸ್ಯರು, ಅಧಿಕಾರಿಗಳು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಜೊತೆ ಜಲಾಶಯಕ್ಕೆ ಭೇಟಿ ನಿಡಿದ್ದೇವೆ ಎಂದರು.

ಅಮೃತ್ ಯೋಜನೆಯಡಿ ಮನೆ ಮನೆ ನಲ್ಲಿ ಸಂಪರ್ಕ ನೀಡುವ ಕಾರ್ಯ ಈಗಾಗಲೇ ಶೇ.೮೦ ರಷ್ಟು ಪೂರ್ಣಗೊಂಡಿದೆ. ಮುಂದಿನ ತಿಂಗಳಿನಿಂದ ಅವುಗಳ ಮೀಟರ್ ರೀಡಿಂಗ್ ಆರಂಭವಾಗುತ್ತದೆ. ಇದರಿಂದ ಸಾರ್ವಜನಿಕರು ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರು ಬಳಸುವುದರಿಂದ ಅನಗತ್ಯವಾಗಿ ಪೋಲಾಗುತ್ತಿದ್ದ ನೀರು ಉಳಿತಾಯವಾಗಲಿದೆ ಎಂದು ತಿಳಿಸಿದರು.

ಇದರ ಜೊತೆಗೆ ಅಮೃತ್ ಯೋಜನೆಯಡಿ ನಿರಂತರವಾಗಿ ದಿನದ ೨೪ ಗಂಟೆಗಳ ಕಾಲ ನೀರು ಪೂರೈಸಲು ಕೆಯುಡಬ್ಲ್ಯುಎಸ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕುಳಿತಲ್ಲೇ ಎಲ್ಲವನ್ನೂ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಅವರು ಮಾಡಿಕೊಂಡಿದ್ದಾರೆ. ನಗರಸಭೆಯಲ್ಲೂ ಆಯುಕ್ತರ ಕಚೇರಿಯಲ್ಲಿ ಫಿಲ್ಟರ್ ಬೆಡ್‌ಗಳು, ನೀರು ಶುದ್ಧೀಕರಣ ಘಟಕಗಳ ಎಲ್ಲೆಲ್ಲಿವೆ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಯಾರೆಲ್ಲಾ ಬಂದು ಹೋಗುತ್ತಾರೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕಚೇರಿಯಿಂದಲೇ ತಿಳಿದುಕೊಂಡು ನಿರ್ವಹಣೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಗರದಲ್ಲಿ ಕೆಲವರು ಕಾರು ತೊಳೆಯಲು, ಶೆಡ್‌ಗಳನ್ನು ತೊಳೆಯಲು ಸಹ ಕುಡಿಯುವ ನೀರನ್ನೇ ಬಳಸುತ್ತಿದ್ದಾರೆ. ನೀರುಗಂಟಿಗಳು ಬೇಕಾ ಬಿಟ್ಟಿ ನೀರು ಬಿಡುವುದಿಂದ ಮನೆಗಳ ತೊಟ್ಟಿಗಳು ತುಂಬಿ ಸಾಕಷ್ಟು ನೀರು ಪೋಲಾಗುತ್ತಿದೆ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೇ ಕಾರಣಕ್ಕೆ ನಗರಸಭೆ ನೀರುಗಂಟಿಗಳನ್ನು ನಗರಸಭೆಯಿಂದ ಬಿಡುಗಡೆಗೊಳಿಸಿ ಕೆಯುಡಬ್ಲ್ಯುಎಸ್ ಸುಪರ್ದಿಗೆ ವಹಿಸಿದರೆ ಒಂದು ವರ್ಷದಲ್ಲಿ ಎಲ್ಲವನ್ನೂ ನಿರ್ವಹಣೆ ಮಾಡಿ ನೀರು ಪೋಲಾಗುವುದನ್ನು ತಪ್ಪಿಸುತ್ತೇವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೆ ಮುಂದೆ ಮೀಟರ್ ಅಳವಸಿಸಿದರೆ ತಾನಾಗಿಯೇ ಪೋಲಾಗುವುದು ತಪ್ಪುತ್ತದೆ ಎಂದರು.

ಯಗಚಿ ಜಲಾಶಯದಿಂದ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ಸಗೀರ್ ಅಹಮದ್ ಶಾಸಕರಾಗಿದ್ದಾಗ ಅಂದರೆ ಸುಮಾರು ೨೫ ವರ್ಷಗಳ ಹಿಂದೆ ಅಳವಡಿಸಿದ್ದು, ತುಂಬಾ ಹಳೆಯದಾಗಿರುವದಲ್ಲದೆ ಅಲ್ಲಲ್ಲಿ ಹಾನಿಗೀಡಾಗಿವುರ ಕಾರಣ ಅದನ್ನು ಬದಲಿಸಿ ಹೊಸ ಮಾದರಿ ಪೈಪ್‌ಗಳನ್ನು ಅಳವಡಿಸಿ ಮುಂದಿನ ನೂರು ವರ್ಷಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಆಲೋಚಿಸಿದ್ದು, ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಇಂದಾವರದ ಕಸದ ಡಂಪಿಂಗ್ ಯಾರ್ಡ್‌ನಲ್ಲಿ ದಿನ ನಿತ್ಯ ಬರುವ ಒಣ ಮತ್ತು ಹಿಸಿ ಕಸವನ್ನು ವಿಂಗಡಿಸಿ ಪ್ಲಾಸ್ಟಿಕ್‌ನ್ನು ಇಟ್ಟಿಗೆ ತಯಾರಿಸುವ ಕಂಪನಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದರು.ದಿನಕ್ಕೆ ಸುಮಾರು ೭೦ ಟನ್ ನಷ್ಟು ಕಸ ಸಂಗ್ರಹವಾಗುತ್ತಿದೆ. ಮನೆ ಮನೆ ಕಸ ಸಂಗ್ರಹ ಮಾಡಲಾಗುತ್ತಿದೆ. ಅಕ್ಕ ಪಕ್ಕದ ಯಾವುದೇ ನಗರವನ್ನು ಹೋಲಿಕೆ ಮಾಡಿದರೆ ನಮ್ಮ ನಗರ ತುಂಬ ಸ್ವಚ್ಛ ಹಾಗೂ ಸುಂದರವಾಗಿದೆ. ಅದನ್ನು ಮುಂದುವರಿಸಲಾಗುವುದು ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನೀಯರ್ ಮಲ್ಲೇಶ್ ನಾಯಕ್ ಮಾತನಾಡಿ ಯಗಚಿ ಜಲಾಶಯದ ಒಟ್ಟು ನೀರಿನ ಸಂಗ್ರಹಣೆ ಸಾಮರ್ಥ್ಯ ೩.೩೬ ಟಿಎಂಸಿ ಆಗಿದೆ. ಇದರಲ್ಲಿ ಡೆಡ್ ಸ್ಟೋರೇಜ್ ೦.೩ ಟಿಎಂಸಿ ಆಗಿದೆ. ಹಾಲಿ ಡೆಡ್ ಸ್ಟೋರೇಜ್ ಬಿಟ್ಟು ಡ್ಯಾಂನಲ್ಲಿ ೨.೭೭ ಟಿಎಂಸಿ ಸಂಗ್ರಹವಿದೆ. ಚಿಕ್ಕಮಗಳೂರು ನಗರಕ್ಕೆ ಪ್ರತಿ ದಿನ ೨೪ ಎಂಎಲ್‌ಡಿ ನೀರು ಬೇಕಾಗುತ್ತದೆ. ಆದರೆ ಅಷ್ಟು ಬೇಕಾದ ಕಾರಣ ಸುಮಾರು ೧೮ ಎಂಎಲ್‌ಡಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಉಳಿದ ೭ ಎಂಎಲ್‌ಡಿ ನೀರು ಹಿರೇಕೊಳಲೆ ಕೆರೆಯಿಂದ ಸರಬರಾಜಾಗುತ್ತಿದೆ ಎಂದು ತಿಳಿಸಿದರು

ನಗರಸಭೆ ಆಯುಕ್ತ ಉಮೇಶ್, ಸದಸ್ಯರಾದ ಕವಿತಾಶೇಖರ್, ಇಂದಿರಾಶಂಕರ್, ಸಿ.ಎಂ.ಕುಮಾರ್, ರೂಪಕುಮಾರ್, ಗುರುಮಲ್ಲಪ್ಪ, ಮಂಜುಳಎಂ.ಕೆ, ಮಂಜುಳ.ಕೆ.ಆರ್, ಇಂಜಿನಿಯರ್ ಚಂದನ್, ರಶ್ಮಿ, ಲತಾಮಣಿ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.

Yagachi Reservoir has enough water to supply drinking water to the city
.

 

About Author

Leave a Reply

Your email address will not be published. Required fields are marked *

You may have missed