September 19, 2024

ಅತಿವೃಷ್ಟಿ-ಅನಾವೃಷ್ಟಿ ಪರಿಸ್ಥಿತಿಗೆ ಅಧಿಕಾರಿಗಳು ಸನ್ನದ್ಧರಾಗಬೇಕು

0
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಅತಿವೃಷ್ಟಿ-ಅನಾವೃಷ್ಟಿ ಪರಿಸ್ಥಿತಿ ಎದುರಿಸುವ ತುರ್ತು ಸಭೆ

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಅತಿವೃಷ್ಟಿ-ಅನಾವೃಷ್ಟಿ ಪರಿಸ್ಥಿತಿ ಎದುರಿಸುವ ತುರ್ತು ಸಭೆ

ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾದರೆ ಅಥವಾ ಮಳೆ ಕೈಕೊಟ್ಟರೆ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಅತಿವೃಷ್ಟಿ-ಅನಾವೃಷ್ಟಿ ಪರಿಸ್ಥಿತಿ ಎದುರಿಸುವ ತುರ್ತು ಸಭೆಯ ಅಧ್ಯಕ್ಷತೆ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಎಷ್ಟೇ ಗಂಬೀರ ಸಮಸ್ಯೆ ಎದುರಾದರೂ ಅದನ್ನು ಎದುರಿಸಲು ಅಧಿಕಾರಿಗಳು ಮನಸ್ಸು ಮಾಡಬೇಕು, ಇದಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳೇಕು, ಜತೆಗೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಅತಿಯಾಗಿ ಮಳೆ ಬಂದು ಭೂ ಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರ ಜನತೆಗೆ ಆ ಭಾಗದ ಜನರನ್ನು ಸ್ಥಳಾಂತರ ಮಾಡಿ ತಾತ್ಕಾಲಿಕ ಆಶ್ರಯ ನೀಡಲು ಹಾಗೂ ಅವರಿಗೆ ತುರ್ತಾಗಿ ಬೇಕಾಗಿರುವ ಗಂಜಿ ಕೇಂದ್ರಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಂದಿಲ್ಲ. ಜಿಲ್ಲೆಯಲ್ಲಿ ಈವರೆಗೆ ಸರಾಸರಿ ೧೦೪ ಮಿ.ಮೀ. ಮಳೆ ಬರಬೇಕಾಗಿತ್ತು. ಆದರೆ, ಈವರೆಗೆ ಬಂದಿದ್ದು ಶೇ. ೪೩ ರಷ್ಟು ಮಾತ್ರ. ಇದರಲ್ಲಿ ತರೀಕೆರೆ ತಾಲೂಕಿನಲ್ಲಿ ಶೇ. ೨೪, ಅಜ್ಜಂಪುರ ತಾಲೂಕಿನಲ್ಲಿ ಶೇ. ೨೯ ರಷ್ಟು ಅತಿ ಕಡಿಮೆ ಮಳೆ ಬಂದಿದೆ. ಹಾಗಾಗಿ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ವಿನಾಯಕ್ ಅವರು ಮಾತನಾಡಿ, ಮಳೆ ಇದೇ ರೀತಿಯಲ್ಲಿ ಕೈಕೊಟ್ಟರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳ ಸಂಖ್ಯೆ ೨೭೭, ಸದ್ಯ ೧೩ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರಿಂದ ಅವುಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ೧೧ ಕಡೆಗಳಲ್ಲಿ ಖಾಸಗಿ ಬೋರ್ ವೆಲ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ತುರ್ತು ಕಾಮಗಾರಿಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.

ರಸ್ತೆ ಕುಸಿತ, ಮರಗಳು ಬಿಟ್ಟು ರಸ್ತೆ ಸಂಪರ್ಕ ಬಂದ್ ಆದಲ್ಲಿ ಕೂಡಲೇ ತೆರವುಗೊಳಿಸಲು ತಂಡಗಳನ್ನು ರಚನೆ ಮಾಡಲಾಗಿದೆ. ಇದಕ್ಕೆ ಬೇಕಾದ ಜೆಸಿಬಿಗಳು ಹಾಗೂ ಇತರೆ ಸಾಮಾಗ್ರಿಗಳನ್ನು ಮುಂಜಾಗ್ರತೆಯಾಗಿ ಇಟ್ಟುಕೊಳ್ಳಲಾಗಿದೆ. ಇದರ ಜತೆಗೆ ಮಳೆಗಾಲದಲ್ಲಿ ಬೇಕಾಗಬಹುದಾದ ಔಷಽಗಳನ್ನು ದಾಸ್ತಾನು ಇಡಲಾಗಿದೆ ಎಂದು ಜಿಲ್ಲಾಽಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಳ ಹಂತದ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಟಿ.ಡಿ. ರಾಜೇಗೌಡ ಆರೋಪಿಸಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ೨೦೧೯ರಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಬಂದ ಭಾರೀ ಮಳೆಗೆ ಅನಾಹುತ ಸಂಭವಿಸಿದ್ದು, ಅಂದು ನಿರಾಶ್ರಿತರಾದ ಜನರಿಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುವ ಕೆಲಸ ಜಿಲ್ಲಾಡಳಿತದಿಂದ ಆಗಿಲ್ಲ, ೧೧ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಮಾತನಾಡಿ, ನಿರಾಶ್ರಿತರಾದ ೫೪ ಕುಟುಂಬಗಳಿಗೆ ಜಮೀನು ಹಾಗೂ ಮನೆಗಳನ್ನು ಕೊಡಲು ೧೦೨ ಕೋಟಿ ರುಪಾಯಿ ಬೇಕಾಗಿತ್ತು. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದ ಸಂದರ್ಭದಲ್ಲಿ ಇಷ್ಟು ಹಣ ಕೊಡಲು ಅವಕಾಶ ಇಲ್ಲ ಸರ್ಕಾರ ಹೇಳಿತ್ತೆಂದು ತಿಳಿಸಿದರು.

ಡೀಮ್ಡ್ ಫಾರೆಸ್ಟ್ ಕುರಿತು ಚರ್ಚೆಗೆ ಬಂದಾಗ ಚಿಕ್ಕಮಗಳೂರು ಡಿಎಫ್‌ಓ ಕ್ರಾಂತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ೫೨,೯೦೦ ಹೆಕ್ಟೇರ್ ಡೀಮ್ಡ್ ಫಾರೆಸ್ಟ್, ೨ ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಂಟಿ ಸರ್ವೆ ಆಗಬೇಕಾಗಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಕಂದಾಯ ಭೂಮಿಯನ್ನು ಮಂಜೂರು ಮಾಡಲು ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ಇದಿಯಾ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಪ್ರಶ್ನಿಸಿದರು. ಇದಕ್ಕೆ ಅವಕಾಶ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ರೂಪಾ ಹೇಳಿದರು.

ಸಭೆಯಲ್ಲಿ ಶಾಸಕರಾದ ಜಿ.ಎಚ್. ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ಆನಂದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

The authorities should be prepared for the situation of excess rain and drought

About Author

Leave a Reply

Your email address will not be published. Required fields are marked *

You may have missed