September 19, 2024

ಜಿಲ್ಲಾಸ್ಪತ್ರೆಯ ಜನರ ದಟ್ಟಣೆ ತಡೆಯಲು ಪಿ.ಹೆಚ್.ಸಿ ಮೇಲ್ದರ್ಜೆಗೆ

0
ಡಾ|| ಅಶ್ವಥ್‌ಬಾಬು ಹೆಚ್.ಎಸ್

ಡಾ|| ಅಶ್ವಥ್‌ಬಾಬು ಹೆಚ್.ಎಸ್

ಚಿಕ್ಕಮಗಳೂರು: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್‌ಬಾಬು ಹೆಚ್.ಎಸ್ ತಿಳಿಸಿದರು.

ಅವರು ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಜನರು ತಮ್ಮ ಕಾಯಿಲೆಗ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರುವುದನ್ನು ತಡೆಯಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಎಲ್ಲಾ ರೀತಿಯ ಸೌಲಭ್ಯಗಳು ಪಿ.ಹೆಚ್.ಸಿ ಗಳಲ್ಲೇ ದೊರೆಯುವಂತೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯ ಕೊಪ್ಪ, ಎನ್.ಆರ್ ಪುರ, ಶೃಂಗೇರಿ, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರ್‍ಯಾಪಿಡ್ ಆಕ್ಷನ್ ಪೋರ್‍ಸ್ (ವಿಚಕ್ಷಣ ತಂಡವನ್ನು) ರಚಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಕೂಡಲೇ ಸ್ಪಂದನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ ಆಸ್ಪತ್ರೆ ಕಟ್ಟಡಗಳಿಗೆ ಹಾನಿಯಾದರೆ ಅವುಗಳ ನೆರವಿಗೆ ಧಾವಿಸಲಾಗುವುದು ಮತ್ತು ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.

ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ. ಹಾವುಕಡಿತ, ನಾಯಿಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಎಲ್ಲಾ ಸಾಂಕ್ರಾಮಿಕ ಕಾಯಿಲೆಗಳ ಹತೋಟಿಗೆ ಸಂಬಂಧಿಸಿದ ಔಷಧಿಗಳ ದಾಸ್ತಾನು ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೆಲವು ಆಸ್ಪತ್ರೆಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ದುರಸ್ಥಿಪಡಿಸಲು ಸರ್ಕಾರಕ್ಕೆ ವಿಶೇಷ ಅನುದಾನ ನೀಡುವಂತೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದ ಅವರು ಮಲೆನಾಡು ಭಾಗದಲ್ಲಿ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ವೈದ್ಯರು ಹೋಗುತ್ತಿಲ್ಲ ಎಂಬ ಬಗ್ಗೆ ಬಂದ ಸಾರ್ವಜನಿಕರ ದೂರಿನ ಕುರಿತು ಗಮನ ಸೆಳೆದಾಗ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಈ ರೀತಿ ಆಗದು, ಪರಿಶೀಲಿಸಿ ಸಧ್ಯದಲ್ಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಅತಿ ಹೆಚ್ಚು ಮಳೆಯಿಂದಾಗಿ ಪ್ರಕೃತಿ ವಿಕೋಪವಾದ ಕೂಡಲೇ ಸ್ಪಂದಿಸಲಾಗುವುದು ಅದಕ್ಕಾಗಿ ೨೧ ಅಂಬುಲೆನ್ಸ್, ಮತ್ತಿತರ ಸೌಲಭ್ಯಗಳನ್ನು ಸಿದ್ದತೆ ಮಾಡಿಕೊಂಡಿರುವ ವರದಿಯನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅನುಸರಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಮೇಶ್ ಉಪಸ್ಥಿತರಿದ್ದರು.

Upgradation of PHC to prevent crowding of district hospital

About Author

Leave a Reply

Your email address will not be published. Required fields are marked *

You may have missed