September 19, 2024

ರೈತರು ಹಲಸು ಬೆಳೆಯನ್ನು ಉಪಬೆಳೆಯಾಗಿ ಪರಿಗಣಿಸಬೇಕು

0
Halasi Mela - 2023

Halasi Mela - 2023

ಚಿಕ್ಕಮಗಳೂರು: ರೈತರು ಹಲಸು ಬೆಳೆಯನ್ನು ಉಪಬೆಳೆಯಾಗಿ ಪರಿಗಣಿಸಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ-ಹೊಸ ವಿವಿಧ ಬಗೆಯ ಹಲಸು ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುವಂತೆ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಅವರು ಶನಿವಾರ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ವಿಸ್ತರಣಾ ನಿರ್ದೇಶನಾಲಯ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಹಾಗೂ ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಪ್ ಕಾಮ್ಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೆನರಾ ಬ್ಯಾಂಕ್, ಪ್ರಾದೇಶಿಕ ಕಛೇರಿ ಚಿಕ್ಕಮಗಳೂರು ಹಾಗೂ ಹಲಸು ಬೆಳೆಗಾರರ ಸಂಘ ಸಖರಾಯಪಟ್ಟಣ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹಲಸಿನ ಮೇಳ – ೨೦೨೩ಯನ್ನು ಉದ್ಘಾಟಿಸಿ ಮಾತನಾಡಿದರು.

ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ತುಂಬಾ ಜಾಗ ತೆಗೆದುಕೊಳ್ಳುತ್ತದೆ ಎಂಬಿತ್ಯಾದಿ ಕಾರಣಗಳಿಂದ ಇತ್ತೀಚೆಗೆ ಹಲಸು ಬೆಳೆಯುವ ಬೆಳೆಗಾರರು ಕಡಿಮೆಯಾಗುತ್ತಿದ್ದಾರೆ, ತೋಟಗಾರಿಕೆ ಇಲಾಖೆ ಈ ಬಗ್ಗೆ ಹಲಸು ಬೆಳೆಯಲು ರೈತರಿಗೆ ಮನವರಿಕೆ ಮಾಡಿದಾಗ ಮಾತ್ರ ಹಲಸು ವಾಣಿಜ್ಯ ಬೆಳೆಯಾಗುತ್ತದೆ ಎಂಬ ಭಾವನೆ ರೈತರಲ್ಲಿ ಮೂಡುತ್ತದೆ ಎಂದು ಸಲಹೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಶೋಧನಾ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯಕ್ ಮಾತನಾಡಿ ಆರು ಸಾವಿರ ವರ್ಷಗಳ ಇತಿಹಾಸ ಇರುವ ಹಲಸನ್ನು ಬೆಳೆಯುತ್ತ ಬಂದಿದ್ದೇವೆ, ಹಿಂದೆ ತೋಟಗಳಲ್ಲಿ ನೆರಳಿಗೆ, ಬಂಜರು ಭೂಮಿಯಲ್ಲಿ ಗಾಳಿ ತಡೆಗೆ ಬೆಳೆಯುತ್ತಿದ್ದ ಹಲಸು ಈಗ ರಾಜ ಎಂಬ ಸ್ಥಾನವನ್ನು ಪಡೆದುಕೊಂಡಿತು, ಪ್ರಪಂಚದಲ್ಲಿಯೇ ಒಳ್ಳೆಯ ಹೆಸರು ಪಡೆದಿದೆ ಎಂದು ಶ್ಲಾಘಿಸಿದರು.

ಹಾಪ್ ಕಾಮ್ಸ್ ಅಧ್ಯಕ್ಷ ಮತ್ತು ಪ್ರಶಸ್ತಿ ವಿಜೇತ ಕುಮಾರಸ್ವಾಮಿ ಮಾತನಾಡಿ ಯಾವುದೇ ಹಣ್ಣನ್ನು ಹೊಟ್ಟೆ ತುಂಬ ತಿನ್ನಲು ಸಾಧ್ಯವಿಲ್ಲ ಆದರೆ ಹಲಸಿನ ಹಣ್ಣನ್ನು ಹಸಿವಾದಾಗ ಹೊಟ್ಟೆ ತುಂಬ ತಿನ್ನಬಹುದು, ಸಮೃದ್ಧವಾದ ಪ್ರೋಟೀನ್‌ಯುಕ್ತ ಹಣ್ಣು ಹಲಸು ಎಂದ ಅವರು ದೇವಿ ಹಲಸು, ಸಿದ್ಧ ಹಲಸು, ಚಂದ್ರ ಹಲಸು, ಹೀಗೆ ನಾನಾ ಬಗೆಯ ಹಲಸಿನ ಹಣ್ಣು ಇದ್ದು, ತರಕಾರಿಗಾಗಿ, ಮರಮುಟ್ಟು ತಯಾರಿಸಲು ಹೆಬ್ಬ ಹಲಸು ಬೆಳೆಯುತ್ತಿದ್ದಾರೆ, ಆದರೆ ಇತ್ತೀಚೆಗೆ ಅಡಿಕೆ ಬೆಳೆ ಸುನಾಮಿ ರೀತಿ ಭೂಮಿಯನ್ನು ಆವರಿಸುತ್ತಿದೆ ಎಂದು ವಿಷಾಧಿಸಿದರು.

ಹಿರಿಯ ವಿಜ್ಞಾನಿ ಡಾ. ಬಿ.ಟಿ.ಕೃಷ್ಣಮೂರ್ತಿ ಮಾತನಾಡಿ ಎಲ್ಲಾ ಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದ್ದು, ತಲೆ ಮಾರುಗಳಿಂದ ಕಾಡಿನಲ್ಲಿ ಬೆಳೆಯುತ್ತಿದ್ದ ಹಣ್ಣು ಹಲಸಿನಹಣ್ಣು, ಕಾಡಿನಿಂದ ತಂದು ತಿನ್ನುತ್ತಿದ್ದ ಪದ್ಧತಿಯೊಂದಿತ್ತು ನಂತರ ತೋಟಗಳಲ್ಲಿ ಮತ್ತು ಬದುಗಳಲ್ಲಿ ಒಂದೆರಡು ಮರಗಳು ಕಾಣಿಸತೊಡಗಿತ್ತು ನಂತರ ರೈತರು ಮುಖ್ಯ ಬೆಳೆಯನ್ನಾಗಿ ಬೆಳೆಯಲು ಪ್ರಾರಂಭಿಸಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ವಿಸ್ತರಣಾ ನಿರ್ದೇಶಕಾ ಡಾ. ಕೆ.ಟಿ. ಗುರುಮೂರ್ತಿ ವಹಿಸಿದ್ದರು, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಮೂಡಿಗೆರೆ ತೋಟಗಾರಿಕೆ ಇಲಾಖೆಯ ನಾರಾಯಣ್.ಎಸ್ ಮಾವರ್ಕರ್, ಡಾ. ಎಂ.ಶಿವಪ್ರಸಾದ್, ಕೆ.ಯತೀರಾಜ್, ಕೆ.ತಿಮ್ಮಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮಲಮ್ಮ, ಕಾಂತರಾಜು, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

Halasi Mela – 2023

About Author

Leave a Reply

Your email address will not be published. Required fields are marked *

You may have missed