September 19, 2024

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರವಾಸಿಗರ ಹುಚ್ಚಾಟ

0
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರವಾಸಿಗರ ಹುಚ್ಚಾಟ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರುಎಕ್ಸ್‌ಪ್ರೆಸ್:  ಮುಂಗಾರಿನಲ್ಲಿ ಸರಣಿ ಜಲಪಾತಗಳ ಸ್ವರ್ಗವೇ ಸೃಷ್ಠಿಯಾಗುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪುಂಡರ ಹಾವಳಿ ಪದೇ ಪದೇ ಮರುಕಳಿಸುತ್ತಿದ್ದು, ಇತರೆ ಪ್ರವಾಸಿಗರು ಕಿರಿ ಕಿರಿ ಅನುಭವಿಸುವಂತಾಗಿದೆ.

ಕಳೆದ ವಾರಾಂತ್ಯದ ಘಾಟಿ ರಸ್ತೆಯ ಮೂರ್‍ನಾಲ್ಕು ಕಡೆಗಳಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಯುವಕರ ಗುಂಪು ಕೇಕೆ ಹಾಕುತ್ತ ಕುಣಿದು ಹುಚ್ಚಾಟ ಮೆರೆದಿದ್ದಾರೆ. ಈ ಪುಂಡಾಟ ಕಂಡು ಘಾಟಿಯ ರಮಣೀಯತೆಯನ್ನು ಸವಿಯಲು ಕುಟುಂಬ ಸಮೇತ ಬಂದಿದ್ದ ಕೆಲವರು ಗಾಬರಿಗೊಂಡಿದ್ದಾರೆ. ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆಗೆ ಪಯಣಿಸುವ ಪ್ರವಾಸಿಗರು ಮತ್ತು ಸಾಮಾನ್ಯ ಜನರು ಇದರಿಂದ ಕಿರಿಕಿರಿ ಅನುಭವಿಸಿದ್ದಾರೆ.

ಘಾಟಿ ರಸ್ತೆಯು ಒಂದು ಭಾಗದಲ್ಲಿ ಮೈ ಮನಕ್ಕೆ ಮುದ ನೀಡುವ ಹಾಲ್ನೊರೆಯಂತಹ ಜಲಪಾತಗಳನ್ನು ಸೃಷ್ಠಿಸಿದರೆ ಮತ್ತೊಂದು ಬದಿಯಲ್ಲಿ ಅಷ್ಟೇ ಅಪಾಯಕಾರಿಯಾದ, ಸಾವಿರಾರು ಅಡಿ ಆಳದ ಪ್ರಪಾತವೂ ಇದೆ. ಜಲಪಾತದ ಸಿರಿ ಕಣ್ತುಂಬಿಕೊಳ್ಳುವ ನೆಪದಲ್ಲಿ ಬರುವ ಕೆಲವು ಪುಂಡ ಯುವಕರ ಗುಂಪು ಅಪಾಯವನ್ನೂ ಲೆಕ್ಕಿಸದೆ ಮೈಮರೆತು ಕುಣಿದು ಕುಪ್ಪಳಿಸುವ ಜೊತೆಗೆ ಜೋರಾಗಿ ಕೂಗುತ್ತಾ, ಕೇಕೆ ಹಾಕುತ್ತ ಸಭ್ಯತೆಯನ್ನು ಮೀರುತ್ತಿರುವುದರ ಬಗ್ಗೆ ಖಂಡನೆಯೂ ವ್ಯಕ್ತವಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಘಾಟಿ ರಸ್ತೆಯ ಅಲ್ಲಲ್ಲಿ ಯುವಕರು ಪುಂಡಾಟಿಕೆ ತೋರಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಬೀಟ್ ಹಾಕಲಾಗಿದೆ. ಆದರೂ ಅವರ ಕಣ್ಣು ತಪ್ಪಿಸಿ, ಅವರು ಇರುವಲ್ಲಿಂದ ಮತ್ತೊಂದು ಕಡೆಯಲ್ಲಿ ದುರ್ವರ್ತನೆ ತೋರುತ್ತಿದ್ದಾರೆ.

ಇವರಲ್ಲದೆ, ಹೊರ ಜಿಲ್ಲೆ, ರಾಜ್ಯಗಳಿಂದ ಬೈಕ್‌ಗಳಲ್ಲಿ ಪ್ರವಾಸ ಬರುವ ಕೆಲವು ಮಂದಿ ಸೈಲೆನ್ಸರ್‌ಗಳನ್ನು ಮಾರ್ಪಡಿಸಿ ಕರ್ಕಶ ಶಬ್ಧ ಮಾಡುವುದು, ಏಕಾ ಏಕಿ ಮತ್ತೊಂದು ವಾಹನದ ಪಕ್ಕದಲ್ಲಿ ಕಿವಿಗಡಚಿಕ್ಕುವ ರೀತಿ ಸೈಲೆನ್ಸರ್‌ನಿಂದ ಸದ್ದು ಮಾಡುವುದು ಇಲ್ಲಿ ಮಾಮೂಲಾಗಿದೆ. ಈ ರೀತಿ ಅನಿರೀಕ್ಷಿತ ಶಬ್ಧದಿಂದ ಬಹಳಷ್ಟು ವಾಹನ ಚಾಲಕರು ಗಲಿಬಿಲಿಗೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆ ಇಂತಹ ವರ್ತನೆ ತೋರುತ್ತಿರುವವರನ್ನು ಹಿಡಿದು ಕಾನೂನು ಕ್ರಮ ಜರುಗಿಸಬೇಕು. ಘಾಟಿಯಲ್ಲಿ ಇನ್ನಷ್ಟು ಗಸ್ತು ಬಲಪಡಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

Charmadi Ghati road is a tourist attraction

About Author

Leave a Reply

Your email address will not be published. Required fields are marked *

You may have missed