September 19, 2024

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಅಪರಾಧ

0
ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಅಡಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಅಡಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

ಚಿಕ್ಕಮಗಳೂರು: ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ , ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ (ಗುರುವಾರ) ನಡೆದ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಅಡಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಭ್ರೂಣ ಹತ್ಯೆ ಮಾಡುವವರ ಹಾಗೂ ಈ ಕೆಲಸಕ್ಕೆ ಸಹಾಯ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ತಂತ್ರಜ್ಞಾನ ಬಳಕೆ ನಿಯಂತ್ರಿಸಲು ಹಾಗೂ ದುರ್ಬಳಕೆಯನ್ನು ಹತ್ತಿಕ್ಕಲು ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಗರ್ಭ ಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರ (ಪಿ.ಸಿ ಅಂಡ್ ಪಿ.ಎನ್.ಡಿ.ಟಿ) ನಿಯಂತ್ರಿಸಲಾಗಿದೆ ಎಂದು ಹೇಳಿದರು.

ಲಿಂಗದ ಆಯ್ಕೆ ನಿಷೇಧಕ್ಕೆ ಸಾಂಸ್ಥಿಕ ತಾಂತ್ರಿಕತೆಗಳನ್ನು ರೂಪಿಸಲು ಹಾಗೂ ವರ್ಗೀಕರಣ ತಂತ್ರಗಳ ಬಳಕೆಯನ್ನು ನಿಯಂತ್ರಿಸಲು ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ ಅವರು ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಪ್ರಕಾರ ಮೊದಲ ಅಪರಾಧಕ್ಕೆ ೩ ವರ್ಷ ಜೈಲು ಶಿಕ್ಷೆ ಜೊತೆಗೆ ರೂ. ೫೦.೦೦೦ ದಂಡ, ಎರಡನೇ ಅಪರಾಧಕ್ಕೆ ೫ ವರ್ಷ ಜೈಲು ಶಿಕ್ಷೆ, ರೂ. ೧ ಲಕ್ಷ ದಂಡ ಹಾಗೂ ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲು ಅವಕಾಶ ಇದೆ. ಶಿಕ್ಷೆ ವೈದ್ಯರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರ ಗಂಡ, ಅತ್ತೆ, ಮಾವ ಹಾಗೂ ಅವರ ಸಂಬಂಧಿಕರೂ ಭ್ರೂಣಲಿಂಗ ಪತ್ತೆಗೆ ಪ್ರೋತ್ಸಾಹಿಸಿದರೆ ಅಂತಹವರೂ ಕೂಡ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಟ್ರಾಕಿಂಗ್ ಸಿಸ್ಟಂ ಆಳವಡಿಸಲಾಗಿದ್ದು, ಒಬ್ಬ ಮಹಿಳೆಯು ಗರ್ಭಿಣಿಯಾಗಿ ತಪಾಸಣೆಗೆ ಒಂದು ಇಲಾಖೆಯಿಂದ ತಾಯಿ ಕಾರ್ಡ್ ಪಡೆದ ದಿನದಿಂದ ಹೆರಿಗೆಯಾಗುವವರೆಗೆ ಇಲಾಖಾ ಸಿಬ್ಬಂದಿಗಳಾದ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಆರೋಗ್ಯ ಸಹಾಯಕಿಯರು ಆ ಮಹಿಳೆಯ ಮೇಲೆ ನಿಗಾ ವಹಿಸುತ್ತಾರೆ. ಇದರಿಂದ ಅನಧಿಕೃತ ಗರ್ಭಪಾತಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದ ಅವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಈವರೆಗೆ ಯಾವುದೇ ದೂರುಗಳು ಬಂದಿರುವುದಿಲ್ಲ.

ಆದರೂ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಯಮಿತವಾಗಿ ತಪಾಸಣೆ ನಡೆಸಿ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಡಾ. ಪದ್ಮಾವತಿ, ಡಾ. ರವಿಶಂಕರ್, ಡಾ. ಶಶಿಧರ್, ವಸಂತ ಸೋಮೇಗೌಡ, ರೀನಾ ಸುಜೇಂದ್ರ ಹಾಜರಿದ್ದರು.

Prenatal sex detection is a crime

About Author

Leave a Reply

Your email address will not be published. Required fields are marked *

You may have missed