September 19, 2024

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ

0
ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದು, ಕಾಫಿ ಬೆಳೆಗಾರರ ಸಭೆ

ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದು, ಕಾಫಿ ಬೆಳೆಗಾರರ ಸಭೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಉತ್ತಮ ಸೌಹಾರ್ಧ ಮೂಡಿಸಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದು, ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣದ ಜೊತೆಗೆ ಕಾಫಿಗೆ ಹಾಗೂ ಕಾಫಿ ಉದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುವ ಜೊತೆಗೆ ಕಾಫಿ ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ಮಾಡುವ ಸ್ಥಳೀಯ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು.

ಇತ್ತೀಚೆಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಫಿ ತೋಟದ ಮಾಲೀಕರುಗಳು ತಮ್ಮ ತಮ್ಮ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪೂರ್ವಪರ ತಿಳಿದುಕೊಳ್ಳುವುದು ಬಹಳ ಅವಶ್ಯಕ ಎಂದು ತಿಳಿಸಿದರು.

ಕಾರ್ಮಿಕರು ಕೆಲಸ ಮಾಡುವ ಅವರ ದೂರವಾಣಿ ಸಂಖ್ಯೆ, ಪೂರ್ಣ ವಿಳಾಸ, ಆಧಾರ್ ಕಾರ್ಡ್, ಭಾವಚಿತ್ರವಿರುವ ಇತರೆ ದಾಖಲಾತಿಗಳನ್ನು ಪಡೆಯುವುದು ಕಡ್ಡಾಯ ಮಾಡಬೇಕಾಗಿದೆ. ಇತ್ತೀಚೆಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವರು ಹಾಗೂ ದಲ್ಲಾಳಿಗಳು ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬರುತ್ತಿವೆ ಎಂದರು.

ಕಾಫಿ ತೋಟದ ಮಾಲೀಕರು ಕಾನೂನು ವ್ಯಾಪ್ತಿಯಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ ಕಾನೂನು ಜಾರಿ ಮಾಡುವ ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಆಯಾಯ ಸ್ಥಳೀಯ ಪೊಲೀಸರಿಗೆ ಸಹಕಾರ ನೀಡಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಾಗ ಸಂಬಂಧಪಟ್ಟ ಕಾರ್ಮಿಕ ಇಲಾಖೆ, ಕಾಫಿ ಬೋರ್ಡ್ ಅಥವಾ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಇತ್ತೀಚೆಗೆ ನಡೆದ ಕೆಲವು ಅಪರಾದ ಪ್ರಕರಣಗಳನ್ನು ಉಲ್ಲೇಖಿಸಿ, ಈಗಿನ ಪ್ರಕರಣಗಳು ನೂರು ರೂಪಾಯಿ, ಐದು ನೂರು ರೂಪಾಯಿಗಳಿಗೆ ಕೊಲೆ ಮಾಡುವ ಮನಸ್ಥಿತಿಯನ್ನು ಹೊಂದಿರುವ ಜನರ ಮಧ್ಯ ಮಾಲೀಕರು ಎಚ್ಚರ ವಹಿಸಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದರ ಜೊತೆ ಅವರ ದಾಖಲಾತಿಗಳನ್ನು ಸಂಗ್ರಹಿಸಿ ತಾವು ಇಟ್ಟುಕೊಳ್ಳಬಹುದು ಹಾಗೂ ಪೊಲೀಸ್ ಇಲಾಖೆಗೆ ನೀಡಬೇಕು ಎಂದರು.

ಅವರ ಚಲನವಲನಗಳ ಮೇಲೆ ನಿಗಾ ಇರಿಸಿ ಕ್ರಮಕೈಗೊಳ್ಳಲಾಗುವುದು ಹಾಗೂ ಎಲ್ಲಾ ಪೊಲೀಸ್ ಠಾಣೆಗಳ ಮಾಹಿತಿ ಬೀಟ್ ಪೊಲೀಸರ ಗಮನಕ್ಕೆ ತರುವಂತೆ ಕಾಫಿ ಬೆಳೆಗಾರರಿಗೆ ಸಲಹೆ ನೀಡಿದರು. ಅಪರಾಧ ಕೃತ್ಯ ಕಂಡು ಬಂದಲ್ಲಿ ಅಂತವರ ಮಾಹಿತಿ ಪೊಲೀಸರಿಗೆ ನೀಡಿದರೆ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ ಎಂದರು.

ಕಾಫಿಬೆಳೆಗಾರರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರ ಜೊತೆಗೆ ಕಾರ್ಮಿಕರು ಏನಾದರು ಸಮಸ್ಯೆಗಳು ಮಾಡಬಹುದು. ಆದ್ದರಿಂದ ಜಾಗೃತಿಯನ್ನು ಮೂಡಿಸಲು ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆಗೆ ಸಭೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಅದಕ್ಕೆ ಬೆಳೆಗಾರರು ಸ್ಪಂಧಿಸಿದರೆ ಆಗುವ ಅನಾಹುತಗಳನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು ಹಾಗೂ ಪೊಲೀಸ್ ಇಲಾಖೆಯಿಂದ ಆಗುವ ಕೆಲಸಗಳಿಗೆ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸಿ ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.

ಕಾಫಿ ಬೆಳೆಗಾರರು ಹಾಗೂ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಅವರ ಸಮಸ್ಯೆಗಳು ಹಾಗೂ ಕಾರ್ಮಿಕರ ಬಗ್ಗೆ ಮಲ್ಲಂದೂರಿನ ಉತ್ತಮ್, ಟಿ.ಒ. ಮಲ್ಲೇಶ್, ಮೂಡಿಗೆರೆಯ ಜಯರಾಂ, ಬಾಲಕೃಷ್ಣ, ವಸಂತೇಗೌಡ ಮತ್ತಿತರ ಸದಸ್ಯರುಗಳು ಖಾಯಂ ಕಾರ್ಮಿಕರು, ವಲಸೆ ಕಾರ್ಮಿಕರ, ಸಮಸ್ಯೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿ ಮಾತನಾಡಿದರು.

ಇತ್ತೀಚೆಗೆ ಕಾಫಿ ತೋಟಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ, ಪ್ರಕೃತಿ ಹಾಗೂ ಕಾರ್ಮಿಕರ ಸಮಸ್ಯೆ ಜೊತೆಗೆ ದಲ್ಲಾಳಿಗಳ ಆವಳಿಯಿಂದ ಕಾಫಿ ಬೆಳೆಗಾರರು ಹಾಗೂ ಅವಲಂಬಿ ಕುಟುಂಬ ಆತಂಕದಿಂದಲೇ ತೋಟಗಳನ್ನು ಉಳಿಸಿಕೊಳ್ಳವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಸ್ಥಳೀಯವಾಗಿ ಇಂತಹ ಕಾನೂನು ಸಮಸ್ಯೆಗಳ ಬಗ್ಗೆ ಜಾಗೃತಿ ಅರಿವು ಮೂಡಿಸಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಮಾಹಿತಿ ಅಧಿಕಾರಿ ಕೃಷ್ಣ ಕಿರಣ್, ಕಾರ್ಮಿಕ ಅಧಿಕಾರಿ ರವಿ, ಹಾಗೂ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕಾಫಿ ಬೆಳೆಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Public cooperation is necessary to maintain law and order in the district

About Author

Leave a Reply

Your email address will not be published. Required fields are marked *

You may have missed