September 20, 2024

ಶ್ರೀಘ್ರದಲ್ಲಿ  ವಾಣಿಜ್ಯ ಸಂಕೀರ್ಣಗಳು ವರ್ತಕರಿಗೆ ಮುಕ್ತ 

0
ವಾಣಿಜ್ಯ ಸಂಕೀರ್ಣ

ವಾಣಿಜ್ಯ ಸಂಕೀರ್ಣ

ಚಿಕ್ಕಮಗಳೂರು:  ನಗರದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣಗಳಲ್ಲಿ ಶೌಚಾಲಯ, ವಿದ್ಯುತ್ ಸಂಪರ್ಕ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ಕೂಡಲೇ ಎರಡೂ ವಾಣಿಜ್ಯ ಸಂಕೀರ್ಣಗಳು ವರ್ತಕರಿಗೆ ಮುಕ್ತ ಮಾಡಿಕೊಡಲಾಗುವುದು ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ಭೇಟಿ ಮಾಡಿದ ಪತ್ರಕರ್ತರಿಗೆ ಮಾಹಿತಿ ನೀಡಿ ಈಗಾಗಲೇ ದರಪಟ್ಟಿಯನ್ನು ಜಿಲ್ಲಾಕಾರಿಗಳ ಅನುಮೋದನೆಗೆ ಕಳುಹಿಸಿದ್ದು ಬಂದ ಕೂಡಲೇ ಟೆಂಡರ್ ಕರೆಯಲಾಗುವುದು ಎಂದರು.

ಇನ್ನು ೧೫ ದಿನದಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇದಲ್ಲದೆ ಹಿಂದೂ ಮುಸಾಫಿರ್‌ಖಾನೆ ಜಾಗ ಮತ್ತು ಹೆರಿಗೆ ಆಸ್ಪತ್ರೆ ಮುಂಭಾಗದ ಜಾಗದಲ್ಲೂ ನಗರಸಭೆಯಿಂದ ಮಳಿಗೆ ನಿರ್ಮಿಸಿ ಹೂ, ಹಣ್ಣು ಮತ್ತಿತರೆ ವರ್ತಕರಿಗೆ ಬಾಡಿಗೆ ನೀಡಲಾಗುವುದು. ಈ ಸಂಬಂಧ ಈಗಾಗಲೇ ಡಿಪಿಆರ್ ತಯಾರಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ನಗರಸಭೆಗೆ ಹೆಚ್ಚು ಆದಾಯ ತಂದುಕೊಡಬೇಕಿದ್ದ ನೂತನವಾಗಿ ನಿರ್ಮಿಸಿರುವ ನಗರಸಭೆ ಮಳಿಗೆಗೆಳು ಉದ್ಘಾಟನೆಯಾದರೂ ಬಾಡಿಗೆ ನೀಡಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. ನಗರದ ವಿವಿಧೆಡೆ ಇರುವ ನಗರಸಭೆ ಖಾಲಿ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಅದರಂತೆ ೩.೫೦ ಕೋಟಿ ರೂ ವೆಚ್ಚದಲ್ಲಿ ದಂಟರಮಕ್ಕಿ ಕತ್ರಿಮಾರಮ್ಮ ದೇವಸ್ಥಾನದ ಸಮೀಪ ಡಾ.ಬಿ.ಆರ್.ಅಂಬೇಡ್ಕರ್ ವಾಣಿಜ್ಯ ಸಂಕೀರ್ಣವನ್ನು ೩.೨೫ ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ೩೨ ವಾಣಿಜ್ಯ ಮಳಿಗೆ ನಿರ್ಮಿಸಿದೆ.

ಎಂಜಿ ರಸ್ತೆಯ ಹಳೆ ತರಕಾರಿ ಮಾರುಕಟ್ಟೆಯಲ್ಲಿ ೩.೫೦ ಕೋಟಿ ರೂ.ವೆಚ್ಚದಲ್ಲಿ ಅಟಲ್‌ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು ಅಲ್ಲಿಯೂ ೨೨ ಮಳಿಗೆ ನಿರ್ಮಿಸಲಾಗಿದೆ. ಈ ಎರಡೂ ವಾಣಿಜ್ಯ ಸಂಕೀರ್ಣಗಳನ್ನು ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದರೆ ಫೆಬ್ರವರಿಯಲ್ಲಿ ಶಾಸಕ ಸಿ.ಟಿ.ರವಿ ಉದ್ಘಾಟಿಸಿದ್ದಾರೆ. ಆದರೆ ಈವರೆಗೂ ಮಳಿಗೆಗಳು ಮಾತ್ರ ವರ್ತಕರಿಗೆ ದೊರೆತಿಲ್ಲ. ನಗರಸಭೆ ಆದಾಯ ಖೋತಾ ಆಗುತ್ತಿದೆ.

ಇಲ್ಲಿಯವರೆಗೆ ಎರಡೂ ವಾಣಿಜ್ಯ ಸಂಕೀರ್ಣ ಮಳಿಗೆಗೆಳ ದರಪಟ್ಟಿಯನ್ನೇ ನಿಗಧಿ ಮಾಡಿಲ್ಲ. ಇತ್ತೀಚೆಗೆ ದರಪಟ್ಟಿ ತಯಾರಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿ ಬಳಿ ಕಳುಹಿಸಲಾಗಿದೆ. ಎಂಜಿ ರಸ್ತೆಯ ವಾಜಪೇಯಿ ಸಂಕೀರ್ಣಕ್ಕೆ ಇನ್ನೂ ವಿದ್ಯುತ್ ಸೌಲಭ್ಯ ನೀಡಿಲ್ಲ. ಜತೆಗೆ ಮೇಲಂತಸ್ತಿನ ೫ ಮಳಿಗೆಗಳ ಕಾಮಗಾರಿ ಅನುದಾನದ ಕೊರತೆಯಿಂದ ನೆನಗುದಿಗೆ ಬಿದ್ದಿದೆ.

ಎರಡೂ ವಾಣಿಜ್ಯ ಸಂಕೀರ್ಣಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಳ ಭಾಗದ ನೆಲಮಹಡಿಯಲ್ಲಿ ಕಾಂಕ್ರಿಟ್ ಅಥವಾ ಡಾಂಬರ್ ಹಾಕಿ ವಾಹನ ಪಾರ್ಕಿಂಗ್ ಕಾಮಗಾರಿ ಬಾಕಿ ಉಳಿದಿದೆ. ಹೀಗಾಗಿ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಾಗಿ ಅನೇಕ ತಿಂಗಳು ಕಳೆದಿದ್ದರು ಇನ್ನೂ ವರ್ತಕರಿಗೆ ಲಭ್ಯವಾಗಿಲ್ಲ. ಈ ಎರಡೂ ಸಂಕೀರ್ಣಗಳಿಂದ ನಗರಸಭೆಗೆ ಮಾಸಿಕ ೧೫-೨೦ ಲಕ್ಷ ರೂ ಬಾಡಿಗೆ ನಿರೀಕ್ಷಿಸಿದ್ದು ಅಷ್ಟೂ ಹಣ ಈಗ ನಷ್ಟವಾಗುತ್ತಿದೆ.

ವಾಜಪೇಯಿ ಸಂಕೀರ್ಣದ ಜಾಗದಲ್ಲಿ ಈ ಹಿಂದೆ ಮಳಿಗೆ ಹೊಂದಿದ್ದ ೬ ಮಂದಿ ವರ್ತಕರಿಗೆ ೬ ಮಳಿಗೆ ಮೀಸಲಿಟ್ಟು ಉಳಿದ ಎಲ್ಲ ಮಳಿಗೆಗಳನ್ನು ಹರಾಜು ಮೂಲಕ ನೀಡಲಾಗುವುದು. ಡಾ.ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲೂ ಎಸ್ಸಿ, ಎಸ್ಟಿಗೆ ಶೇ.೨೪.೫ ರಷ್ಟು ಪ್ರಮಾಣದ ಮಳಿಗೆಗಳನ್ನು ಮೀಸಲಿಟ್ಟು ಹರಾಜು ಕರೆಯಬೇಕಿದೆ.

ಮಳಿಗೆ ಪಡೆಯಲು ತುದಿಗಾಲಲಿದ್ದು ನಗರಸಭೆ ಮಾತ್ರ ಹಲವು ತಾಂತ್ರಿಕ ಸಬೂಬು ಹೇಳುತ್ತಾ ಕಾಮಗಾರಿ ಪೂರ್ಣಕ್ಕೂ ಮುನ್ನವೇ ಉದ್ಘಾಟಿಸಿ ಈಗ ಮತ್ತೆ ಕೆಲಸ ಆರಂಭಿಸಿರುವುದು ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ. ಒಟ್ಟಾರೆ ಅಮೃತ್ ಯೋಜನೆ ಸೇರಿ ಕಾಮಗಾರಿಗೂ ಮುನ್ನವೇ ತರಾತುರಿಯಲ್ಲಿ ಉದ್ಘಾಟಿಸಿದ ಅನೇಕ ನಗರದ ಕಾಮಗಾರಿಗಳು ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿರುವುದು ವಿಪರ್ಯಾಸವಾಗಿದೆ.

Commercial complexes in Srighra are open to traders

About Author

Leave a Reply

Your email address will not be published. Required fields are marked *