September 19, 2024
ವಿದುಷಿ ರೇವತಿ ಕಾಮತ್ ಅವರ ವೀಣಾ ವಾದನ

ವಿದುಷಿ ರೇವತಿ ಕಾಮತ್ ಅವರ ವೀಣಾ ವಾದನ

ಚಿಕ್ಕಮಗಳೂರು: ಬ್ರಾಹ್ಮಣ ಮಹಾಸಭಾ, ಸುಗಮ ಸಂಗೀತ ಗಂಗಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆದ ವಿದುಷಿ ರೇವತಿ ಕಾಮತ್ ಅವರ ವೀಣಾ ವಾದನ ಕೇಳುಗರ ಮನ ಗೆದ್ದಿತು.

ಶ್ರಾವಣ ವೀಣಾ ಕಾರ್ಯಕ್ರಮದಡಿ ಕನಕಾಂಗಿ ರಾಗದ ವರ್ಣದಿಂದ ವೀಣಾವಾದನ ವನ್ನು ಆರಂಭಿಸಿದ ರೇವತಿ ಕಾಮತ್ ಹಂಸಧ್ವನಿ ರಾಗದ ನಮ್ಮಮ್ಮ ಶಾರದೆ, ಗೌಳಿ ರಾಗದ ಅಣ್ಣಮ್ಮಾಚಾರ್ಯರ ಶ್ರೀಮನ್ನಾರಾಯಣ, ಕಮಲ ಮನೋಹರಿ ರಾಗದ ಕಂಜದಳಾಯತಾಕ್ಷಿ, ಹಂಸನಾದ ರಾಗದ ಬಂತು ಕೋಲು, ಹಿಂದೋಳದಲ್ಲಿ ಸಾಮಜವರಗಮನ, ಯಮನ್ ರಾಗದಲ್ಲಿ ಕೃಷ್ಣ ನೀ ಬೇಗನೆ ಬಾರೋ, ಸಿಂಹೇಂದ್ರ ಮಧ್ಯಮದಲ್ಲಿ ಸಿದ್ಧಿ ವಿನಾಯಕಂ ಅನಿಶಂ, ಅಣ್ಣಮಾಚಾರ್ಯರ ಬ್ರಹ್ಮಒಕಟೆ, ಪರಬ್ರಹ್ಮ ಒಕಟೆ, ಮಧ್ಯಮಾವತಿಯಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಗಳನ್ನು ಮನೋಹರವಾಗಿ ಪ್ರಸ್ತುತಪಡಿಸುವ ಮೂಲಕ ಸಭಿಕರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟರು.

ಕಚೇರಿಯುದ್ಧಕ್ಕೂ ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳು, ತ್ಯಾಗರಾಜರು ಮತ್ತು ದಾಸ ಶ್ರೇಷ್ಠರ ಕೃತಿಗಳು ವೀಣಾ ವಾದನದಲ್ಲಿ ಮೂಡಿಬಂದು ಶೋತ್ರುಗಳನ್ನು ಭಾವ ಪರವಶಗೊಳಿಸಿದವು.

ಮೃದಂಗದಲ್ಲಿ ವಿದ್ವಾನ್ ಎಂ.ಕೆ.ಶ್ರೀನಿಧಿ, ವಯನ್‌ನಲ್ಲಿ ವಿದ್ವಾನ್ ನಟರಾಜ್, ಘಟಂನಲ್ಲಿ ವಿದ್ವಾನ್ ಧೀಮಂತ ಭಟ್, ಕಂಜರದಲ್ಲಿ ವಿದ್ವಾನ್ ಭಾನುಪ್ರಕಾಶ್ ಅತ್ಯುತ್ತಮ ಸಾಥ್ ನೀಡಿದರು.
ಬ್ರಾಹ್ಮಣ ಮಹಾಸಭಾ, ಸುಗಮ ಸಂಗೀತ ಗಂಗಾ, ಸಾಂಸ್ಕೃತಿಕ ಸಂಘ, ಕಲ್ಕಟ್ಟೆ ಪುಸ್ತಕದ ಮನೆ ಮತ್ತು ಪಾವನಿ ವೀಣಾ ಶಾಲೆ ವತಿಯಿಂದ ವಿದುಷಿ ರೇವತಿ ಕಾಮತ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪಾವನಿ ವೀಣಾ ಶಾಲೆಯ ವ್ಯವಸ್ಥಾಪಕಿ ವಿದುಷಿ ಮಾಲಿನಿ ರಮೇಶ್ ರೇವತಿ ಕಾಮತ್ ಅವರನ್ನು ಸಭೆಗೆ ಪರಿಚಯಿಸಿದರು.

ಇತ್ತೀಚೆಗೆ ನಿಧನರಾದ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಎಸ್.ಗಿರಿಧರ್ ಯತೀಶ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಶಿ, ಕಾರ್ಯದರ್ಶಿ ಅಶ್ವಿನ್, ನಿರ್ದೇಶಕಿ ಶಾಂತಕುಮಾರಿ, ಗೋಪಾಲಕೃಷ್ಣ, ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷ ಆನಂದ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ, ಶಂಕರನಾರಾಯ ಣ ಭಟ್, ಬೆಳವಾಡಿ ಮಂಜುನಾಥ್, ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಕಲ್ಕಟ್ಟೆ ಪುಸ್ತಕದ ಮನೆಯ ನಾಗರಾಜರಾವ್ ಕಲ್ಕಟ್ಟೆ ಉಪಸ್ಥಿತರಿ ದ್ದರು.

 

Veena playing that won the hearts of the listeners

 

 

About Author

Leave a Reply

Your email address will not be published. Required fields are marked *

You may have missed