September 19, 2024

ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೇರಬೇಕು

0
ಕುವೆಂಪು ಕಲಾ ಮಂದಿರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ

ಕುವೆಂಪು ಕಲಾ ಮಂದಿರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ

ಚಿಕ್ಕಮಗಳೂರು: ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೇರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನಲ್ಲಿ ಬಿಬಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾದ್ಯತೆ ಇದೆ. ಮುಂದೆ ಅದಕ್ಕೆ ಅಗತ್ಯವಿರುವ ಎಲ್ಲಾ ಸೌಲತ್ತುಗಳನ್ನು ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಾಲೇಜಿನಲ್ಲಿ ಗ್ರಾಮೀಣ ಭಾಗದ ರೈತಾಪಿ ಮಕ್ಕಳೇ ಹೆಚ್ಚು ಕಲಿಯುತ್ತಿದ್ದಾರೆ. ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತೇವೆ. ಈ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಇಟ್ಟಿದ್ದೇವೆ. ೨೪ ಕೊಠಡಿಗಳಿರುವ ೧೫ ಕೋಟಿ ರೂ. ವೆಚ್ಚದ ಕಟ್ಟಡ ಡಯಟ್ ಆವರಣದಲ್ಲಿ ನಿರ್ಮಿಸುವ ಯೋಜನೆ ಇದೆ. ಸರ್ಕಾರ ಇದೀಗ ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಇದರಿಂದ ಹೆಚ್ಚು ಮಹಿಳೆಯರಿಗೆ ಉಪಯೋಗವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ೮ ತಿಂಗಳು ಹೊಸ ಯೋಜನೆಗೆ ಮಂಜೂರಾತಿ ಸಿಗುವುದು ಕಷ್ಟವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಒಂದು ಕಾಲದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸವೇ ಬಹಳ ಕಷ್ಟವಿತ್ತು. ಈಗಿನ ಮಕ್ಕಳು ಪುಣ್ಯವಂತರಿದ್ದಾರೆ. ಇಂದಿನ ಮಕ್ಕಳಿಗೆ ಸಿಕ್ಕ ಅವಕಾಶ ಅವರ ತಾಯಿ, ಅಜ್ಜಿಯಂದರಿಗೆ ಸಿಕ್ಕಿಲ್ಲ. ಪ್ರೈಮರಿ ಶಾಲೆ, ಪ್ರೌಢಶಾಲೆ ಕಲಿತ ನಂತರ ಪೋಷಕರು ಬೇರೆ ಬೇರೆ ಕಾರಣಕ್ಕೆ ವಿದ್ಯಾಬ್ಯಾಸ ಮೊಟಕುಗೊಳಿಸುತ್ತಿದ್ದ ಕಾಲವೊಂದಿತ್ತು. ಆದರೆ ಈಗಿನ ಹೆಣ್ಣು ಮಕ್ಕಳು ಚೆನ್ನಾಗಿ ಕಲಿತು ವಿದ್ಯಾವಂತರಾಗಬೇಕು. ಅವರು ಬದುಕಿನಲ್ಲಿ ಮುಂದೆ ಬರಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿನಿಯರು ಶ್ರದ್ಧೆಯಿಂದ ಕಲಿತು ಉನ್ನತ ಸ್ಥಾನಕ್ಕೇರಬೇಕು ಎಂದರು.

ಈ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿನಿಯರು ಪಠ್ಯೇತರ ಶೈಕ್ಷಣಿಕ ಚಟುವಟಿಕೆಗಳಲ್ಲೂ ಕೌಶಲ್ಯತೆ ಹೊಂದಿರುವುದನ್ನು ಗಮನಿಸಿದ್ದೇನೆ. ಉಪನ್ಯಾಸಕರುಗಳು ಸಹ ಅವರ ವಿದ್ಯಾಭ್ಯಾಸ ಮತ್ತು ಬೇರೆ ಬೇರೆ ಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಉತ್ತೇಜನ ನೀಡುವ ಕೆಲಸ ಆಗಬೇಕು ಎಂದರು.

ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ವಿಷಯ ಬೋಧಕರು ಕೊರತೆ ಇದ್ದರೂ ಸರ್ಕಾರ ಅತಿಥಿ ಉಮನ್ಯಾಸಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಆಗದ ರೀತಿ ಗಮನ ಹರಿಸಿದೆ. ಈ ಕಾರಣಕ್ಕೆ ಇಲ್ಲಿನ ಫಲಿತಾಂಶವೂ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರನ್ನು ಅಭಿನಂದಿಸುತ್ತೇವೆ ಎಂದರು.

ಬೇಲೂರು ರಸ್ತೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಜಿ.ವಿರೂಪಾಕ್ಷ ಸಮಾರೋಪ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ನಟೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಜಿ.ಮಹೇಶ್ವರಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ದೀಕ್ಷಿತ್ ಕುಮಾರ್, ಕ್ರೀಡಾ ವಿಭಾಗದ ಸಂಚಾಲಕ ಡಾ.ಲೋಕೇಶ್ ನಾಯಕ್, ಸಿ.ಎನ್.ಹೇಮಾಮಾಲಿನಿ, ಡಾ.ಕೆ.ಆರ್.ಶ್ರೀನಿವಾಸ್, ಎಂ.ಎನ್.ದೇವರಾಜು ಉಪಸ್ಥಿತರಿದ್ದರು.

Govt free education for girls

About Author

Leave a Reply

Your email address will not be published. Required fields are marked *

You may have missed