September 20, 2024

ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತದ ಸಂಸ್ಕಾರವನ್ನು ಕಲಿಸಬೇಕಿದೆ

0
Sumaga Sangeet singing program

Sumaga Sangeet singing program

ಚಿಕ್ಕಮಗಳೂರು: ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತದ ಸಂಸ್ಕಾರವನ್ನು ಕಲಿಸಬೇಕಿದೆ. ಈ ನಿಟ್ಟಿನಲ್ಲಿ ನಾದ ಚೈತನ್ಯ ಸೇರಿದಂತೆ ಇತರೆ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಾಹಿತ್ಯ ಪರಿಷತ್ತಿನ ಬೆಂಬಲ ಸದಾ ಇರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಅವರು ನಗರದ ಶಂಕರಮಠ ಸಭಾಂಗಣದಲ್ಲಿ ನಾದ ಚೈತನ್ಯ, ರಾಗರಂಜಿನಿ ಸಂಗೀತ ಶಾಲೆ, ಹಿರಣ್ಮಯಿ ಸಾಂಸ್ಕೃತಿಕ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಭಾವ ಶ್ರಾವಣ ವರ್ಷ ಋತುಗಾನ ಎಂಬ ಸುಮಗ ಸಂಗೀತ ಗಾಯನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪೋಷಕರು ಸಹ ತಮ್ಮ ಮಕ್ಕಳನ್ನು ಆದಷ್ಟು ಮೊಬೈಲ್, ಟಿವಿಗಳಿಂದ ದೂರವಿಟ್ಟು ಸಂಗೀತ, ಕಲೆ, ಸಾಹಿತ್ಯ ಕಾರ್ಯಕ್ರಮಗಳ ಕಡೆಗೆ ಪ್ರೇರೇಪಿಸಬೇಕು. ಪೋಷಕರು ಸಹ ಇಂತಹ ಅಭಿರುಚಿಯನ್ನೇ ಮಕ್ಕಳ ಮುಂದೆ ಅನುಸರಿಸಿದರೆ ಮಕ್ಕಳೂ ಅದನ್ನೇ ಕಲಿಯುತ್ತವೆ ಎಂದರು.

ಕಲೆ, ಸಾಹಿತ್ಯ, ಸಂಗೀತಗಳು ಪ್ರತಿ ವ್ಯಕ್ತಿಯ ಮನಸನ್ನು ಅರಳಿಸುತ್ತದೆ. ಶ್ರಾವಣದ ಸಂದರ್ಭದಲ್ಲಿ ಸಂಗೀತ ಕಛೇರಿಗಳನ್ನು ಏರ್ಪಡಿಸುವ ಮೂಲಕ ಸಂಗೀತ ಸುಧೆ ಹರಿಸುವ ಕಾರ್ಯಕ್ರಮಗಳು ಅನುಕರಣೀಯ. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಮನೆಯಂಗಳದಲ್ಲಿ ಶ್ರಾವಣ ಸಂಜೆ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಿದೆ. ಎಲ್ಲಾ ತಾಲ್ಲೂಕಿನ ಆಯ್ದ ಮನೆಗಳಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕಲಾಸಕ್ತರು ಮುಖಾಮುಖಿ ಆಗುವ ಮೂಲಕ ಸಂಗೀತ, ಸಾಹಿತ್ಯವನ್ನು ಆಸ್ವಾದಿಸಬಹುದು. ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವು ಸದಾ ಸತ್ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದರು.
ನಾದ ಚೈತನ್ಯದ ಅಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಚಾರಿಕ ಹಾಗೂ ಸಾಂಸ್ಕೃತಿಕವಾದ ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಪ್ರತಿ ಪೋಷಕರ ಮೇಲಿದೆ. ಆದರೆ ಪೋಷಕರೇ ಮೊಬೈಲ್‌ಗೆ ದಾಸರಾಗುತ್ತಿರುವುದರಿಂದ ಮಕ್ಕಳಿಗೂ ಅದನ್ನೇ ಕಲಿಸುತ್ತಿದ್ದೇವೆ ಎಂದು ವಿಷಾಧಿಸಿದರು.

ಎಲ್ಲಿಯ ವರೆಗೆ ವಿಜ್ಞಾನವನ್ನು ನಮ್ಮ ಹಿಡಿತಲ್ಲಿ ಹಿಡಿದಿಟ್ಟು ಕೊಂಡಿರುತ್ತೇವೆಯೋ ಅಲ್ಲಿ ವರೆಗೆ ಅದು ನಮ್ಮ ನಿಯಂತ್ರಣದಲ್ಲಿರುತ್ತದೆ. ಈ ಕಾರಣಕ್ಕೆ ಯಾವುದನ್ನು ಎಲ್ಲಿ, ಎಷ್ಟು ಬಳಸಬೇಕು ಅಷ್ಟನ್ನು ಮಾತ್ರ ಉಪಯೋಗಿಸುವುದನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ, ಕಲಾವಿದರಿಗೆ ಅವಕಾಶ ನೀಡುವುದು ನಮ್ಮ ಜವಾಬ್ದಾರಿ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ನಮ್ಮ ಜಿಲ್ಲೆಯಲ್ಲಿ ಅನುದಾನವನ್ನು ಬಳಸಿಕೊಳ್ಳುತ್ತಿರುವ ಸಂಘ-ಸಂಸ್ಥೆಗಳು ಬಹಳ ಕಡಿಮೆ ಇದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ಉದ್ದೇಶಕ್ಕೆ ಯಾವುದೇ ಹೊಸ ಸಂಸ್ಥೆಗಳು ಹುಟ್ಟಿಕೊಂಡಲ್ಲಿ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ನಾಗರೀಕ ವೇದಿಕೆ ಸಂಚಾಲಕ ಕುಬೇರ ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು. ಗಾಯಕರುಗಳಾದ ರೇಖಾ ಪ್ರೇಮ್ ಕುಮಾರ್, ಹಿರೇನಲ್ಲೂರು ಶ್ರೀನಿವಾಸ್, ರಂಜಿತಾ ಕೊಪ್ಪ, ರಮ್ಯಾ ರಾವ್, ಪ್ರಸನ್ನ ಲಕ್ಷ್ಮಿ, ವಾಸಂತಿ, ದಿವ್ಯ ಸುರೇಶ್ ಅವರುಗಳು ಸುಮಧುರ ಗಾಯನವನ್ನು ಪ್ರಸ್ತುತಪಡಿಸಿದರು.

Sumaga Sangeet singing program

 

About Author

Leave a Reply

Your email address will not be published. Required fields are marked *