September 20, 2024

ಹೆಣ್ಣು ಮಕ್ಕಳ ಹಬ್ಬ ನಾಗರ ಪಂಚಮಿ…

0
ಹೆಣ್ಣು ಮಕ್ಕಳ ಹಬ್ಬ ನಾಗರ ಪಂಚಮಿ...

ಹೆಣ್ಣು ಮಕ್ಕಳ ಹಬ್ಬ ನಾಗರ ಪಂಚಮಿ...

ನಾಗ ಪಂಚಮಿ ಮಹತ್ವ

ಹಿಂದುಗಳು ಆಚರಿಸುವ ಅನೇಕ ಹಬ್ಬ ಹರಿ ದಿನಗಳು ಸಾಮಾಜಿಕ, ಧಾರ್ಮಿಕ, ವೈಜ್ಞಾನಿಕ, ದೃಷ್ಟಿಕೋನದಿಂದ ಕೂಡಿರುತ್ತವೆ. ಅಂತಹ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡ ಒಂದು,
ಉತ್ತರ ಭಾರತದಲ್ಲಿ ಇದನ್ನು ಶಿವ ಮತ್ತು ನಾಗ ಪೂಜೆಯೆಂದು ಕಾವಡಿ ಎಂಬ ದೀಕ್ಷಾ ಪಡೆದ ಯುವಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾದಯಾತ್ರೆಗಳನ್ನು ಮಾಡುತ್ತಾ ಕಾಣಿಸುತ್ತಾರೆ. ಇವರು
ಶಿವ ಮತ್ತು ನಾಗನನ್ನು ಆರಾಧಿಸುತ್ತಾರೆ.

ಹೆಣ್ಣು ಮಕ್ಕಳು ಇಂದು ಉಪವಾಸ ಮಾಡುತ್ತಾರೆ

ಇದಕ್ಕೂ ಒಂದು ಪೌರಾಣಿಕ ಕಥೆ ಉಂಟು. ಈ ನಾಗರ ಪಂಚಮಿ ಹಬ್ಬ ವಿಶೇಷವಾಗಿ ಹೆಣ್ಣು ಮಕ್ಕಳು ಬಹಳ ಉತ್ಸಾಹದಿಂದ ಹೊಸ ವಸ್ತ್ರಗಳನ್ನು ಧರಿಸಿ ಕಲ್ಲಿನ ನಾಗದೇವರನ್ನು ಕ್ಷೀರದಿಂದ ಅಭಿಷೇಕ ಮಾಡುತ್ತಾರೆ.
ಬಹಳ ದಿನಗಳ ಹಿಂದೆ ಸತ್ಯಶ್ವರಿ ಎಂಬ ದೇವತೆ ಇದ್ದರಂತೆ, ಆ ದೇವತೆಯ ತಮ್ಮ ಸತ್ಯೇಶ್ವರ ಈತ ನಾಗರಪಂಚಮಿಯ ಒಂದು ದಿನ ಮೊದಲು ತೀರಿಕೊಂಡನಂತೆ, ಅದಕ್ಕಾಗಿ ಆ ದಿನ ಸತ್ಯಶ್ವರಿ ತಮ್ಮನ ಹೆಸರಿನ ಮೇಲೆ ಉಪವಾಸ ಆಚರಿಸಲು ಪ್ರಾರಂಭಿಸಿದಳಂತೆ, ಆಗ ತಮ್ಮ ನಾಗ ರುಪ ದಿಂದ ಅಕ್ಕನಿಗೆ ಪ್ರತ್ಯಕ್ಷನಾಗಿ ನಾನು ನಾಗರಪದಲ್ಲಿದ್ದೇನೆ ಎಂದು ಹೇಳಿದನಂತೆ, ಅದಕ್ಕಾಗಿ ಹೆಣ್ಣು ಮಕ್ಕಳು ಅಣ್ಣ ತಮ್ಮಂದಿರ ಕ್ಷೇಮ ಕೋರಿ ಕಲ್ಲಿನ ನಾಗಕ್ಕೆ ಕ್ಷೀರಭಿಷೇಕ ಮಾಡುವ ಸಾಂಪ್ರದಾಯ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.

ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ.

ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

ಹೆಣ್ಣುಮಕ್ಕಳ ಹಬ್ಬ:
ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

ಸಿಂಧೂ ಜನರಲ್ಲೂ ನಂಬಿಕೆಯಿತ್ತು:
ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕೃತಿಯ ಉತ್ಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.

ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕಷ್ಟೇ ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕøತಿಯುಳ್ಳ ಜನತೆ ನಾಗ ಪೂಜೆ ಮಾಡುತ್ತಿದ್ದರು. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸಲಾಗುತ್ತದೆ.

ಕ್ಷೀರಾಭಿಷೇಕ ಮಾಡೋದು ಯಾಕೆ?
“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.

ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.

ಸರ್ಪಯಜ್ಞವನ್ನು ನಿಲ್ಲಿಸಿದ ದಿನ:
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿದೆಯಂತೆ.

ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ. ಈ ಪೃಥ್ವಿ ಶೇಷನಾಗರ ಹೆಡಿಯ ಮೇಲೆ ನಿಂತಿದೆ ಎಂಬ ಪುರಾಣ ಕಥೆ ಬರುತ್ತದೆ. ಶೇಷನಾಗ ರಾಮಾವತಾರದಲ್ಲಿ ರಾಮನ ತಮ್ಮ ಲಕ್ಷ್ಮಣನಾಗಿ, ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನ ಅಣ್ಣ ಬಲರಾಮನಾಗಿ ಅವತರಿಸಿದ್ದರು ಎಂದು ಕಥೆ ಬರುತ್ತದೆ, ಈ ಎಲ್ಲ ಕಥೆಗಳು ನಾಗದೇವತೆಗೆ ಸಂಬಂಧ ಇದ್ದವು ಕಾರಣ ಈ ಹಬ್ಬಕ್ಕೆ ವಿಶೇಷ ಮಹತ್ವ.

Nagara Panchami the festival of girls…

About Author

Leave a Reply

Your email address will not be published. Required fields are marked *