September 20, 2024

ಸೆ.7ಕ್ಕೆ ಭಾರತ್ ಜೋಡೋ ವರ್ಷಾಚರಣೆಗೆ ಕಾಂಗ್ರೆಸ್ ಕರೆ

0
ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ

ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ ೦೭ ರ ಗುರುವಾರ ಸಂಜೆ ಚಿಕ್ಕಮಗಳೂರಿನಲ್ಲಿ ಪಾದಯಾತ್ರೆ ನಡೆಸುವುದರ ಮೂಲಕ ಆಚರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿಡುವ ಅವರು ಭಾರತವನ್ನು ಜೋಡಿಸುವ ಘೋಷಣೆಯೊಂದಿಗೆ ೨೦೨೨ ರ ಸೆಪ್ಟೆಂಬರ್ ೦೭ ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಅವರು ೧೩೬ ದಿನಗಳ ಕಾಲ ಕಾಶ್ಮೀರದವರೆಗೆ ೪೦೮೧ ಕಿ.ಮೀ ಕಾಲ್ನಡಿಗೆ ಮಾಡುವ ಮೂಲಕ ವಿಶ್ವ ದಾಖಲೆಯಾದರು. ಚಳಿ, ಮಳೆ, ಬಿಸಿಲುಗಳನ್ನು ಲೆಕ್ಕಿಸದೆ ದೇಶದ ಲಕ್ಷಾಂತರ ಜನರ ನಾಡಿ ಮಿಡಿತಗಳನ್ನು ಅರಿಯುವ ಮೂಲಕ ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾದರು ಎಂದಿದ್ದಾರೆ.

ಇಂತಹ ವಿಶ್ವ ದಾಖಲೆಯ ದಿನದಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ, ಮತ್ತೊಮ್ಮೆ ಈ ದೇಶದ ಜನರಿಗೆ ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷಿ ಭಾರತ್ ಜೋಡೋ ಪಾದಯಾತ್ರೆಯ ಮಹತ್ವವನ್ನು ತಿಳಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ

ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್ ಅವರ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ಸಂಜೆ ೫ ಗಂಟೆಗೆ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ಪಾದಯಾತ್ರೆಯು ಐ.ಜಿ.ರಸ್ತೆಯ ಮೂಲಕ ಪಾಲಿಟೆಕ್ನಿಕ್ ಕಾಲೇಜು, ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ ರಸ್ತೆ ಮೂಲಕ ಹಾಯ್ದು ಆಜಾದ್ ಪಾರ್ಕ್ ತಲುಪಲಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಿದ ಹಾಗೂ ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪುವ ಜಿಲ್ಲೆಯ ಜನರು ಕೂಡ ಕಾಂಗ್ರೆಸ್ ಪಕ್ಷದ ಈ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

Congress calls for Bharat Jodo year celebration on September 7

 

About Author

Leave a Reply

Your email address will not be published. Required fields are marked *