September 20, 2024

ಮೀಟರ್ ಬಡ್ಡಿಯ ಮಾಫಿಯಾದಿಂದ ಬೀದಿ ಬದಿ ವ್ಯಾಪಾರಸ್ಥರನ್ನು ರಕ್ಷಣೆ ಮಾಡಬೇಕು

0
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಬ್ಯಾಂಕ್‌ನಿಂದ ಸಾಲ ಪಡೆದ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಬ್ಯಾಂಕ್‌ನಿಂದ ಸಾಲ ಪಡೆದ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ

ಚಿಕ್ಕಮಗಳೂರು-: ಮೀಟರ್ ಬಡ್ಡಿಯ ಮಾಫಿಯಾದಿಂದ ಬೀದಿ ಬದಿ ವ್ಯಾಪಾರಸ್ಥರನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವನಿಧಿ ಯೋಜನೆಯಡಿ ತಾಲ್ಲೂಕಿನ ೧೬೬೨ ಮಂದಿ ಆರ್ಥಿಕ ನೆರವು ಪಡೆದಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು.

ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಬ್ಯಾಂಕ್‌ನಿಂದ ಸಾಲ ಪಡೆದ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.ಭಾರತೀಯರು ಸ್ವಾಲಂಭಿಯಾಗದೆ ಭಾರತ ಸ್ವಾವಲಂಬಿಯಾಗುವುದಿಲ್ಲ. ಭಾರತದಲ್ಲಿರುವ ಬಡವರಿಗೆ ಬಲ ಬರದೆ, ಭಾರತಕ್ಕೆ ಬಲ ಬರುವುದಿಲ್ಲ. ಬಡವರಿಗೆ ಸಾಮರ್ಥ್ಯ ಬಂದರೆ ಸಾಮರ್ಥ್ಯಶೀಲ ರಾಷ್ಟ್ರವಾಗುತ್ತದೆ ಈ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳಲ್ಲಿ ಪಿಎಂ ಸ್ವನಿಧಿ ಯೋಜನೆಯೂ ಒಂದಾಗಿದೆ ಎಂದರು.

ಆಟೋದಲ್ಲಿ ಕುಳಿತ ತಕ್ಷಣ ಮೀಟರ್ ಓಡಲು ಪ್ರಾರಂಭವಾದಂತೆ ಬಡ್ಡಿಯವರ ಬಳಿ ಸಾಲ ಪಡೆದ ಕೂಡಲೇ ಮೀಟರ್ ಓಡಲಾರಂಭಿಸುತ್ತದೆ. ಬ್ಯಾಂಕಿಂಗ್ ವ್ಯವಸ್ಥೆ ಪ್ರಬಲವಾಗಿಲ್ಲದ ಸಂದರ್ಭದಲ್ಲಿ ಜನರು ಮೀಟರ್ ಬಡ್ಡಿದಾರರ ಬಳಿ ಕೈಚಾಚುವ ಅನಿವಾರ್ಯತೆ ಇತ್ತು. ಇದನ್ನರಿತ ಪ್ರಧಾನ ಮಂತ್ರಿಗಳು ಬಡವರಿಗೆ ಶಕ್ತಿ ತುಂಬೇಕು ಎನ್ನುವ ಕಾರಣಕ್ಕೆ ಆಲೋಚಿಸಿ ಸ್ವನಿಧಿ ಯೋಜನೆ ತಂದಿದ್ದಾರೆ ಎಂದರು.

ಬಡವರು ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದರೆ ಶ್ಯೂರಿಟಿ ಕೇಳುತ್ತಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಡ್ಡಿಯವರ ಬಳಿ ಕೈಚಾಚಬೇಕಿತ್ತು. ಈಗ ಪಿಎಂ ಸ್ವನಿಧಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದೇವೆ ಎನ್ನುವ ದಾಖಲೆಗಳಿದ್ದರೆ ಸಾಕು, ಅದು ನಗರಸಭೆಯದ್ದಿರಬಹುದು, ವ್ಯಾಪಾರಸ್ತರ ಸಂಘಟನೆಯವರದ್ದಿರಬಹುದು ಒಂದು ದಾಖಲೆ ಇದ್ದರೆ ಅರ್ಜಿ ಹಾಕಿ ಪ್ರಾರಂಭದಲ್ಲಿ ೧೦ ಸಾವಿರ ರೂ. ಸಾಲ ಪಡೆಯಬಹದು ಅದಕ್ಕೆ ವರ್ಷಕ್ಕೆ ಕೇವಲ ೧೩೦೦ ರೂ. ಬಡ್ಡಿ ಕಟ್ಟಬೇಕಾಗುತ್ತದೆ. ಅದರಲ್ಲಿ ಪ್ರತಿಶತ ಶೇ.೭ ರಷ್ಟನ್ನು ಮತ್ತೆ ನಿಮ್ಮ ಖಾತೆಗೆ ಜಮೆ ಮಾಡುತ್ತದೆ. ನಂತರ ನಿಯಮಿತವಾಗಿ ಕಂತುಗಳನ್ನು ಸರಿಯಾಗಿ ಕಟ್ಟಿದರೆ ಬ್ಯಾಂಕ್‌ನಲ್ಲಿ ಕ್ರೆಡಿಟ್ ಸ್ಕೋರ್ ದಾಖಲಾಗುತ್ತದೆ. ಇದರಿಂದ ಮೊದಲ ಕಂತು ಸಾಲ ತೀರಿದ ನಂತರ ದುಪ್ಪಟ್ಟು ಸಾಲ ಸಿಗುತ್ತಾ ಹೋಗುತ್ತದೆ ಎಂದರು.

ಇದಲ್ಲದೆ ಯೋಜನೆ ಫಲಾನುಭವಿಗಳಿಗೆ ೧೨ ರೂ. ಕಟ್ಟಿದರೆ ಕುಟುಂಬಕ್ಕೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜುನೆಯಡಿ ೨ ಲಕ್ಷ ರೂ. ವರೆಗೆ ನೆರವು ಸಿಗಲಿದೆ ಎಂದು ಹೇಳಿದರು.

ಈ ವೇಳೆ ಹಲವು ಫಲಾನುಭವಿಗಳು ಅಭಿಪ್ರಾಯ ವ್ಯಕ್ತಪಡಿಸಿ ಪಿಎಂ ಸ್ವನಿಧಿ ಯೋಜನೆಯಿಂದ ದುಡಿಮೆಗೆ ಬಂಡವಾಳ ಸಿಕ್ಕಂತಾಗಿದೆ. ಬದುಕು ಹಸನಾಗಿದೆ ಎಂದು ಸಂತಸ ವ್ಯಕ್ಯಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರಾಧ್ಯಕ್ಷ ಮಧುಕುಮಾರ ರಾಜ್ ಅರಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಇತರರು ಇದ್ದರು.

Interaction with the beneficiaries at the district BJP office

 

About Author

Leave a Reply

Your email address will not be published. Required fields are marked *