September 20, 2024

ಕ್ರೀಡೆಯು ವೈಯಕ್ತಿಕ ಸಾಧನೆ ಜೊತೆಗೆ ಮನುಷ್ಯನಲ್ಲಿ ಛಲ ಮೂಡಿಸುವ ಆಯಾಮವೂ ಹೌದು

0
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಚಿಕ್ಕಮಗಳೂರು: ಕ್ರೀಡಾಪಟುಗಳಲ್ಲಿ ಉತ್ಸಾಹ ಕುಗ್ಗಬಾರದು. ಕ್ರೀಡೆಯು ವೈಯಕ್ತಿಕ ಸಾಧನೆ ಜೊತೆಗೆ ಮನುಷ್ಯನಲ್ಲಿ ಛಲ ಮೂಡಿಸುವ ಆಯಾಮವೂ ಹೌದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲಕೃಷ್ಣ ಅಭಿಪ್ರಾಯಿಸಿದರು.

ನಗರದ ಸುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗೆ ತುಂಬಾ ದೊಡ್ಡ ಶಕ್ತಿ ಇದೆ. ಒಂದು ಕಾಲದಲ್ಲಿ ಕ್ರೀಡೆಗೆ ಕ್ರಿಕೆಟ್ ತಾರೆಗಳೇ ರೋಲ್ ಮಾಡೆಲ್‌ಗಳಾಗಿದ್ದರು. ಆದರೆ ಇಂದಿನ ಯುವ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡಾ ಸಾಧಕರಿದ್ದಾರೆ ಎಂದರು.

ಸರ್ವಶ್ರೇಷ್ಠ ಸಾಧನೆ ಮಾಡಿದವರು ಮೇಲೆ ಬರುತ್ತಾರೆ. ಅಂತಹ ಅವಕಾಶವನ್ನು ಕ್ರೀಡೆಯು ಒದಗಿಸಿಕೊಡುತ್ತದೆ. ಕ್ರೀಡೆಗಳು ಕೇವಲ ಆಟಗಳಲ್ಲ. ಅದು ಜೀವನ ಮೌಲ್ಯಗಳನ್ನೂ ಕಲಿಸಿಕೊಡುತ್ತದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ ಎಂದು ತಿಳಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ದಸರಾ ಕ್ರಿಡಾ ಕೂಟಕ್ಕೆ ಸುಮಾರು ೪೦೦ ರಿಂದ ೫೦೦ ವರ್ಷಗಳ ಇತಿಹಾಸವಿದೆ. ವಿಜಯನಗರ ಸಂಸ್ಥಾನದಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಗಳನ್ನು ನಂತರದ ದಿನಗಳಲ್ಲಿ ಕೆಳದಿ ಸಂಸ್ಥಾನದವರೂ ಮುಂದುವರಿಸಿದರು ಎನ್ನುವುದಕ್ಕೆ ದಾಖಲೆಗಳಿವೆ ಎಂದರು.

ಅರಸರ ಅವಧಿಯಲ್ಲಿ ನಮ್ಮ ಜಿಲ್ಲೆಯಲ್ಲೂ ಕ್ರಿಡಾಕೂಟಗಳು ನಡೆದಿರುವುದಕ್ಕೆ ಸಹ ದಾಖಲೆಗಳಿವೆ. ಮೈಸೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ ಸುಮಾರು ೪೧೦ ವರ್ಷಗಳಿಂದ ದಸರಾ ಕ್ರೀಡಾ ಕೂಟ ನಡೆಯುತ್ತಾ ಬಂದಿದೆ. ಇಂದು ಅದು ಹೊಸ ಆಯಾಮವನ್ನು ಹೊಂದಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರಿಡಾ ಕೂಟಕ್ಕೆ ಆಯ್ಕೆಯಾವುದುದು, ಭಾಗವಹಿಸುವುದು ಹೆಮ್ಮೆಯ ಸಂಗತಿ. ಅಂತಹ ಅವಕಾಶ ಎಲ್ಲರದ್ದಾಗಲಿ ಎಂದು ಹಾರೈಸುತ್ತೇನೆ ಎಂದರು.
ತಾಲ್ಲೂಕು ಸಹಾಯಕ ಕ್ರೀಡಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

District Level Dussehra Games

About Author

Leave a Reply

Your email address will not be published. Required fields are marked *