September 20, 2024

ಸಂಸಾರದ ಜೊತೆಗೆ ವ್ಯವಸಾಯ ತೂಗಿಸಿಕೊಂಡು ಹೋಗುವ ಕಲೆ ಭಗವಂತ ಮಹಿಳೆಯರಿಗೆ ಮಾತ್ರ ಕೊಟ್ಟಿದ್ದಾನೆ

0
Taluk Level International Farmer Women Day

Taluk Level International Farmer Women Day

ಚಿಕ್ಕಮಗಳೂರು: ಸಂಸಾರದ ಜೊತೆಗೆ ವ್ಯವಸಾಯವನ್ನೂ ತೂಗಿಸಿಕೊಂಡು ಹೋಗುವ ಕಲೆ ಭಗವಂತ ಮಹಿಳೆಯರಿಗೆ ಮಾತ್ರ ಕೊಟ್ಟಿದ್ದಾನೆ. ರೈತ ಕುಟುಂಬಗಳಲ್ಲಿ ಮಹಿಳೆಯರ ಪಾತ್ರ ಶೇ.೯೦ ರಷ್ಟು ಇರುತ್ತದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.

ಅವರು ನಗರದ ಉಪ ಕೃಷಿ ನಿರ್ದೇಶಕರ ಕಚೇರಿ ಸಂಭಾಂಗಣದಲ್ಲಿ ಜಿ.ಪಂ., ಕೃಷಿ ಇಲಾಖೆ ವತಿಯಿಂದ ರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಅಂತರರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಕೊಟ್ಟ ಗೌರವವನ್ನು ಎಲ್ಲೂ ನೋಡಲು ಸಿಗುವುದಿಲ್ಲ. ಆದರೆ ಎಲ್ಲೋ ಕೆಲವು ಲೋಪಗಳನ್ನು ಎತ್ತಿ ಎಣಿಸಿ ಸ್ತ್ರೀಯರಿಗೆ ಗೌರವ ಇಲ್ಲ ಎನ್ನುವುದು ಸರಿಯಲ್ಲ. ರೈತ ಮಹಿಳೆಯರು ಮುಂಜಾನೆ ಎಲ್ಲರಿಗಿಂತಲೂ ಮುಂಚೆ ಎದ್ದು ಎಲ್ಲಾ ಯೋಗ ಕ್ಷೇಮಗಳನ್ನು ನೋಡಿ ನಂತರ ಉಳುಮೆ ಮಾಡುವ ಪುರುಷರು, ಶಾಲೆಗೆ ಹೋಗುವ ಮಕ್ಕಳು, ಮನೆಯಲ್ಲಿರುವ ವಯೋ ವೃದ್ಧರ ಬಗ್ಗೆ ಕಾಳಜಿ ಮಾಡುತ್ತಾ, ಅಡುಗೆಯನ್ನೂ ಮಾಡಿಕೊಂಡು ಎಲ್ಲಾ ಲೆಕ್ಕಾಚಾರ ಸೇರಿದಂತೆ ಪ್ರಿತಿಯೊಂದು ಕೃಷಿ ಚಟುವಟಿಕೆಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಾಳೆ ಎಂದರು.

ಎಲ್ಲಾ ರಂಗದಲ್ಲೂ ಮಹಿಳೆ ಇಂದು ಮೇಲ್ಪಂಕ್ತಿ ಹಾಕಿದ್ದಾಳೆ. ಪ್ರಜ್ಞಾವಂತರು, ಧರ್ಮಿಷ್ಠರಾರೂ ಸ್ತ್ರೀಯರಿಗೆ ಅಗೌರವ ಮಾಡುವುದಿಲ್ಲ. ಮಾಡಲೂ ಬಾರದು. ವೃದ್ಧರನ್ನು, ಮಹಿಳೆಯರನ್ನು ಗೌರವಿಸುವ ಮನೆ ಸದಾ ನಗುತ್ತಿರುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮದು ಕೃಷಿ ಪ್ರಧಾನ ದೇಶವಾಗಿದೆ. ರೈತರು ಎಂದ ಕೂಡಲೇ ಪುರುಷರು ಮಾತ್ರ ಎಂದೇ ಎಲ್ಲರ ಕಣ್ಮುಂದೆ ಬರುತ್ತದೆ. ಆದರೆ ಹೆಚ್ಚಿನದಾಗಿ ಮಹಿಳೆಯರೂ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ರೈತ ಮಹಿಳೆ ಹೃದಯವೇ ಇದ್ದಂತೆ. ಬಿತ್ತನೆ ಬೀಜ ಸಂಸ್ಕರಣೆ, ಬೀಜೋಪಚಾರ, ಕಳೆ ಕೀಳುವುದು, ಎರೆ ಗೊಬ್ಬರ, ಸಗಣಿಗೊಬ್ಬರ ತಯಾರಿಕೆ ಇನ್ನಿತರೆ ಕೆಲಸಗಳನ್ನು ರೈತ ಮಹಿಳೆ ಮಾಡಿಕೊಂಡು ಬಂದಿದ್ದಾರೆ. ಆದರೆ ಆಕೆಯ ಕೆಲಸವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಿಷಾಧಿಸಿದರು.

ಕೃಷಿ ತಾಂತ್ರಿಕ ವಿಚಾರಗಳು ರೈತ ಮಹಿಳೆಯರಿಗೆ ಬೇಕೇ ಬೇಕು. ಹೆಚ್ಚಾಗಿ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವವರು ಅವರೇ ಆಗಿರುತ್ತಾರೆ. ಅವರಿಗೆ ಮಾಹಿತಿ ಮಾತ್ರ ಕೊರತೆ ಆಗುತ್ತಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಸುಮಾರು ೩೫ ವರ್ಷಗಳ ಹಿಂದೆಯೇ ಮಹಿಳಾ ಸಹಾಯಕ ಕೃಷಿ ಅಧಿಕಾರಿಗಳನ್ನು ನೇಮಕ ಮಾಡಿತು. ನಂತರ ರೈತ ಮಹಿಳೆಯರಿಗಷ್ಟೇ ತರಬೇತಿ ಕಾರ್ಯಕ್ರಮಗಳು, ಕೃಷಿ ಸಂಬಂಧಿ ಪ್ರವಾಸಗಳು ಇನ್ನಿತರೆ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆದರೂ ಅದು ಸವಾಲಿನದ್ದಾಗಿತ್ತು ಎಂದರು.

ಹಿಂದಿನ ಪರಿಸ್ಥಿತಿ ಈಗಿಲ್ಲ. ಮಹಿಳೆಯರನ್ನು ಮುಂದೆ ಬಿಡಬಾರದು ಎನ್ನುವ ಪುರುಷರಲ್ಲಿನ ಸಂಕುಚಿತ ಭಾವನೆ ಸಹ ಈಗ ಹೋಗಿದೆ. ಇನ್ನು ಮುಂದೆ ರೈತ ಮಹಿಳೆಯರು ಕೃಷಿ ತಾಂತ್ರಿಕತೆ ಬಗ್ಗೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ, ಸಂಸ್ಕರಣೆ ಇನ್ನಿತರೆ ಮಾಹಿತಿಗಳನ್ನು ಮುಂದೆ ತಿಳಿದುಕೊಂಡು ಇಲಾಖೆ ತರಬೇತಿ, ಅಧ್ಯಯನ ಪ್ರವಾಸಗಳಲ್ಲಿ ಸಕ್ರೀಯ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ರೈತ ಮಹಿಳೆಯರಾದ ಬಿಳೆಕಲ್ಲಿನ ಅನಿತಮೋಹನ್‌ಕುಮಾರ್, ಬಾಳೆಹಳ್ಳಿಯ ರತ್ನಮ್ಮಈಶ್ವರಪ್ಪ ರವರನ್ನು ಸನ್ಮಾನಿಸಿದರು. ಕೃಷಿ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ಅಧಿಕಾರಿ ಸುಜಾತ, ರೈತ ಮಹಿಳೆ ನೀಲಮ್ಮ, ತಾಂತ್ರಿಕ ಅಧಿಕಾರಿ ಶೈಲಜಾ, ಡಿ.ಟಿ.ಎಂ ಪ್ರಿಯಾ ಇತರರು ಭಾಗವಹಿಸಿದ್ದರು.

Taluk Level International Farmer Women Day

About Author

Leave a Reply

Your email address will not be published. Required fields are marked *