September 19, 2024

ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಪುತ್ಥಳಿ ಪ್ರತಿಷ್ಟಾಪನೆ

0
ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಪುತ್ಥಳಿ ಪ್ರತಿಷ್ಟಾಪನೆ

ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಪುತ್ಥಳಿ ಪ್ರತಿಷ್ಟಾಪನೆ

ಚಿಕ್ಕಮಗಳೂರು:  ನಟ ಪುನೀತ್‌ರಾಜ್‌ಕುಮಾರ್ ತಮ್ಮ ಜೀವಿತಾವಧಿಯಲ್ಲಿ ಎಲೆಮರೆ ಕಾಯಿಯಂತೆ ಸಾಮಾಜಿಕ ಚಟುವಟಿಕೆಯ ಜೊತೆಗೆ ಕನ್ನಡ ಭಾಷೆಗೆ ಹಲವಾರು ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ ಎಂದು ಕಸಾಪ ಜಾಗರ ಹೋಬಳಿ ಘಟಕದ ಗೌರವಾಧ್ಯಕ್ಷ ಕಳವಾಸೆ ರವಿ ಹೇಳಿದರು.

ತಾಲ್ಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ಜಿಲ್ಲಾ, ತಾಲ್ಲೂಕು, ಹೋಬಳಿ ಕಸಾಪ ಹಾಗೂ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ, ನಟ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಗುರುವಾರ ಪ್ರತಿಷ್ಟಾಪಿಸುವ ಮೂಲಕ ಸಂಭ್ರಮಿಸಿದರು.

ಕನ್ನಡಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಿರುವುದಲ್ಲದೇ ನಾಡು, ನುಡಿ ವಿಚಾರದಲ್ಲಿ ಎಂದಿಗೂ ರಾಜಿಗೊಳಗಾಗದೇ ಕಾರ್ಯನಿರ್ವಹಿಸಿದ ನಟ ದಿ|| ಪುನೀತ್‌ರಾಜ್‌ಕುಮಾರ್ ಕನ್ನಡತನಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದರು ಎಂದು ಹೇಳಿದರು.

ಪುನೀತ್ ಅವರ ಜೀವಿತಾವಧಿಯಲ್ಲಿ ಅನಾಥಾಶ್ರಮ, ಅಬಲೆಯರಿಗೆ ಶಾಲೆಗಳನ್ನು ನಿರ್ಮಿಸಿ ಸೇವೆ ಸಲ್ಲಿಸುತ್ತಿದ್ದರು. ದುಡಿಮೆಯ ಕೆಲವು ಭಾಗವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟವರು. ಆ ನಿಟ್ಟಿನಲ್ಲಿ ಗಾಳಿಗುಡ್ಡೆ ಗ್ರಾಮದಲ್ಲಿ ಪುತ್ಥಳಿ ನಿರ್ಮಿಸುವ ಮೂಲಕ ಜಿಲ್ಲೆಯಲ್ಲೇ ಎರಡನೇ ಪ್ರತಿಮೆ ಗ್ರಾಮದಲ್ಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ದಶಕಗಳ ಕಾಲ ಜಾಗರ ಹೋಬಳಿಯಲ್ಲಿ ಕಸಾಪ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಾಹಿತ್ಯಾರುಚಿಯನ್ನು ಹಂಚುತ್ತಿದೆ. ಜೊತೆಗೆ ಗಾಳಿಗುಡ್ಡೆ ಗ್ರಾಮದಲ್ಲಿ ಕನ್ನಡಧ್ವಜಾಸ್ತಂಬ ನಿರ್ಮಿಸುವ ಸಲುವಾಗಿ ಐದಾರು ವರ್ಷಗಳ ಹಿಂದೆ ಆಲೋಚನೆ ಹೊಂದಿ ಗುದ್ದಲಿಪೂಜೆ ನೆರವೇರಲಾಗಿತ್ತು ಎಂದರು.

ಅದಾದ ಬಳಿಕ ಆಕಸ್ಮಿಕವಾಗಿ ಪುನೀತ್‌ರಾಜ್ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಪುತ್ಥಳಿ ಮೂ ಲಕ ಕನ್ನಡಧ್ವಜಾಸ್ಥಂಬ ನಿರ್ಮಿಸಿ ಗೌರವ ಸಲ್ಲಿಸಲಾಗಿದೆ ಎಂದರು. ಮುಂದಿನ ನವೆಂಬರ್‌ನಲ್ಲಿ ಉಸ್ತುವಾರಿ ಸಚಿವರು ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರ ಮೂಲಕ ಅಧಿಕೃತವಾಗಿ ಪ್ರತಿಮೆ ಅನಾವರಣಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.

ಕೆಳಚಂದ್ರ ಗ್ರೂಪ್ ಮ್ಯಾನೇಜರ್ ಸೋಮಶೇಖರ್ ಮಾತನಾಡಿ ಗ್ರಾಮದ ವೃತ್ತದಲ್ಲಿ ಪುನೀತ್ ಪುತ್ಥಳಿ ನಿರ್ಮಿಸಿರುವುದು ಅತ್ಯಂತ ಸಂತೋಷ ನೀಡಿದೆ. ಮುಂದಿನ ದಿನಗಳಲ್ಲಿ ಪುತ್ಥಳಿಯನ್ನು ಸೂಕ್ತ ಮಟ್ಟದಲ್ಲಿ ನಿರ್ವ ಹಣೆ ಮಾಡಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದ್ದು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿರವಾಸೆ ಗ್ರಾ.ಪಂ. ಉಪಾಧ್ಯಕ್ಷ ರಘುನಾಥ್, ಸದಸ್ಯರಾದ ಪಾರ್ವತಿ, ಉಮಾ, ಕಾಫಿ ಬೆಳೆಗಾರ ಅಶ್ವತೇಗೌಡ, ಜಾಗರ ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಲಕ್ಷ್ಮಣ್, ನಿರ್ದೇಶಕರಾದ ಬಿ.ಪಿ. ಪ್ರಸನ್ನ, ಕೃಷ್ಣ, ಪುನೀತ್ ಅಭಿಮಾನ ಬಳಗದ ಅಧ್ಯಕ್ಷ ಪ್ರಶಾಂತ್, ಜಿ.ಪಂ. ಮಾಜಿ ಸದಸ್ಯ ಜೆ.ಡಿ.ಲೋಕೇಶ್, ತಾ.ಪಂ. ಮಾಜಿ ಸದಸ್ಯ ಎಸ್.ಸಿ.ರಾಮೇಶ್, ಸ್ಥಳೀಯರಾದ ಶಂಕರ್, ಮಲ್ಲೇಶ್, ಧರ್ಮೇಶ್, ನಾರಾಯಣ್ ಮತ್ತಿತರರು ಹಾಜರಿದ್ದರು.

Statue of actor Puneethrajkumar Putthali in Chatgudde village

About Author

Leave a Reply

Your email address will not be published. Required fields are marked *

You may have missed