September 19, 2024

ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಜಾನಪದ ಲೋಕ ಅನಾವರಣ

0
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಾನಪದದ ವೈಭವವನ್ನು ಅನಾವರಣಗೊಂಡವು

ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜಾನಪದದ ವೈಭವವನ್ನು ಅನಾವರಣಗೊಂಡವು

ಚಿಕ್ಕಮಗಳೂರು: ಜಾನಪದವನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಕುವೆಂಪು ಕಲಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ಕನೇ ಜಿಲ್ಲಾ ಜಾನಪದ ಸಮ್ಮೇಳನ ಕಲಾಮಂದಿರದಲ್ಲಿ ಜಾನಪದ ಲೋಕವನ್ನು ಅನಾವರಣಗೊಳಿಸಿತು.

ಸಮ್ಮೇಳನದಲ್ಲಿ ಪ್ರಾರ್ಥನೆ, ಸ್ವಾಗತದಿಂದ ಹಿಡಿದು ವಂದನಾರ್ಪಣೆಯವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳೂ ಜಾನಪದಮಯವಾಗಿದ್ದವು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಜಾಪ ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.ರಾಮಚಂದ್ರೇ ಗೌಡ, ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರೂ ಭಾಷಣದ ವೇಳೆ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಗ್ರಾಮೀಣ ವಾದ್ಯಗಳ ಭರಾಟೆ ವೀರಗಾಸೆಯ ಅಬ್ಬರ ಕಲಾಮಂದಿರದಲ್ಲಿ ಅನುರ ಣಿಸಿತು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತ ಗೋಷ್ಠಿಗಳು ಉಪನ್ಯಾಸ, ಜಾನಪದ ಗೀತೆಗಳ ಗಾಯನ, ನೃತ್ಯ ಜರುಗಿದವು. ಬೆಳಿಗ್ಗೆ ಕಲಾಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಅತ್ತಿಕಟ್ಟೆ ಗುರುನಾಥ ಗೌಡ ರಾಷ್ಟ್ರಧ್ವಜಾರೋಹಣ ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ ನಾಡಧ್ವಜ ಕಜಾಪ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಜಾನಪದ ಧ್ವಜಾರೋಹಣವನ್ನು ನೆರವೇರಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷ ಹಿರಿಯ ಭಜನಾ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸಾರೋಟಿನಲ್ಲಿ ಕುಳ್ಳಿರಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಲಾಮಂದಿರಕ್ಕೆ ಕರೆ ತರಲಾಯಿತು.

ಪುರುಷರು ಮತ್ತು ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಗ್ರಾಮೀಣ ವಾದ್ಯ ಗಳು, ಭಜನಾ ತಂಡಗಳು, ಚಾಮ ಕುಣಿತ, ಪೂಜಾ ಕುಣಿತ, ಕೋಲಾಟ, ದಕ್ಷಿಣ ಕನ್ನಡದ ತಟ್ಟಿ ಗೊಂಬೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾರ್ಗದುದ್ದಕ್ಕೂ ಜಾನಪದದ ವೈಭವವನ್ನು ಅನಾವರಣಗೊಳಿಸಿದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಳ್ಗೊಂಡಿದ್ದರು.

ಮೆರವಣಿಗೆ ನಂತರ ಕಲಾಮಂದಿರದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನ ವನ್ನು ಉದ್ಘಾಟಿಸಿದರು. ಜಾನಪದ ವಸ್ತುಗಳ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಉದ್ಘಾಟಿಸಿದರು. ಜಾನಪದ ವಾದ್ಯಗಳ ವೈಭ ವಕ್ಕೆ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಚಾಲನೆ ನೀಡಿದರು. ಕ.ಜಾ.ಪ ರಾಜ್ಯಾ ಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಜಾನಪದ ಸಿರಿ ಪ್ರಶಸ್ತಿ, ಸ್ಮರಣಿಕೆಗಳನ್ನು ಬಿಡುಗಡೆಗೊಳಿಸಿದರು.

ಸಮ್ಮೇಳನಾಧ್ಯಕ್ಷ ಹಿರಿಯ ಭಜನಾ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ೧೮ ಜಾನಪದ ಕಲಾವಿದರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಆಶಯ ನುಡಿಗಳನ್ನಾಡಿದರು.

ಆಶಾ ಕಿರಣ ಅಂದಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ.ಡಿ.ಎಲ್. ವಿಜಯಕುಮಾರ್, ಜಾನಪದ ಅಕಾಡೆಮಿ ಮಾಜಿಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ,
ಸಾಹಿತಿ ಜಿ.ಬಿ.ವೀರೂಪಾಕ್ಷ, ಕಜಾಪ ಹರಿಹರಪುರ ಹೋಬಳಿ ಅಧ್ಯಕ್ಷೆ ತಮನ್ನಾ ಮುನಾವರ್ ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾನಪದ ಸಮ್ಮೇಳನದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಾನಪದ ಪರಿಕರಗಳ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಜಾನಪದರು ಬಳಸುತ್ತಿದ್ದ ಪ್ರಾಚೀನ ಕಾಲದ ನೀರು ಸೇದುವ ರಾಟೆ, ಕೃಷಿ ಪರಿಕರ ಗಳು, ರಾಗಿ ಬೀಸುವ ಕಲ್ಲು, ಮೀನು ಹಿಡಿಯುವ ಕೂಳಿ, ಹಸೆಮಣೆ ಸೇರಿದಂತೆ ಪ್ರದರ್ಶನದಲ್ಲಿ ಇಡಲಾಗಿದ್ದ ವಸ್ತುಗಳು ನೋಡುಗರ ಕಣ್ಮನ ಸೆಳೆದವು.

Unveiling the folk world at the fourth district folk conference

About Author

Leave a Reply

Your email address will not be published. Required fields are marked *

You may have missed