September 19, 2024
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ

ಚಿಕ್ಕಮಗಳೂರು: ಸದಾ ಕರ್ತವ್ಯದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೋಲೀಸರಿಗೆ ದೈಹಿಕ, ಸದೃಢತೆಯೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ಜಿಲ್ಲಾ ಪೋಲೀಸ್ ಇಲಾಖೆ ಮತ್ತು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಪೋಲೀಸರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಠಾಣೆಗೆ ಬರುವ ಜನಸಾಮಾನ್ಯರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ನ್ಯಾಯ ಕೊಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಈ ಶಿಬಿರವನ್ನು ಆಯೋಜಿಸಿರುವ ಪೋಲೀಸ್ ವರಿಷ್ಠಾಧಿಕಾರಿಗಳ ಕಾರ್ಯ ಅನನ್ಯವಾದುದು ಎಂದರು.

ಪೋಲೀಸ್ ಇಲಾಖೆಯ ಸಿಬ್ಬಂದಿಗಳು ತಾಳ್ಮೆ, ಶಿಸ್ತು, ಸಮಚಿತ್ತ ಕಾಪಾಡಿಕೊಳ್ಳಲು ಈ ಶಿಬಿರದಲ್ಲಿ ತರಬೇತಿ ಪಡೆದು ತಮ್ಮ ಠಾಣೆಗಳ ಸಹ ಉದ್ಯೋಗಿಗಳಿಗೂ ತರಬೇತಿ ನೀಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.

ಕುಟುಂಬ ಸೇರಿದಂತೆ ಲೌಕಿಕ ಪ್ರಪಂಚದ ಎಲ್ಲಾ ಬಾಂಧವ್ಯಗಳನ್ನು ತೊಡೆದುಹಾಕಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಹೋದರಿಯ ಸೇವೆ ಶ್ಲಾಘನೀಯ ಎಂದರು.

ಪೋಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂಅಮಟೆ ಪ್ರಾಸ್ತಾವಿಕವಾಗಿ ಮಾತನಾಡಿ ಪೋಲೀಸರಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಜಿಲ್ಲೆಯ ೩೦ ಠಾಣೆಗಳ ಆಯ್ದ ೪೨ ಮಂದಿ ಪೋಲೀಸ್ ಸಿಬ್ಬಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ೫ ದಿನಗಳ ಕಾಲ ಪ್ರಜಾಪಿತ ಬ್ರಹ್ಮ ಕುಮಾರಿ ವಿ.ವಿಯಲ್ಲಿ ತರಬೇತಿ ಕೊಡಿಸಲಾಗುತ್ತಿದೆ ಎಂದು ಹೇಳಿದರು.

ಪೋಲೀಸರು ಎಂದರೆ ಭಯವಲ್ಲ ಭರವಸೆ ಎಂಬ ಧ್ಯೇಯ ವಾಕ್ಯವನ್ನು ಈಡೇರಿಸಲು ಮೃದುತ್ವ ನಿರ್ವಹಣಾ ಕೌಶಲ್ಯ, ಸಮಚಿತ್ತ, ಮಾನಸಿಕ ಒತ್ತಡ ಕಾಯ್ದು ಕೊಳ್ಳುವ ಹಿನ್ನೆಲೆಯಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಶ್ರದ್ದೆಯಿಂದ ಕಲಿತು ತಮ್ಮ ಠಾಣೆಯ ಸಹದ್ಯೋಗಿಗಳಿಗೆ ಕಲಿಸಿದರೆ ಈ ಶಿಬಿರಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದ ಅವರು ಮುಂಬರುವ ದಿನಗಳಲ್ಲಿ ಮಾನಸಿಕ ಖಿನ್ನತೆಯನ್ನು ತೊಲಗಿಸಲು ಅಗತ್ಯವಿರುವ ಶಿಬಿರವನ್ನು ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜಯೋಗಿನಿ ಭಾಗ್ಯಕ್ಕ, ಸಶಸ್ತ್ರ ಮೀಸಲು ಪಡೆಯ ವೃತ್ತ ನಿರೀಕ್ಷಕ ಸಹದೇವ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಹೇಂದ್ರ ಇದ್ದರು.

ಈ ಕಾರ್ಯಕ್ರಮವನ್ನು ಜ್ಞಾನರಶ್ಮಿ ಶಾಲೆಯ ಮುಖ್ಯಸ್ಥ ನಂದಕುಮಾರ್ ನಿರೂಪಿಸಿದರು. ಶೀಲಕ್ಕ ಸ್ವಾಗತಿಸಿದರು.

Yoga training camp organized at Prajapita Brahmakumari Ishwari Vidyalaya

About Author

Leave a Reply

Your email address will not be published. Required fields are marked *

You may have missed