September 19, 2024
ಪೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಸೈಕಲ್ ಜಾಥಾ

ಪೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಸೈಕಲ್ ಜಾಥಾ

ಚಿಕ್ಕಮಗಳೂರು:  ಪರಿಸರ ಮತ್ತು ವನ್ಯಜೀವಿ ಉಳಿಸಲು ಸೈಕಲ್ ಜಾಥದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ವೈಲ್ಡ್‌ಕ್ಯಾಟ್-ಸಿ ಮತ್ತು ವನ್ಯಜೀವಿ ಸಂರಕ್ಷಣಾ ಕ್ರಿಯಾ ತಂಡದ ವತಿಯಿಂದ ಪರಿಸರ ಸಂರಕ್ಷಣಾ ಕಾರ್ಯಕ್ರಮದಡಿ ಪೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಸೈಕಲ್ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹುಟ್ಟುವಂತಹ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕು, ವನ್ಯಜೀವಿ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವವರಿಗೆ ಅಭಿನಂದಿಸಿದರು.

ಪೂರ್ವಜರು ಹಿಂದಿನಿಂದಲೂ ಪರಿಸರ ಉಳಿಸಿದ್ದರಿಂದ ಇಂದು ನಾವುಗಳೆಲ್ಲರೂ ಒಳ್ಳೆಯ ಗಾಳಿ, ನೀರು ಸೇವಿಸುವ ಮೂಲಕ ಆರೋಗ್ಯವಂತರಾಗಿದ್ದೇವೆ, ಇತ್ತೀಚೆಗೆ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಪರಿಸರ ಹಾಳು ಮಾಡಿ ಅರಣ್ಯ ನಾಶ ಮಾಡುತ್ತಿರುವುದು ವಿಷಾಧನೀಯ ಎಂದರು.

ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೈಕಲ್ ಜಾಥಾ ಕಾರ್ಯಕ್ರಮ ಸಹಕಾರಿಯಾಗಿದೆ, ಜಿಲ್ಲೆ ಪಂಚ ನದಿಗಳ ಉಗಮ ಸ್ಥಾನದ ಊರು, ಹೇಮಾವತಿ, ಯಗಚಿ, ತುಂಗಭದ್ರ, ವೇದಾವತಿ ನದಿಗಳು ಇಲ್ಲಿ ಹುಟ್ಟಿ ಇಡಿ ನಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದರು.

ಪ್ರವಾಸೋಧ್ಯಮಕ್ಕೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಪರಿಸರಕ್ಕೆ ಹಾನಿಯುಂಟು ಮಾಡಿ ರೆಸಾರ್ಟ್, ಹೋಂ ಸ್ಟೇ ಮುಂತಾದವುಗಳ ನಿರ್ಮಾಣದಿಂದಾಗಿ ಪರಿಸರಕ್ಕೆ ಧಕ್ಕೆಯಾಗುತ್ತಿದೆ, ಗಿರಿಶ್ರೇಣಿ ಪ್ರದೇಶದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇದ ಮಾಡಲು ನನ್ನ ಸಹಮತ ಇದ್ದು ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಡಳಿತ ಮತ್ತು ಪೌರಾಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಇರುವುದೊಂದೆ ಭೂಮಿ ಅದನ್ನು ಉಳಿಸಿಕೊಡಿ ಎಂಬ ಘೋಷಣೆಯೊಂದಿಗೆ ಮಾಡುತ್ತಿರುವ ಈ ಸೈಕಲ್ ಜಾಥಾದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಜಾಗ್ರತೆಯಿಂದ ಸುರಕ್ಷಿತವಾಗಿ ಚಲಿಸಿ, ನೀವು ಹೋಗುತ್ತಿರುವ ಉದ್ದೇಶ ಜನರಿಗೆ ತಲುಪಬೇಕು, ಪರಿಸರ ಸ್ವಚ್ಚವಾಗಿದ್ದರೆ ಜಗತ್ತು ಉಳಿಸುತ್ತದೆ ಎಂದು ತಿಳಿಸಿದರು.

ಹಿಂದೆ ಸೈಕಲ್‌ನಲ್ಲಿ ೫ ಕಿ.ಮೀಗಳ ವರೆಗೆ ಶಾಲೆಗೆ ಹೋಗುತ್ತಿದ್ದರಿಂದ ಆರೋಗ್ಯ ಚೆನ್ನಾಗಿತ್ತು, ರೈತರ ಮಕ್ಕಳಾದ ನಾವು ಕೃಷಿ ಕೆಲಸ ಮಾಡುತ್ತಿದ್ದೆವು, ಆದರೆ ಈಗ ಸೌಲಭ್ಯಗಳು ಇರುವುದರಿಂದ ೨೫-೩೦ ವರ್ಷಕ್ಕೆ ಶುಗರ್, ಬಿ.ಪಿ ಬರುತ್ತಿದೆ ಆದ್ದರಿಂದ ಆರೋಗ್ಯಕ್ಕಾಗಿ ದಿನನಿತ್ಯ ಸೈಕಲ್ ತುಳಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿಂದೆ ರಾಮಕೃಷ್ಣ ಹೆಗ್ಗಡೆ ಮುಖ್ಯ ಮಂತ್ರಿಗಳಾಗಿದ್ದಾಗ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಹಿರೇಮಗಳೂರಿನಿಂದ ತಾವು ಮತ್ತು ನನ್ನ ಸ್ನೇಹಿತ ಇಬ್ಬರು ಸೈಕಲ್‌ನಲ್ಲಿ ಹೋಗಿದ್ದನ್ನು ಸ್ಮರಿಸಿದ ತಮ್ಮಯ್ಯ ದಾರಿಯಲ್ಲಿ ಸಿಗುವ ಕಲ್ಲು-ಮುಳ್ಳನ್ನು ಯಾರು ಮೆಟ್ಟಿ ನಿಲ್ಲುತ್ತಾರೊ ಅವರೇ ಗುರಿ ಮುಟ್ಟಿ ಮುಂದೆ ಸಾಧಕರಾಗುತ್ತಾರೆ ಎಂದು ಕಿವಿ ಮಾತು ಹೇಳಿದರು.

ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರ ಸಾಧನೆ ಮಾಡಬಹುದು ಆದ್ದರಿಂದ ಸಮಯಕ್ಕಾಗಿ ಕಾಯದೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮಾದರಿಯಲ್ಲಿ ಸಾಧನೆ ಮಾಡಿ ಎಂದು ಹಾರೈಸಿದರು.

ಸ್ವಾಗತಿಸಿದ ಪರಿಸರ ವಾದಿ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ ಸೈಕಲ್ ಹೊಡೆಯುವುದರಿಂದ ನಿಸರ್ಗ ತಿಳಿಯಿರಿ, ಶಾಲೆ ಹತ್ತಿರ ಇದ್ದರೆ ಬಸ್ ಹತ್ತದೆ ಸೈಕಲ್ ತುಳಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಂತ-ಹಂತವಾಗಿ ಸಮಾಜಮುಖಿ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡಾಗ ಉತ್ತಮವಾದ ವ್ಯಕ್ತಿಯಾಗಿ ರೂಪುಗೊಂಡು ಎತ್ತರಕ್ಕೆ ಬೆಳೆಯುತ್ತಾರೆ ಅದಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟ ಉದಾಹರಣೆಯಾಗಿದ್ದು, ಸಚಿವರು ಆಗಲೆಂದು ಹಾರೈಸಿದರು.

ಶಾಸಕ ತಮ್ಮಯ್ಯ ಪರಿಸರ ಮತ್ತು ಕಾರ್ಯಕ್ರಮದ ಬಗ್ಗೆ ಕಾಳಜಿ ಉಳ್ಳವರಾಗಿದ್ದು, ಸರ್ಕಾರ ಮುಳ್ಳಯ್ಯನಗಿರಿ ಪ್ರದೇಶಕ್ಕೆ ರೋಪ್‌ವೇ ಮಾಡುತ್ತೇವೆಂಬ ಪರಿಸರಕ್ಕೆ ಹಾನಿ ಮಾಡುವ ಯೋಜನೆಗಳಿಗೆ ತಡೆ ಹಾಕುವ ಕೆಲಸವನ್ನು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಎಂದು ಆಗ್ರಹಿಸಿದರು.

ಕಾಲ್ನಡಿಗೆಯಲ್ಲಿ ಮುಳ್ಳಯ್ಯನ ಗಿರಿಗೆ ಪೂರ್ವಜರು ಹೋಗಿ ಪೂಜೆ ಮಾಡಿಸಿಕೊಂಡು ಬರುವಂತೆ ಈಗಲು ಮುಂದುವರೆಸಿ, ಎಲ್ಲವೂ ಮನುಷ್ಯ ಕೇಂದ್ರಿಕೃತ ಯೋಜನೆಯಾಗದೆ ಪರಿಸರ ಹಾಗೂ ವನ್ಯಜೀವಿಗಳು ಉಳಿಯುವ ಕಾರ್ಯ ಆಗಬೇಕು ಎಂದು ಹೇಳಿದರು.

ಪರಿಸರಕ್ಕೆ ದಕ್ಕೆ ತರುವಂತಹ ಯೋಜನೆಗಳನ್ನು ಸರ್ಕಾರ ಜಾರಿ ಮಾಡಲು ಮುಂದಾದಾಗ ಶಾಸಕರಾದ ತಾವು ಕಿವಿ ಹಿಂಡುವ ಕೆಲಸ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ವೈಲ್ಡ್‌ಕ್ಯಾಟ್-ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ, ಪರಿಸರವಾದಿ ಡಿ.ವಿ.ಗಿರೀಶ್, ಮನೀಶ್, ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Cycle jatha organized for high school and college students

About Author

Leave a Reply

Your email address will not be published. Required fields are marked *

You may have missed