September 19, 2024
ಸಿಐಡಿ ಪೊಲೀಸರಿಂದ ವಕೀಲ ಪ್ರೀತಮ್ ವಿಚಾರಣೆ

ಸಿಐಡಿ ಪೊಲೀಸರಿಂದ ವಕೀಲ ಪ್ರೀತಮ್ ವಿಚಾರಣೆ

ಚಿಕ್ಕಮಗಳೂರು: ರಾಜ್ಯಾದ್ಯಂತ ಬಾರೀ ಸದ್ದು ಮಾಡಿದ್ದ ವಕೀಲರು ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಸಿಐಡಿ ಡಿಐಜಿಪಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ಪ್ರಾರಂಭಿಸಿದ್ದು, ಹಲ್ಲೆಗೊಳಗಾದ ಯುವ ವಕೀಲ ಪ್ರೀತಮ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಡಿವೈಎಸ್‌ಪಿ ಉಮೇಶ್ ಹಾಗೂ ಕಾನೂನು ಸಲಹೆಗಾರ ಕಾಳೆ ಅವರು ಬುಧವಾರ ನಗರಕ್ಕೆ ಆಗಮಿಸಿದ್ದರು. ಗುರುವಾರ ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರು ನಗರಕ್ಕೆ ಆಗಮಿಸಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಸಹದ್ಯೋಗಿಗ ಳೊಂದಿಗೆ ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲ ಪ್ರೀತಮ್ ಅವರನ್ನು ವಿಚಾರಣೆಗೆ ಒಳಪಡಿಸಿ, ಪ್ರೀತಮ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ನಗರದ ಮಾರ್ಕೇಟ್ ರಸ್ತೆಯಲ್ಲಿ ಯುವ ವಕೀಲ ಪ್ರೀತಮ್ ಅವರು ಬೈಕ್‌ನಲ್ಲಿ ತೆರಳುವಾಗ ಹೆಲ್ಮೆಟ್ ಧರಿಸಿಲ್ಲವೆಂಬ ಕ್ಲುಲಕ ಕಾರಣಕ್ಕೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಕೀಲ ಪ್ರೀತಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು ಎಂದು ಪ್ರೀತಮ್ ದೂರಿ ನಲ್ಲಿ ದಾಖಲಿಸಿದ್ದು, ಅಂದು ನಡೆದ ಘಟನೆಯಲ್ಲಿ ಪೊಲೀಸ್ ಠಾಣೆಯಲ್ಲಿ ಏನೆಲ್ಲ ನಡೆಯಿತು ಎಂಬ ಇಂಚಿಂಚು ಮಾಹಿತಿಯನ್ನು ಸಿಐಡಿ ಡಿಐಜಿಪಿ ವಂಶಿಕೃಷ್ಣ ಕಲೆ ಹಾಕಿದರು.

ವಕೀಲ ಪ್ರೀತಮ್ ಅವರಿಂದ ಹೆಳಿಕೆ ದಾಖಲಿಸಿಕೊಂಡ ಸಿಐಡಿ ಡಿಐಜಿಪಿ ವಂಶಿಕೃಷ್ಣ ಹಾಗೂ ಇತರೆ ಸಿಬ್ಬಂದಿಗಳು ನಂತರ ಘಟನೆಯಲ್ಲಿ ಅಮಾ ನತ್ತುಗೊಂಡಿರುವ ಆರು ಜನ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಗಳಾದ ಓರ್ವ ಪಿಎಸ್‌ಐ, ಓರ್ವ ಎಎಸ್‌ಐ, ಹೆಡ್ ಕಾನ್ಸ್‌ಸ್ಟೇಬಲ್ ಹಾಗೂ ಮೂವರು ಪೇದೆಗಳನ್ನು ವಿಚಾರಣೆಗೆ ಒಳಪಡಿಸಿ ಅಂದು ನಡೆದ ಘಟನೆಯ ವಿವರವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ.

ಘಟನೆ ಸಂಬಂಧ ಡಿಐಜಿ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆವ ಹೈಕೋರ್ಟ್ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶ ಬಳಿಕ ರಾಜ್ಯ ಸರ್ಕಾರ ಪ್ರಕರಣದ ಗಂಭೀರತೆಯನ್ನು ಅರಿತು ಸಿಐಡಿಗೆ ವಹಿಸಿತ್ತು. ಈ ಹಿನ್ನಲೆಯಲ್ಲಿ ಡಿಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಾರೆ ವಕೀಲರು ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣ ಸಿಐಡಿ ಹೆಗಲಿಗೇರಿದ್ದು, ಸಿಐಡಿ ತನಿಖೆಯಿಂದ ತಪ್ಪಿತಸ್ಥರು ಯಾರು ಎಂಬುದು ತಿಳಿದು ಬರಬೇಕಿದೆ.

Lawyer Pritam interrogated by CID police

About Author

Leave a Reply

Your email address will not be published. Required fields are marked *

You may have missed