September 19, 2024

ಸಿರಿಧಾನ್ಯ ಜನಪ್ರಿಯಗೊಳಿಸಲು ಹಲವು ಕಾರ್ಯಕ್ರಮ

0
ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-೨೦೨೩ ರ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮ

ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-೨೦೨೩ ರ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮ

ಚಿಕ್ಕಮಗಳೂರು: ಸಿರಿಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಜಂಟೀ ಕೃಷಿ ನಿರ್ದೇಶಕಿ ಸುಜಾತ ತಿಳಿಸಿದರು.

ಅವರು ಬುಧವಾರ ನಗರದ ಕೃಷಿ ಇಲಾಖೆ ಆವರಣದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-೨೦೨೩ ರ ಅಂಗವಾಗಿ ಏರ್ಪಡಿಸಿದ್ದ ಸಿರಿಧಾನ್ಯಗಳ ಪಾಕಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂಬರುವ ಜನವರಿ ೫ ರಿಂದ ೭ ರ ವರೆಗೆ ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಮೇಳ ನಡೆಯುತ್ತಿರುವುದರಿಂದ ಪ್ರತಿ ಜಿಲ್ಲೆಗಳಲ್ಲಿ ಸಿರಿ ಧಾನ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಸಿರಿಧಾನ್ಯ ಮೇಳಕ್ಕೆ ಸುಮಾರು ೧೨೦ ರೈತರನ್ನು ನಮ್ಮ ಜಿಲ್ಲೆಯಿಂದ ಕರೆದೊಯ್ಯಲಾಗುವುದು ಎಂದರು.

ಮುಂದಿನ ವಾರದಲ್ಲಿ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇಂದು ೧೫ ಮಂದಿ ಮಹಿಳೆಯರು ಸಿರಿಧಾನ್ಯದ ಬೇರೆ ಬೇರೆ ಪದಾರ್ಥಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ತೀರ್ಪುಗಾರರು ಪರಿಶೀಲನೆ ನಡೆಸಿ ಫಲಿತಾಂಶ ನಿರ್ಧರಿಸುತ್ತಾರೆ ಎಂದರು.

ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮಿ ಮಾತನಾಡಿ, ನವಣೆ, ಸಾಮೆ, ಊದಲು, ಹಾರಕ, ಬರಗು ಮುಂತಾದ ಧಾನ್ಯಗಳನ್ನು ಬಳಸಿ ಸಿಹಿ ಮತ್ತು ಖಾರದ ಪದಾರ್ಥಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದವರಿಗೆ ತಲಾ ೫ ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.

ಜಿಲ್ಲೆಯಾದ್ಯಂತ ರೈತರಲ್ಲಿ ಸಿರಿಧಾನ ಬೆಳೆಯಲು ಉತ್ತೇಜನ ನೀಡುವ ಸಲುವಾಗಿ ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಸಿರಿಧಾನ್ಯಗಳ ಬಗ್ಗೆ ಅಷ್ಟೊಂದು ಅರಿವಿಲ್ಲ. ಸಿರಿಧಾನ್ಯ ಆರೋಗ್ಯಕ್ಕೆ ಪೂರಕ ಎಂದು ಗೊತ್ತಿದ್ದರೂ ಬೆಳೆ ಪದ್ಧತಿ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತೀರ್ಪುಗಾರರಾಗಿ ಆಗಮಿಸಿದ್ದ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಸ್ನೇಹ ಶೀಗೆಹಳ್ಳಿ ಮಾತನಾಡಿ, ಸಿರಿಧಾನ್ಯವು ಆರೋಗ್ಯ ಹಾಗೂ ಆದಾಯಗಳೆರಕ್ಕೂ ಸಿರಿ ತಂದುಕೊಡುತ್ತದೆ ಎಂದರು.

ಈ ವರ್ಷವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ವರ್ಷ ಎಂದು ಆಚರಿಸುತ್ತಿದ್ದೇವೆ. ಇದರ ಅಂಗವಾಗಿ ಸಿರಿಧಾನ್ಯಳಿಂದ ತಯಾರಿಸಲಾದ ಪಾಕ ಸ್ಪರ್ಧೇ ಆಯೋಜಿಸಲಾಗಿದೆ. ೯ ಧಾನ್ಯಗಳನ್ನು ಸಿರಿಧಾನ್ಯಗಳು ಎನ್ನಲಾಗುತ್ತದೆ. ಸಿರಿಧಾನ್ಯಗಳು ಭೂಮಿಗೂ ವರದಾನ, ಆರೋಗ್ಯಕ್ಕೂ ವರದಾನ ಎಂದರು.

ಅತ್ಯಧಿಕವಾದ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಶಿಯಂ ಮತ್ತು ಕಬ್ಬಿಣದ ಅಂಶಗಳು, ಶಕ್ಕರ, ಪಿಸ್ತಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಈ ಕಾರಣಕ್ಕೆ ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಈ ಕಾರಣಕ್ಕೆ ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಹೊಲ, ಗದ್ದೆಗಳಲ್ಲೂ ನಮ್ಮ ತಟ್ಟೆಗಳಲ್ಲೂ ಸಿರಿಧಾನ್ಯಗಳು ಇರಬೇಕು ಎಂದರು.

ತೀರ್ಪುಗಾರರಾಗಿ ಮಂಗಳ ಎಚ್.ಡಿ.ತಮ್ಮಯ್ಯ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಸ್ನೇಹ, ಚಂದ್ರಶೇಖರ ನಾರಣಾಪುರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಅರ್ಪಿತಾ, ಕೃಷಿ ಅಧಿಕಾರಿ ಲೋಲಾಕ್ಷಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Many programs to popularize cereal

About Author

Leave a Reply

Your email address will not be published. Required fields are marked *

You may have missed