September 19, 2024

ದುರ್ಬಲರ, ದೀನ ದಲಿತರ ಕರುಣಿಸಿ ಮಾತೃ ಪ್ರೇಮವನ್ನು ತೋರಿಸಿ ಅವರನ್ನು ಸಂತೈಸುವುದೇ ಧರ್ಮ

0
ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮ

ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮ

ಚಿಕ್ಕಮಗಳೂರು: ದುರ್ಬಲರ, ದೀನ ದಲಿತರ ಕರುಣಿಸಿ ಮಾತೃ ಪ್ರೇಮವನ್ನು ತೋರಿಸಿ ಅವರನ್ನು ಸಂತೈಸುವುದೇ ಧರ್ಮ ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು  ಬೇಲೂರು ರಸ್ತೆಯಲ್ಲಿರುವ ಸಂತ ಅಂದ್ರೇಯ ಚರ್ಚ್‌ನಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ಷಿಶ್ಚಿಯನ್ ಪೋರಂ ಫಾರ್ ಹ್ಯೂಮನ್ ರೈಟ್ಸ್ ವತಿಯಿಂದ ಏರ್ಪಡಿಸಲಾಗಿದ್ದ ಸೌಹಾರ್ಧ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ಧರ್ಮಗಳ ಸಾರ ಒಂದೇ. ಬಡವರನ್ನು ಎತ್ತಿ ಸಂತೈಸುವುದು ಧರ್ಮವಾಗಿದ್ದು, ಬೀಳುವವರನ್ನು ತಡೆದು ನಿಲ್ಲಿಸುವುದೇ ಧರ್ಮ ಎಂದು ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.

ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಸೇರಿಸಿಕೊಂಡು ಸೌಹಾರ್ಧ ಕ್ರಿಸ್‌ಮಸ್ ಆಚರಣೆಯ ಈ ಸಂದರ್ಭದಲ್ಲಿ ಏಸುಕ್ರಿಸ್ತನ ಸಂದೇಶಗಳನ್ನು ಸಾರುವ ಕೆಲಸ ಅತ್ಯಂತ ಸ್ತುತ್ಯಾರ್ಹ ಹಾಗೂ ಗೌರವ ಎಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಜೀವನದಲ್ಲಿ ಆನಂದವಾಗಿರಬೇಕಾದರೆ ಆ ಗ್ರಾಮದಲ್ಲಿ ಶಾಂತಿ, ಸೌಹಾರ್ಧತೆ ಇದ್ದರೆ ಮಾತ್ರ ಅದು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಸಾರ್ವಜನಿಕರ ಬದುಕಿಗೆ ದಾರಿದೀಪವಾಗುತ್ತದೆ ಎಂದರು.

ಇಲ್ಲಿ ಸೇರಿರುವ ಧರ್ಮಾಭಿಮಾನಿಗಳು ಅವರವರ ಧರ್ಮವನ್ನು ಪ್ರೀತಿಸಿ, ಮಾನವ ಕುಲ ಒಂದೇ ಎಂದು ಭಾವಿಸಿ ಎಲ್ಲರೂ ಶಾಂತಿ ಸೌಹಾರ್ಧ ಕಾಪಾಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ ಸೌಹಾರ್ಧ ಎಂಬುದು ಬಹಾಳ ಅರ್ಥಗರ್ಭಿತವಾಗಿದೆ, ಇಂದು ನಾವು ಸಾಮರಸ್ಯ ಮರೆತಿದ್ದೇವೆ, ಸ್ವಾರ್ಥದ ಬದುಕಿನಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ವಿಷಾಧಿಸಿದ ಅವರು ದೇವರು ಎಲ್ಲಾ ಧರ್ಮದವರನ್ನು ಪ್ರೀತಿಸಿದಂತೆ ನಾವು ಅನ್ಯ ಧರ್ಮದವರನ್ನು ಪ್ರೀತಿಸಿದಾಗ ಮಾತ್ರ ಶಾಂತಿ, ಸಾಮರಸ್ಯ, ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಎಲ್ಲಾ ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಈ ಸೌಹಾರ್ಧ ಕಾರ್ಯಕ್ರಮ ಕ್ರಿಸ್‌ಮಸ್ ಪೂರ್ವ ಆಚರಣೆಗೆ ಅರ್ಥ ಬರುತ್ತದೆ ಎಂದು ಶ್ಲಾಘಿಸಿದರು.

ಇಂದು ಯುವಕರಲ್ಲಿ ಗುರು-ಹಿರಿಯರ ಬಗ್ಗೆ ಗೌರವ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಧಾರ್ಮಿಕ ಅಚರಣೆಗಳ ಕಾರ್ಯಕ್ರಮಗಳು ಕಣ್ಣು ತೆರೆಸುವಂತಾಗಲಿ ಎಂದು ಹಾರೈಸಿದರು.

ಮಾಜಿ ಶಾಸಕ ಸಿ.ಟಿ ರವಿ ಮಾತನಾಡಿ ಈ ಬಾರಿ ದತ್ತ ಜಯಂತಿ ಮತ್ತು ಕ್ರಿಸ್‌ಮಸ್ ಆಚರಣೆ ಒಟ್ಟಿಗೆ ಬಂದಿರುವುದು ಇದು ಒಂದು ರೀತಿ ಸೌಹಾರ್ಧವೇ. ಏಸುಕ್ರಿಸ್ತ ಹುಟ್ಟಿದ ದಿನವೇ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನಿಸಿದ್ದರು. ಈ ನಿಟ್ಟಿನಲ್ಲಿ ಸೌಹಾರ್ಧ ಬೆಸೆದುಕೊಂಡು ಬಂದಿದೆ ಎಂದು ಹೇಳಿದರು.

ಭಗವಂತನನ್ನು ಕಾಣಲು ಹಲವು ಮಾರ್ಗಗಳಿವೆ. ಇಲ್ಲಿ ಸೇರಿರುವ ಎಲ್ಲರ ದಾರಿ ಬೇರೆ ಬೇರೆಯಾದರೂ ಗುರಿ ಮಾತ್ರ ಒಂದೇ. ಜಗತ್ತಿನಲ್ಲಿ ಸರ್ವಶ್ರೇಷ್ಠನಾದ ಭಗವಂತನೇ ಆಗಿದ್ದು, ಆದರೆ ನಾವು ಬೇರೆ ಬೇರೆ ಹೆಸರಿನಲ್ಲಿ ಪೂಜಿಸುತ್ತಿದ್ದೇವೆ ಎಂದರು.

ಏಕತೆಯ ಸೂತ್ರದ ಮೂಲಕ ನಾವೆಲ್ಲಾ ಒಂದಾಗಿ ಹೋಗೋಣ. ಇನ್ನೊಬ್ಬರ ಸೇವೆಯ ಮೂಲಕ ಮೋಕ್ಷ ಪಡೆಯಲು ಸಾಧ್ಯ. ಏಸುಕ್ರಿಸ್ತರು ಹೇಳಿದ್ದು ಜಗತ್ ಹಿತ ಸೇವೆ ಮೂಲಕ ನನ್ನನ್ನು ತಲುಪಿ ಎಂದು ಹೇಳಿದ್ದಾರೆ. ಸೇವೇಯೇ ಧರ್ಮವಾಗಲಿ, ಆ ಮೂಲಕ ನಾವು ಭಗವಂತನ ಸಾಕ್ಷಾತ್ಕರಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಕ್ರಿಸ್ತರ ಮುಖಂಡ ಜೇಮ್ಸ್ ಡಿಸೋಜ ಮಾತನಾಡಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಅನೇಕ ಪಂಗಡಗಳು ಒಟ್ಟುಗೂಡಿಸಿಕೊಂಡು ಹೋಗಲು ನಮ್ಮ ಸಮುದಾಯದ ಕ್ರೈಸ್ತರ ಐಕ್ಯತಾ ವೇದಿಕೆ ಸ್ಥಾಪನೆ ಮಾಡಲಾಗಿದೆ. ಶಾಂತಿ ಮತ್ತು ಐಕ್ಯತೆ ಸಾಮರಸ್ಯತೆಗೆ ಹಿಂದುಗಳಿದ ಚಿಕ್ಕ ಚಿಕ್ಕ ಸಮುದಾಯಗಳು, ಅಲ್ಪಸಂಖ್ಯಾತರು ಒಗ್ಗೂಡಬೇಕೆಂಬ ಉದ್ದೇಶದಿಂದ ಈ ವೇದಿಕೆ ಸ್ಥಾಪಿಸಲಾಗಿದೆ ಎಂದರು.

ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಸ್ತುತ ಸ್ಥಿತಿಗನುಗುಣವಾಗಿ ಸಕ್ರಿಯವಾಗಲು ಹಾಗೂ ಮೂಲಭೂತ ಸೌಕರ್ಯಗಳನ್ನು ಪಡೆಯಲು ಹಾಗೂ ಬಡವರ ಉದ್ದಾರಕ್ಕೆ ಈ ವೇದಿಕೆ ಸೇತುವೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂತೋಣಿಸ್ವಾಮಿ, ಕೆ.ಕೆ ವರ್ಗೀಸ್, ವಿನೋದ್‌ಕುಮಾರ್, ಹೇಮಚಂದ್ರಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.

Friendly Christmas program

About Author

Leave a Reply

Your email address will not be published. Required fields are marked *

You may have missed