September 19, 2024

ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ

0
ಚಿಕ್ಕಮಗಳೂರು ತಾಲ್ಲೂಕಿನ ಜನತಾದರ್ಶನ ಕಾರ್ಯಕ್ರಮ

ಚಿಕ್ಕಮಗಳೂರು ತಾಲ್ಲೂಕಿನ ಜನತಾದರ್ಶನ ಕಾರ್ಯಕ್ರಮ

ಚಿಕ್ಕಮಗಳೂರು:  ಸಾರ್ವಜನಿಕರು ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಡಳಿತ ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ತಾಲ್ಲೂಕು ಆಡಳಿತದ ವತಿಯಿಂದ ಅಂಬಳೆಯ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಇಂದು ಏರ್ಪಡಿಸಿದ್ದ ಚಿಕ್ಕಮಗಳೂರು ತಾಲ್ಲೂಕಿನ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಇರುವಲ್ಲಿಗೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದಲೇ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಸಲ್ಲಿಸಿದ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮಟ್ಟದಲ್ಲಿ ನಿಯಮಾನುಸಾರ ಬಗೆಹರಿಸುವಂತಹವುಗಳನ್ನು ಸ್ಥಳೀಯವಾಗಿ ಬಗೆಹರಿಸಲಾಗುತ್ತದೆ. ಒಂದೊಮ್ಮೆ ಅವು ಸರ್ಕಾರದ ಮಟ್ಟದಲ್ಲಿ ಬಗೆಹರಿಸುವಂತಾಗಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಯತ್ನಿಸಲಾಗುವುದು. ಜನರು ಅರ್ಜಿ ಸಲ್ಲಿಸುವಾಗ ಕಾನೂನು ಅಡಿಯಲ್ಲಿ ಬಗೆಹರಿಸಲು ಸಾಧ್ಯವೇ ಎಂದು ಅರ್ಥೈಸಿಕೊಂಡು ಅರ್ಜಿ ಸಲ್ಲಿಸಬೇಕು ಎಂದ ಅವರು. ಜಿಲ್ಲಾಡಳಿತದಿಂದ ಸಾರ್ವಜನಿಕರ ಆಶಯಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ ಹಾಗೂ ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸರ್ಕಾರದ ಪರಿಹಾರದ ಮೊತ್ತವನ್ನು ರೈತರಿಗೆ ನೇರವಾಗಿ ಖಾತೆಗೆ ಜಮೆ ಮಾಡಲು ಫ್ರೂಟ್ಸ್ ತಂತ್ರಾಂಶ ಬಳಸಲಾಗುತ್ತಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಮಾಹಿತಿಯನ್ನು ನೋಂದಾಯಿಸದ ರೈತರು ಕೂಡಲೇ ನೋಂದಾಯಿಸುವಂತೆ ಹೇಳಿದರು.

ಅಂಬಳೆ ಕೈಗಾರಿಕಾ ಪ್ರದೇಶದ ಕಲುಷಿತ ನೀರನ್ನು ಕೆರೆಗೆ ಬಿಡಲಾಗುತ್ತಿದ್ದು, ಇದರಿಂದ ದನಕರುಗಳ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಕಲುಷಿತ ನೀರು ಕುಡಿದು ಎರಡು ಹಸುಗಳು ಮೃತ ಪಟ್ಟಿವೆ ಎಂದು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು, ಕೈಗಾರಿಕೆಗಳ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಇಲಾಖಾ ಅಧಿಕಾರಿಗಳಿಗೆ ಕೈಗಾರಿಕೆಗಳ ಮಾಲೀಕರಿಗೆ ಕಲುಷಿತ ನೀರನ್ನು ಬಿಡದಂತೆ ನಿರ್ದೇಶನ ನೀಡುವಂತೆ ಸೂಚಿಸಿದರು. ಗೌಡನಹಳ್ಳಿ ಗ್ರಾಮಸ್ಥರು ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಅಂಬಳೆ ಗ್ರಾಮಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ, ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ರಾಜೇಶ್, ಚಿಕ್ಕಮಗಳೂರು ತಹಸೀಲ್ದಾರ್ ಡಾ. ಸುಮಂತ್, ಚಿಕ್ಕಮಗಳೂರು ತಾಲ್ಲೂಕು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.

Janatadarshan program of Chikkamagaluru taluk

About Author

Leave a Reply

Your email address will not be published. Required fields are marked *

You may have missed