September 19, 2024

ಕಲಿಕೆ ವಕೀಲಿಕೆಯ ಒಂದು ಬಹುಮುಖ್ಯ ಭಾಗ

0
ಚಿಕ್ಕಮಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆ

ಚಿಕ್ಕಮಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆ

ಚಿಕ್ಕಮಗಳೂರು: ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರುವ ಪರಿಣಾಮಕಾರಿ ಪ್ರಯತ್ನದಲ್ಲಿ ಹಿರಿಯ ವಕೀಲರಲ್ಲಿರುವ ತಾಳ್ಮೆ, ಪರಿಣತಿ ಕಿರಿಯ ವಕೀಲರಲ್ಲಿ ಕಂಡು ಬರುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಶಾಂತಣ್ಣ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ವಕೀಲ ಮಿತ್ರರು ಕಲಿಕೆ ಮರೆಯುತ್ತಿರುವುದು ಕಂಡು ಬರುತ್ತಿದೆ. ನಿತ್ಯ ಒಂದು ಗಂಟೆ ಕಾಲ ಕಾನೂನು ವಿಷಯಗಳನ್ನು ಅಧ್ಯಯನ ಮಾಡಿ ಅರಿತುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು.

ಕಲಿಕೆ ವಕೀಲಿಕೆಯ ಒಂದು ಬಹುಮುಖ್ಯ ಭಾಗ. ಅದನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನ್ಯಾಯ ಪಡೆಯುವ ಸಲುವಾಗಿ ಕಕ್ಷಿದಾರರು ವಕೀಲರ ಮೂಲಕವೇ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ವಕೀಲರು ಯಾವ ರೀತಿಯಲ್ಲಿ ಪ್ರಕರಣವನ್ನು ನ್ಯಾಯಾಲಯದ ಮುಂದಿಡುತ್ತಾರೋ ಪ್ರಕರಣದ ಪರಿಣಾಮವು ಅದನ್ನೇ ಅವಲಂಬಿಸಿರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ಮಾತನಾಡಿ, ನ್ಯಾಯಾಂಗದ ಬಗ್ಗೆ ಎಲ್ಲೋ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿದ್ದು, ಅದಕ್ಕೆ ಅವಕಾಶ ನೀಡದಂತೆ ಬದ್ಧತೆಯಿಂದ ಕಾರ್ಯ ನಿರ್ವಹಿಸುವುದು ನಮ್ಮ ಕರ್ತವ್ಯ. ವಕೀಲರು, ನ್ಯಾಯಾಧೀಶರು ಹಾಗೂ ಸಿಬ್ಬಂದಿ ಪರಸ್ಪರ ಸಹಕಾರದಿಂದ, ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಿದರೆ ನ್ಯಾಯಾಂಗ ವ್ಯವಸ್ಥೆಗೆ ಘನತೆ ಬರುತ್ತದೆ ಎಂದರು.

ಹಿರಿಯ ವಕೀಲ ಟಿ.ಕೆ.ವಿಶ್ವನಾಥ್ ಮಾತನಾಡಿ, ವಕೀಲರು ಸಿದ್ಧಪಡಿಸುವ ಮನವಿಗಳಾಗಲಿ, ದೂರುಗಳಾಗಲಿ ಸ್ಪಷ್ಟವಾಗಿ, ಸ್ಫುಟವಾಗಿರಬೇಕು. ಕೆಲವು ವಿಚಾರಗಳನ್ನು ಎದುರು ಹೇಳಲಾಗದಿದ್ದರೆ ಅದನ್ನು ಬರವಣಿಗೆಯಲ್ಲೂ ನೀಡಬಹುದು. ಅದರಿಂದ ನಮ್ಮ ಹಾಗೂ ನ್ಯಾಯಾಲಯದ ಸಮಯ ಉಳಿಯುತ್ತದೆ. ವಕೀಲರು ದಿನವಹಿ ಐದು ಗಂಟೆ ಕಾಲ ಅಧ್ಯಯನ ಮಾಡುವುದು ಅಗತ್ಯ. ಕಠಿಣ ಪರಿಶ್ರಮ ಅನುಸರಿಸದಿದ್ದರೆ ಯಶಸ್ಸು ನಮ್ಮ ಕೈಹಿಡಿಯುವುದಿಲ್ಲ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ.ಸುಧಾಕರ್ ಮಾತನಾಡಿ, ವಕೀಲಿಕೆ ಎನ್ನುವುದು ಅತ್ಯಂತ ಗೌರವಯುತವಾದ ವೃತ್ತಿ. ಸಂವಿಧಾನ ರಚನೆಯಿಂದ ಹಿಡಿದು ದೇಶಾದ್ಯಂತ ಯಾವುದೇ ಕಾನೂನು ರಚನೆಯಾದಲ್ಲಿ, ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವುದರಲ್ಲಿ ವಕೀಲರ ಪಾತ್ರ ಮಹತ್ವದ್ದು. ಈ ವೃತ್ತಿಯನ್ನು ಗೌರವಿಸಿಕೊಂಡು ಮುಂದುವರಿಸುವುದು ಅಗತ್ಯ ಎಂದರು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಸಿ.ಬಿ.ರುದ್ರೇಶ್, ಖಜಾಂಚಿ ಹೆಚ್.ಟಿ.ಸುನೀಲ್‌ಕುಮಾರ್, ಜಂಟಿ ಕಾರ್ಯದರ್ಶಿ ಕೆ.ಆರ್.ಪ್ರದೀಪ್ ಕಾರ್ಯಕ್ರಮದಲ್ಲಿದ್ದರು. ಅರುಂಧತಿ ಪ್ರಾರ್ಥನೆ, ಉಪಾಧ್ಯಕ್ಷ ಕೆ.ಬಿ.ನಂದೀಶ್ ಸ್ವಾಗತ, ರಘುನಾಥ್ ವಂದನಾರ್ಪಣೆ ನೆರವೇರಿಸಿದರು.

Lawyer’s Day celebration held under the auspices of Chikkamagaluru Lawyers’ Association

About Author

Leave a Reply

Your email address will not be published. Required fields are marked *

You may have missed