September 19, 2024

ಜಿಲ್ಲೆಯಲ್ಲಿ ಹೆಣ್ಣು ಶಿಶುವಿನ ಜನನ ಪ್ರಮಾಣ ಕ್ಷೀಣ

0
ಪಿ.ಸಿ ಮತ್ತು ಪಿ.ಎನ್.ಡಿ.ಟಿ ಹಾಗೂ ಕೆ.ಪಿ.ಎಂ.ಇ ಕಾಯಿದೆಗಳ ಕುರಿತು ತರಬೇತಿ ಕಾರ್ಯಾಗಾರ

ಪಿ.ಸಿ ಮತ್ತು ಪಿ.ಎನ್.ಡಿ.ಟಿ ಹಾಗೂ ಕೆ.ಪಿ.ಎಂ.ಇ ಕಾಯಿದೆಗಳ ಕುರಿತು ತರಬೇತಿ ಕಾರ್ಯಾಗಾರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ಈ ಬಗ್ಗೆ ಎಲ್ಲಾ ವೈದ್ಯರು ಗಂಭೀರವಾಗಿ ಚಿಂತಿಸಿ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಹಾಗೂ ಕೆ.ಪಿ.ಎಂ.ಇ ಕಾಯಿದೆಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ೧೦ ವರ್ಷಗಳ ಸರಾಸರಿ ಜನನ ಪ್ರಮಾಣವನ್ನು ಗಮನಿಸಿದರೆ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಜನನ ಪ್ರಮಾಣದ ಅನುಪಾತದಲ್ಲಿ ಹೆಣ್ಣು ಮಕ್ಕಳ ಜನನ ಕಡಿಮೆಯಾಗುತ್ತಿದೆ. ಈ ಬಗ್ಗೆ ಆತಂಕ ಪಡುವಂತಾಗಿದೆ. ಸ್ವಾಭಾವಿಕವಾಗಿ ಗಂಡು ಮಕ್ಕಳ ಜನನ ಪ್ರಮಾಣ ಹೆಚ್ಚಾದರೂ ಚಿಂತೆ ಇಲ್ಲ ಆದರೆ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು ಈ ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲವಾದರೂ ಕಳಸ, ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸರಾಸರಿ ೧೦ ವರ್ಷದ ಅವಧಿಯಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣ ಕಡಿಮೆ ಇದೆ. ಇದರ ಕಾರಣ ಹುಡುಕಬೇಕಾಗಿದೆ. ವೈದ್ಯರು ಪ್ರತ್ಯಕ್ಷವಾದ ದೇವರು ಎಂಬ ಭಾವನೆ ಇದ್ದು, ಲಿಂಗ ತಾರತಮ್ಯಕ್ಕೆ ಅವಕಾಶ ನೀಡದಂತೆ ಮನಸಾಕ್ಷಿಯಿಂದ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಲಿಂಗ ಪತ್ತೆಯ ಬಗ್ಗೆ ಅಪರಾಧ ಕಾನೂನು ಜಾರಿಯಲ್ಲಿದೆ. ಇದರ ಅನುಷ್ಠಾನ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯರುಗಳು ಈ ನಿಯಮವನ್ನು ಪಾಲಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳವರು ಸಹ ಸರ್ಕಾರಿ ವೈದ್ಯರೊಂದಿಗೆ ಸಹಕರಿಸುವ ಮೂಲಕ ಲಿಂಗ ತಾರತಮ್ಯಕ್ಕೆ ಅವಕಾಶವಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಎಲ್ಲಾ ಕ್ಷೇತ್ರಗಳಲ್ಲೂ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆಯಾದರೂ ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕಕ್ಕೀಡುಮಾಡಿರುವ ವಿಷಯವಾಗಿದೆ. ಇದಕ್ಕೆ ಕಾರಣ ಹುಡುಕುವ ಜೊತೆಗೆ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಾಗಾರದಲ್ಲಿ ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಹಾಗೂ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್‌ಬಾಬು ಮಾತನಾಡಿ ಪ್ರತೀ ೩ ವರ್ಷಕ್ಕೊಮ್ಮೆ ಸರ್ಕಾರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಮತ್ತು ತಪಾಸಣಾ ಹಾಗೂ ಮೇಲ್ವಿಚಾರಣ ಎಂಬ ೨ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಭ್ರೂಣ ಮತ್ತು ಲಿಂಗಪತ್ತೆ ಕುರಿತಂತೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಡಾ|| ಸಂತೋಷ್ ನೇತಾ ಹಾಗೂ ಡಾ|| ಅನುರಾಧ ಪ್ಯಾಟ್ರಿಕ್ ನೇತೃತ್ವದಲ್ಲಿ ವಕೀಲರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡಂತೆ ಜಿಲ್ಲಾ ಸಲಹಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಆಗಿಂದಾಗ್ಗೆ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುತ್ತದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ ಜಿಲ್ಲಾ ಮಟ್ಟದ ತಪಾಸಣಾ ಮತ್ತು ನಿರ್ವಹಣಾ ಸಮಿತಿಗೆ ಡಾ|| ವಿಜಯಲಕ್ಷ್ಮಿ ನೇತೃತ್ವದಲ್ಲಿ ಖಾಸಗಿ ವೈದ್ಯರು ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು, ಕಾನೂನು ಸಲಹೆಗಾರರನ್ನೊಳಗೊಂಡಂತೆ ಸಮಿತಿ ರಚಿಸಿದ್ದು ಈ ಸಮಿತಿ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ತಪಾಸಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತದೆ ಎಂದು ಹೇಳಿದರು.

ಲಿಂಗಪತ್ತೆ ಅಪರಾಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವಿದ್ದು ಅಪರಾಧ ಎಸಗುವ ಸ್ಕ್ಯಾನಿಂಗ್ ಸೆಂಟರ್ ಅಥವಾ ಸಂಬಂಧಿಸಿದ ವೈದ್ಯರ ಮೇಲೆ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ತಿಳಿಸಿದರು.

ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳಾಗಿ ಡಾ|| ಸಂತೋಷ್ ನೇತಾ, ಡಾ|| ಅನುರಾಧ ಪ್ಯಾಟ್ರಿಕ್, ಡಾ|| ವಿನಯ್, ವಕೀಲ ಪ್ರಕಾಶ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ. ಮಂಜೇಗೌಡ ಸರ್ಕಾರೇತರ ಸಂಸ್ಥೆಗಳಿಂದ ಪ್ರವೀಣ್ ಬಿ.ಎಲ್, ರೋಟರಿ ರಘುನಂದನ್ ಎಂ.ಎಲ್, ಮಹಿಳಾ ಪ್ರತಿನಿಧಿಯಾಗಿ ಕಾವ್ಯ ಸಂತೋಷ್ ನೇಮಕಗೊಂಡಿದ್ದಾರೆಂದು ಹೇಳಿದರು.

The female birth rate in the district is low

About Author

Leave a Reply

Your email address will not be published. Required fields are marked *

You may have missed