September 19, 2024

ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ನಗರದ ಎಲ್ಲಾ ದೇವಾಲಯಗಳ ಸ್ವಚ್ಚತೆ

0
ನಗರಸಭೆಯಿಂದ ಹಿರೇಮಗಳೂರು ಕೋದಂಡರಾಮ ದೇವಾಲಯದಲ್ಲಿ ಸ್ವಚ್ಚತೀರ್ಥ ಅಭಿಯಾನ

ನಗರಸಭೆಯಿಂದ ಹಿರೇಮಗಳೂರು ಕೋದಂಡರಾಮ ದೇವಾಲಯದಲ್ಲಿ ಸ್ವಚ್ಚತೀರ್ಥ ಅಭಿಯಾನ

ಚಿಕ್ಕಮಗಳೂರು:  ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜ.೨೨ ರಂದು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆಡೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಇರುವ ದೇವಾಲಯಗಳ ಸ್ವಚ್ಚತೆ ನೆಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಇದರ ಭಾಗವಾಗಿ ನಗರದ ಎಲ್ಲಾ ದೇವಸ್ಥಾನಗಳ ಸ್ವಚ್ಚತೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರ ಸಭಾಧ್ಯಕ್ಷ ವರದ್ಧಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ಹಿರೇಮಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿಕೋಶ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಚತೀರ್ಥ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜ. ೨೧ ರೊಳಗೆ ಎಲ್ಲಾ ದೇವಾಲಯಗಳನ್ನು ಸ್ವಚ್ಚತೆಗೊಳಿಸಿ ಹೋಮ ಹವನ ನೆಡೆಸಲಾಗುವುದು ಅದರ ಭಾಗವಾಗಿ ಇಂದು ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಾಲಯದಿಂದ ಅಭಿಯಾನ ಪ್ರಾರಂಭ ಮಾಡಿದ್ದು, ನಗರದ ಎಲ್ಲಾ ದೇವಸ್ಥಾನಗಳನ್ನು ನಗರಸಭೆ ವತಿಯಿಂದ ಸ್ವಚ್ಚಗೊಳಿಸಿ, ಸ್ವಚ್ಚ ತೀರ್ಥ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಕಾರ್ಯದಲ್ಲಿ ಸಾರ್ವಜನಿಕರು ನಗರಸಭೆ, ಅಧಿಕಾರಿ ಸಿಬ್ಬಂದಿಗಳು ಭಾಗಿಯಾಗಿ ಮೂರು ದಿನಗಳ ಕಾಲ ಸ್ವಚ್ಚತೆ ಕಾರ್ಯ ಅಭಿಯಾನ ನೆಡೆಯಲಿದೆ. ಇದರಿಂದ ದೇಶದಲ್ಲಿ, ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ರೈತರು, ಸಾರ್ವಜನಿಕರು ಸಮೃದ್ಧಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಮನೆಯಲ್ಲಿಟ್ಟು ಪೂಜಿಸಿದ ಹಳೆಯ ದೇವರ ಫೋಟೋಗಳನ್ನು ಮರಗಳ ಕೆಳಗೆ, ದೇವಸ್ಥಾನದ ಬಳಿ ಇಡುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಮುಂದುವರಿಸಿದರೆ ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ಆದ್ದರಿಂದ ಅದೇ ಫೋಟೋಗೆ ಸುಂದರವಾದ ಫ್ರೇಂ ಅಳವಡಿಸಿ ಪೂಜಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಸ್ವಾತಂತ್ರ್ಯದ ಹೋರಾಟಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರೂಪಿಸಿದ ಮಹಾ ಮಂತ್ರವೇ ರಘುಪತಿ ರಾಘವ ರಾಜರಾಮ್ ಪತೀತ ಪಾವನ ಸೀತಾ ರಾಮ್ ಎಂಬ ಘೋಷಣೆಯೊಂದಿಗೆ ದೇಶದಲ್ಲಿ ವಿಭಜನೆಗೆ ಅವಕಾಶ ಕೊಡದೆ, ಯೋಜನೆ-ಯೋಚನೆ ಮೂಲಕ ಸ್ವಚ್ಚತೆಯನ್ನು ಬದ್ಧತೆಯಾಗಿ ಇರಿಸಿಕೊಂಡು ತನ್ಮೂಲಕ ವಿವೇಕತೆಯ ಸಿದ್ಧತೆಗೆ ಕೈಯಲ್ಲಿ ಯಾವಾಗಲು ಇರಲಿ ಪೊರಕೆ ಹೀಗೆಂದೇ ಬಾಪೂಜಿ ನಮಗಿತ್ತ ಹರಕೆ ಎಂದು ಹೇಳಿದರು.

ಕಸಬರಿಕೆ ಇದ್ದರೆ ಕಸ ಗುಡಿ ಉತ್ತಿದ್ದರೆ ಊರೆಲ್ಲಾ ಚೆಂದಾ, ಇದರಲ್ಲಿ ನಾವೆಲ್ಲಾ ಮಿಂದೇಳಬೇಕು ಕಂದ ಎಂಬ ಪದ್ಯದಂತೆ ಇಂದು ನಗರಾಡಳಿತದ ಮೂಲಕ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ಸರ್ಕಾರಗಳ ಆದೇಶದಂತೆ ಮತ್ತು ಪ್ರತಿಯೊಬ್ಬರ ಹೃದಯದಲ್ಲಿ ಇರುವ ಸಂಕಲ್ಪದಂತೆ ಜ.೨೨ ರಂದು ಸೋಮವಾರ ಉತ್ತರ ಪ್ರದೇಶದ ಅಯೋದ್ಯೆಯಲ್ಲಿ ಕರ್ನಾಟಕದ ಅರುಣಾಶಿಲ್ಪಿ ಎಂಬುವರು ಅರುಣ ಕಿರಣಗಳೆಂಬ ಮಣಿ ಧರಿಸಿ ಕುಣಿದಳು ಅರಸಿ ಎಂಬಂತೆ ವಿಗ್ರಹ ತಯಾರು ಮಾಡಿದ್ದಾರೆ, ದೇಶದ ಕಡೆಗೆ ವಿಶ್ವ ಮಾನವತೆಯೆಡೆಗೆ ಪ್ರೇರೇಪಿಸಲು ಈ ಕಾರ್ಯ ಶ್ಲಾಘನೀಯ ಎಂದರು.

ಇದು ಪ್ರತಿನಿತ್ಯ ಮನದ ಸಿದ್ಧತೆ, ಮನೆಯ ಸಿದ್ಧತೆ ಹಾಗೂ ದೇಶದ ಬದ್ಧತೆಯಲ್ಲಿ ಸ್ವಚ್ಚತೆಗೆ ಆದ್ಯತೆ ಕೊಡುವುದರ ಮೂಲಕ ನಮ್ಮ ಹೃದಯ, ಮನಸ್ಸು, ಬುದ್ಧಿ, ಜನ, ನಮ್ಮತನ ಎಲ್ಲವು ಕೂಡ ವಿಶ್ವಮಾನವತ್ವವನ್ನು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಅನುಕರಣೀಯ ಮತ್ತು ಅನನ್ಯವಾಗಿದ್ದು, ಶ್ರೀರಾಮನಿಗು ಇದು ಬಹಳ ಪ್ರಿಯವಾಗಿದೆ ಎಂದು ವಿಶ್ಲೇಷಿಸಿದರು.

ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನದಲ್ಲಿ ಜ.೨೨ ರಂದು ಸೋಮವಾರ ಸುಪ್ರಭಾತದೊಂದಿಗೆ ಕನ್ನಡ ರಾಮನಿಗೆ ಪೂಜೆ ಆರಂಭವಾಗಿ ತನ್ಮೂಲಕ ನಗರ ಸಂಕೀರ್ತನೆ ಶ್ರೀರಾಮಲಲ್ಲಾ ಮೂರ್ತಿಗೆ ಅಭಿಷೇಕ, ಉಪನ್ಯಾಸ, ಭಜನೆಗಳು ನೆಡೆಯುತ್ತವೆ ಸಂಜೆ ಭಗವಂತನ ಸನ್ನಿಧಿಯಲ್ಲಿ ಹೃದಯ-ಹೃದಯ ಮಿಲನವಾಗಿ ಮಧುರ ಬಹುಧೂದಾತ್ರಿ ಪುಟ್ಟ-ಪುಟ್ಟ ಹಣತೆಗಳನ್ನು ಪ್ರತಿಯೊಬ್ಬರು ಬೆಳಗುವುದರ ಮೂಲಕ ಅಂಧಕಾರವನ್ನು ತೊಡೆದುಹಾಕಿ ಬೆಳಕಿನ ಹಬ್ಬದಂತೆ ಶ್ರೀ ರಾಮಲಲ್ಲಾನಿಗೆ ಲಾಲಿ ಸೇವೆಯೊಂದಿಗೆ ರಾತ್ರಿ ೮.೩೦ ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಲೋಕೇಶ್, ತೇಜಸ್ವಿನಿ, ವೆಂಕಟೇಶ್ ಹಾಗೂ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Cleanliness drive at Hiremagaluru Kodandarama Temple by Municipal Council

About Author

Leave a Reply

Your email address will not be published. Required fields are marked *

You may have missed