September 19, 2024

ದೇಶದ ಅಭ್ಯುದಯಕ್ಕೆ ಜಗತ್ತಿನ ಒಳಿತಿಗೆ ರಾಮ ಬೇಕು

0
ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ’ಶ್ರೀರಾಮ ಸಾಂಸ್ಕೃತಿಕ ಸಂಭ್ರಮ’

ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ’ಶ್ರೀರಾಮ ಸಾಂಸ್ಕೃತಿಕ ಸಂಭ್ರಮ’

ಚಿಕ್ಕಮಗಳೂರು: ದೇಶದ ಅಭ್ಯುದಯಕ್ಕೆ ಜಗತ್ತಿನ ಒಳಿತಿಗೆ ರಾಮ ಬೇಕು, ರಾಮಾಯಣ ಪೂರಕ ಎಂದು ಸುಗಮ ಸಂಗೀತಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ನುಡಿದರು.

ಸುಗಮ ಸಂಗೀತಗಂಗಾ ನೇತೃತ್ವದಲ್ಲಿ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ’ಶ್ರೀರಾಮ ಸಾಂಸ್ಕೃತಿಕ ಸಂಭ್ರಮ’ದಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿದಂತೆ ರಾಮಾಯಣ ಮಾರ್ಗದರ್ಶಿ. ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಆದರ್ಶಕೃತಿಗಳನ್ನು ಕಲಿಸುವುದು ಇಂದಿನ ಅಗತ್ಯ ಎಂದರು.

ಆದರ್ಶ ರಾಜನಾದ ಶ್ರೀರಾಮಚಂದ್ರ ತಂದೆಗೆ ಆದರ್ಶಮಗನೂ ಹೌದು. ಹಾಗೆ ಆದರ್ಶ ಸಹೋದರನಾಗಿಯೂ ನಿಲ್ಲುತ್ತಾನೆ. ಒಟ್ಟಾರೆ ಸದ್ಗುಣಗಳ ಗಣಿಯಾದ ಶ್ರೀರಾಮನದು ಆದರ್ಶಜೀವನ. ರಾಮ ಹೆಸರಿನಲ್ಲೆ ಬಿಸಿ ಮತ್ತು ತಂಪು ಎರಡೂ ಇದೆ. ದೇಶದ ಆರಾಧ್ಯದೈವವೂ ಹೌದು ಎಂದ ಡಾ.ಜೆ.ಪಿ.ಕೆ., ಶ್ರೇಷ್ಠ ಪ್ರಧಾನಿ ನರೇಂದ್ರಮೋದಿ ಅವರನ್ನೂ ಭವ್ಯರಾಮ ಮಂದಿರನಿರ್ಮಾಣಕ್ಕಾಗಿ ಶ್ರೀರಾಮನೆ ಕರೆಸಿಕೊಂಡ ಎಂಬ ರಥಯಾತ್ರಾ ರೂವಾರಿ ಎಲ್.ಕೆ.ಅಡ್ವಾನಿ ಅವರ ಮಾತುಗಳಲ್ಲಿ ಸತ್ಯವಿದೆ ಎಂದರು.

ರಾಮನಿಗೂ ಕನ್ನಡನಾಡಿಗೂ ನಿಕಟಸಂಬಂಧವಿದೆ. ಹಿರೇಮಗಳೂರಿನಲ್ಲಿರುವ ಕೋದಂಡರಾಮನ ಬಲಭಾಗದಲ್ಲಿ ಸೀತಾಮಾತೆ ಇರುವ ವಿಗ್ರಹ ಜಗತ್ತಿನ ಬೇರೆಲ್ಲೂ ಇಲ್ಲ. ಯುಗದ ಕವಿ ಕುವೆಂಪು ೮ವರ್ಷಗಳ ಕಾಲ ರಚಿಸಿದ ರಾಮಾಯಣದರ್ಶನಂ ವಾಲ್ಮೀಕಿ ರಾಮಾಯಣಕ್ಕಿಂತಲೂ ಚೆನ್ನಾಗಿದೆ ಎಂದರು.

೫ವರ್ಷದ ಮಗುವಿನ ಬೆಳವಣಿಗೆ ಮತ್ತು ಭಾವಕ್ಕೆ ಅನುಗುಣವಾಗಿ ಬಾಲರಾಮನ ವಿಗ್ರಹವಿದೆ ಎಂಬುದನ್ನು ಮಕ್ಕಳತಜ್ಞನಾಗಿ ಗಮನಿಸಿರುವುದಾಗಿ ಹೇಳಿದ ಅವರು, ಮೈಸೂರಿನ ಶಿಲ್ಪಿ ಅರುಣ್ ರಾಮನವಿಗ್ರಹ ನಿರ್ಮಿಸಿ ಒಂದೇದಿನದಲ್ಲಿ ಜಗತ್ ಖ್ಯಾತಿಗಳಿಸಿದರು. ಆಂಜನೇಯ ಹುಟ್ಟಿದ ನಾಡಿದು. ಜನ್ಮಭೂಮಿಯಲ್ಲಿ ಜನವರಿ ೨೨ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ ಎಂದರು.

ಸುಗಮಸಂಗೀತಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್ ಪ್ರಧಾನ ಉಪನ್ಯಾಸ ನೀಡಿ ಶ್ರೀರಾಮ ದೇಶದ ಶ್ರದ್ಧಾಕೇಂದ್ರ. ರಾಷ್ಟ್ರವನ್ನು ಒಗ್ಗೂಡಿಸುವ ಸೂತ್ರ. ಸರ್ವಶ್ರೇಷ್ಠ ಗುಣಗಳ ರಾಮ ಆದರ್ಶಪ್ರಾಯ ಎಂದರು.

ಅಧಿಕಾರ ನಿರಾಕರಣೆ, ಪಿತೃವಾಕ್ಯ ಪರಿಪಾಲನೆ, ತಮ್ಮಂದಿರಿಗೆ ಮಾರ್ಗದರ್ಶನ, ಉತ್ತಮಸ್ನೇಹಿತನಾಗಿ ರಾಮ ನಮ್ಮೆದುರು ನಿಲ್ಲುತ್ತಾನೆ. ವಾಲಿಯನ್ನು ಸೋಲಿಸಿ ರಾಜ್ಯವನ್ನು ಸುಗ್ರೀವನಿಗೆ ಒಪ್ಪಿಸುತ್ತಾನೆ. ಲಂಕೆಯನ್ನು ಗೆದ್ದರೂ ವಿಭೀಷಣನಿಗೆ ರಾಜ್ಯಕೊಟ್ಟ. ಸ್ವರ್ಣಮಯವಾದ ಲಂಕೆಬೇಡ, ಮಾತೃಭೂಮಿಯೆ ಬೇಕೆಂದ ರಾಮ, ಎಂದೂ ರಾಜ್ಯವಿಸ್ತರಣೆ- ಆಕಮಣ ಆಸೆ ಹೊಂದಿರಲಿಲ್ಲ ಎಂದರು.

ರಾಮ ಹುಟ್ಟಿದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿದ್ದ ಮಂದಿರವನ್ನು ಧಾಳಿಕೋರರು ಕೆಡವಿ ಬಾಬರಿಮಸೀದಿ ನಿರ್ಮಿಸಿದ್ದರು. ಐದುಶತಮಾನಗಳ ಹೋರಾಟ ಬಲಿದಾನಗಳ ಹಿನ್ನಲೆಯಲ್ಲಿ ಭವ್ಯಮಂದಿರ ಈಗ ಉದ್ಘಾಟನೆಗೆ ಸಿದ್ಧವಾಗಿರುವುದು ಹರ್ಷದ ಸಂಗತಿ ಎಂದು ಗಿರಿಜಾಶಂಕರ್, ೪ದಶಕಗಳ ಹೋರಾಟದ ಫಲ ಇದು. ಡಿಸೆಂಬರ್ ೬ರಂದು ಭಾರತದ ಸಂಸ್ಕೃತಿ, ಶ್ರದ್ಧಾಕೇಂದ್ರ, ನಂಬಿಕೆಯ ಮೇಲಿನ ಕಪ್ಪುಚುಕ್ಕಿ ಅಳಿಸಿತು ಎಂದರು.

ಸುಗಮಸಂಗೀತಗಂಗಾ ಪದಾಧಿಕಾರಿಗಳೊಂದಿಗೆ ಉದಯಸಿಂಹ, ಡಿ.ಎಚ್.ನಟರಾಜ್, ಮಂಜುನಾಥಜೋಷಿ ಸೇರಿದಂತೆ ೨೪ಸಂಸ್ಥೆಗಳ ಮುಖ್ಯಸ್ಥರು ದೀಪಪ್ರಜ್ವಲನಗೊಳಿಸುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾಪ್ರಸಾದ ಕಾರ್‍ಯಕ್ರಮ ನಿರೂಪಿಸಿದರು.

ವಿವೇಕಜಾಗೃತ ಬಳಗ ತಂಡದ ಶ್ರೀರಾಮ ರಕ್ಷಾಸ್ತೋತ್ರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾವನಿ ವೀಣಾಶಾಲೆಯ ತಂಡದ ವೀಣಾವಾದನ, ಮಲ್ಲಿಗೆಸುಧೀರ್ ಕಂಠದಲ್ಲಿ ರಾಮನ ಕಥೆಯನ್ನು ವಿವರಿಸುವ ’ರಾಮನ ಅವತಾರ ಇದು ರಘುಕುಲ…’ ಗಾಯನಕ್ಕೆ ಹಿರಿಯ ಚಿತ್ರಕಲಾ ಶಿಕ್ಷಕ ಕಟ್ಟಿಮನಿ ರಚಿಸಿದ ರಾಮನಚಿತ್ರ ಗಮನಸೆಳೆಯಿತು.

ಶಶಿಕಲಾ ನೇತೃತ್ವದ ಗಮಕಿಗಳ ತಂಡ ಕುವೆಂಪು ರಾಮಾಯಣದರ್ಶನಂ ಶ್ಲೋಕ ಪ್ರಸ್ತುತಪಡಿಸಿದರೆ, ಶ್ರೀಕಂಠೇಶ್ವರ ಕಲಾಮಂದಿರದ ವಿದ್ಯಾರ್ಥಿಗಳ ಬೃಹತ್ ಸಮೂಹ ’ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..’ ಹಾಡಿಗೆ ಭಾವತುಂಬಿದರು. ಉದಯಸಿಂಹ ತಂಡದ ಸಮೂಹ ಭಜನೆ, ಲಾಲಿತ್ಯಅಣ್ವೇಕರ್ ದನಿಯಲ್ಲಿ ಮೀರಾಭಜನೆ, ಸಪ್ತಸ್ವರ ಸಂಗೀತಶಾಲೆಯ ಹಾಡು, ರೇಖಾಪ್ರೇಮಕುಮಾರ್ ಸಾರಥ್ಯದಲ್ಲಿ ನಾದಚೈತನ್ಯ ತಂಡ ’ಬನ್ನಿ ಅಯೋಧ್ಯೆಗೆ…’ ಇದೇ ಸಂದರ್ಭಕ್ಕಾಗಿ ಬಾಲಕೃಷ್ಣ ಕಾಮತ್ ರಚಿಸಿದ ಅರ್ಥಪೂರ್ಣಗೀತೆ ಪ್ರಸ್ತುತಪಡಿಸಿ ಗಮನಸೆಳೆದರು.

ಯಕ್ಷಸಿರಿ ನಾಟ್ಯವೃಂದ ವೈಭವಯುತವಾದ ಶ್ರೀರಾಮ ಪಟ್ಟಾಭಿಷೇಕ ಅಭಿನಯಿಸಿ ಮೆರಗು ತಂದರೆ, ವಿಷ್ಣು ಸಮಾಜದ ಭಜನೆ ಮತ್ತು ಗುಜರಾತಿ ಪರಿವಾರದ ಗರ್ಭಾನೃತ್ಯ ’ಜಗದಾನಂದಕಾರಕ..’ ಸಮೂಹಗಾಯನ ಮೂಲಕ ಅರ್ಥಪೂರ್ಣ ಸಾಂಸ್ಕೃತಿಕ ಕಾರ್‍ಯಕ್ರಮ ಸಂಪನ್ನಗೊಂಡಿತು. ವಿವಿಧ ನೃತ್ಯಶಾಲೆಯ ಕಲಾವಿದರು, ಭಜನಾಮಂಡಳಿಗಳ ಸದಸ್ಯರು ಶ್ರೀರಾಮನಿಗೆ ಕಲಾಸೇವೆ ಸಲ್ಲಿಸಿದರು. ಮಂಜುನಾಥಕಾಮತ್, ಅರವಿಂದದೀಕ್ಷಿತ್, ಸುಧೀರ್, ವೀಣಾಅರವಿಂದ್, ರೇಖಾ ನೇತೃತ್ವದ ತಂಡ ಅಪರೂಪದ ಸಾಂಸ್ಕೃತಿ ಸೊಬಗಿಗೆ ಕರ್ಣಧಾರತ್ವವಹಿಸಿದ್ದರು. ಕೃಷ್ಣಭಟ್‌ರಿಂದ ಮಹಾಮಂಗಳಾರತಿ ನೆರವೇರಿತು.

‘Sri Ram Cultural Celebration’ organized at Ranganna’s Chhatra

About Author

Leave a Reply

Your email address will not be published. Required fields are marked *

You may have missed