September 19, 2024

ಚಿಕ್ಕಮಗಳೂರು ನಗರದ ವಿವಿಧ ವಾರ್ಡ್‌ಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಭೇಟಿ

0
ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕೆಲಸ ಪರಿಶೀಲನೆ

ನಗರದ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕೆಲಸ ಪರಿಶೀಲನೆ

ಚಿಕ್ಕಮಗಳೂರು: ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬರದಂತೆ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಹಮ್ಮಿಕೊಳ್ಳಲಾಗಿರುವ ಜನ ಸಂಪರ್ಕ ಸಭೆಗಳು, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಸೇರಿದಂತೆ ಇಂದಾವರದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದರು.

ನಗರಸಭೆ ಅಧಿಕಾರಿಗಳ ಸಭೆ ನಡೆಸಿ ಜನಸ್ನೇಹಿ ಆಡಳಿತ, ಸ್ವಚ್ಛತೆ, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಕಾಲಾವಕಾಶ ಕೊಟ್ಟಿದ್ದೆವು. ಜನರಿಂದ ದೂರು ಬಂದರೆ ಅಧಿಕಾರಿಗಳ ನಡುವೆ ಎಲ್ಲೋ ತಪ್ಪಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಅದಕ್ಕೆ ಅವಕಾಶ ಕೊಡದೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಬೆಳಗಿನ ೫.೫೦ ರಿಂದಲೇ ಪೌರ ಕಾರ್ಮಿಕರ ಕುಂಎಉಕೊರತೆ ಆಲಿಸಿ, ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ನಗರಸಭೆ ವತಿಯಿಂದ ಉಚಿತ ವಿಮಾ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು.

ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ಇಂದಾವರ ಕಸ ವಿಲೇವಾರಿ ಘಟಕಕ್ಕೆ ತಡೆ ಗೋಡೆ ನಿರ್ಮಾಣ, ಎರಡು ಹಿಟಾಚಿ ವಾಹನಗಳು ಸೇರಿದಂತೆ ೧.೧೩ ಕೋಟಿ ರೂನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ರೈತರು ಮತ್ತು ಇಂದಾವರ ಗ್ರಾಮಸ್ಥರಿಂದ ಇಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಯುತ್ತಿಲ್ಲ ಎನ್ನುವ ದೂರುಗಳಿದ್ದವು. ಈಗ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ ಶೇ.೪೦ ರಷ್ಟು ಅನುದಾನ ಮೀಸಲಿಟ್ಟು ಅಭಿವೃದ್ಧಿ ಪಡಿಸಲಾಗಿದೆ. ಈಗ ಶೇ.೭೦ ರಿಂದ ೭೫ ಭಾಗ ಈ ಘಟಕ ಚನ್ನಾಗಿ ನಡೆದಿದೆ. ಇನ್ನೂ ಶೇ.೨೫ ರಷ್ಟು ಕೆಲಸ ಬಾಕಿ ಇದೆ. ಅದಕ್ಕಾಗಿ ಸಂಪೂರ್ಣ ಡಿಪಿಆರ್ ತಯಾರಿಸಲು ತಿಳಿಸಲಾಗಿದೆ. ಪದೇ ಪದೇ ಅನುದಾನ ಹಾಕುವ ಬದಲು ಒಂದೇ ಬಾರಿ ಕಾಮಗಾರಿ ಕೈಗೊಳ್ಳುವುದರಿಂದ ಅನುಕೂಲಕರ ಎಂದು ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ಸ್ವಚ್ಛತೆಯಲ್ಲಿ ನಗರಸಭೆ ನಾಲ್ಕನೇ ಸ್ಥಾನಕ್ಕೆ ಬಂದಿತ್ತು. ಮೊನ್ನೆ ರ್‍ಯಾಂಕಿಂಗ್ ಬಿಡುಗಡೆ ಆದ ಸಂದರ್ಭದಲ್ಲಿ ೨೧ ನೇ ಸ್ಥಾನಕ್ಕೆ ಕುಸಿದಿದೆ. ಸ್ವಚ್ಛತಾ ವ್ಯವಸ್ಥೆ ಸರಿ ಪಡಿಸಿಕೊಂಡು ದಾಖಲೆಗಳನ್ನು ಸರಿಯಾಗಿ ಹೊಂದಿಸಿಕೊಳ್ಳದಿರುವುದು ಇದಕ್ಕೆ ಕಾರಣ. ಇನ್ನು ಮುಂದೆ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರನ್ನು ಜೊತೆಯಲ್ಲಿಟ್ಟುಕೊಂಡು ಸರಿಯಾದ ರೀತಿ ಕಸ ವಿಲೇವಾರಿ ಮತ್ತು ದಾಖಲಾತಿ ಹೊಂದಿಸುವ ಕೆಲಸ ಮಾಡುತ್ತೇವೆ ಎಂದರು.

ಸ್ವತಃ ನನ್ನ ಮನೆಗೆ ವಾರಕ್ಕೊಮ್ಮೆ ಕಸ ಸಂಗ್ರಹದ ವಾಹನ ಬರುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ನಮಗೆ ನಗರದ ಜನರ ಹಿತದೃಷ್ಠಿ ಮುಖ್ಯ. ಯಾವುದೇ ಸಂಸ್ಥೆ, ವ್ಯಕ್ತಿಯ ಹಿತಾಸಕ್ತಿಯನ್ನು ಒಪ್ಪುವುದಿಲ್ಲ ಎಂದರು.

ಸಧ್ಯದಲ್ಲೇ ನಗರಸಭೆ ೧೦ನೇ ರ್‍ಯಾಂಕಿನೊಳಗೆ ಬರಲಿದೆ. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ಸಂಗ್ರಹ, ವಿಲೇವಾರಿಗಳು ನಡೆಯಬೇಕಿದೆ. ಈ ವಿಚಾರದಲ್ಲಿ ನಗರದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೆಲವು ದಿನಗಳಿಂದ ಕಸ ಸಂಗ್ರಹಣೆ ಮಾಡುತ್ತಿರುವವರ ನಿರ್ಲಕ್ಷ್ಯತನ ಕಂಡುಬಂದಿದೆ ಎಂದರು.

ನಗರೋತ್ಥಾನ ೪ ನೇ ಹಂತದಲ್ಲಿ ೧೮.೩೬ ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಗಿದೆ. ಟೆಂಡರ್ ಕರೆಯಬೇಕಾಗಿರುವ ೮ ಕೋಟಿ ರೂ.ನ ಕಾಮಗಾರಿ ಮತ್ತು ವೈಯಕ್ತಿ ಸೌಲಭ್ಯ ಕೊಡುವ ಕಾರ್ಯಕ್ರಮಕ್ಕೆ ೬ ಕೋಟಿ ರೂ. ಅನುದಾನ ಮೀಸಲಿದೆ. ಅದರಲ್ಲಿ ಇಂದಾವರದ ಜಿ ಪ್ಲಸ್ ಟು ಮಾದರಿ ಮನೆಗಳ ಬಡ ಫಲಾನುಭವಿಗಳು ವೈಯಕ್ತಿಕವಾಗಿ ಭರಿಸಬೇಕಿರುವ ಪಾಲಿಗೆ ೧ ಕೋಟಿ ರೂ. ನೀಡಲು ಉದ್ದೇಶಿಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸದಸ್ಯರುಗಳಾದ ಲಕ್ಷ್ಮಣ್, ಆಯುಕ್ತ ಬಿ.ಸಿ.ಬಸವರಾಜು, ಯೋಜನಾ ನಿರ್ದೇಶಕರಾದ ನಾಗರತ್ನ ಇತರರು ಉಪಸ್ಥಿತರಿದ್ದರು.

MLA HD Thammaiah visited various wards of Chikkamagaluru city

About Author

Leave a Reply

Your email address will not be published. Required fields are marked *

You may have missed