September 20, 2024

ಭಾರತ್ ಜೋಡೋದಲ್ಲಿ ಬಿಜೆಪಿ ಕಾರ್ಯಕರ್ತರ ದಾಂದಲೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

0
ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ

ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ

ಚಿಕ್ಕಮಗಳೂರು:  ಅಸ್ಸಾಂ ರಾಜ್ಯದಲ್ಲಿ ಸಂಸದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕರೆಯ ಮೇರೆಗೆ ರಾಜ್ಯಾದ್ಯಂತ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ರಾಹುಲ್ ಗಾಂಧಿಯವರ ಭಾರತ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ರಾಹುಲ್ ಗಾಂಧಿಯವರ ಜನಪ್ರಿಯತೆಯನ್ನು ಸಹಿಸದೇ ಬಿಜೆಪಿ ಕಾರ್ಯಕರ್ತರು ತಡೆ ಒಡ್ಡಿ ಹಲ್ಲೆ ಯತ್ನ ನಡೆಸಿರುವುದನ್ನು ಖಂಡಿಸಿದರು.

ದೇಶದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸಿದ್ದು, ಇದನ್ನು ಬೆಂಬಲಿಸಿ ರಾಜ್ಯ ಸರ್ಕಾರ ರಾಜ್ಯದ ೮೪೦ ಮುಜುರಾಯಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಭಕ್ತಿ ಪ್ರಧಾನ ಮಾಡಿದ್ದು, ಇಂತಹ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಬೆಳವಣಿಗೆ, ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿರುವುದು ವಿಷಾಧನೀಯ ಎಂದರು.

ದೇಶದ ಕಟ್ಟ ಕಡೆಯ ವ್ಯಕ್ತಿ ಯಾವ ದೇವಸ್ಥಾನಕ್ಕಾಗಲೀ ಯಾತ್ರೆ ಮಾಡುವುದಕ್ಕಾಗಲೀ ತಡೆಯಬಾರದೆಂಬ ನಿಯಮವಿದ್ದರೂ ಅಲ್ಲಿನ ಅಸ್ಸಾಂ ರಾಜ್ಯ ಸರ್ಕಾರ ಯಾತ್ರೆಯ ತಡೆಯುವ ಕೆಲಸಕ್ಕೆ ಮುಂದಾಗಿರುವುದು ಸಾಮಾನ್ಯ ಜ್ಞಾನವೂ ಇಲ್ಲ ಎಂದು ಆರೋಪಿಸಿದರು.

ಸಂಸದರು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ರಾಹುಲ್ ಗಾಂಧಿಯವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸಾಮಾನ್ಯ ಪ್ರಜೆಗಳ ಬಳಿ ತೆರಳಿ ಸಾಮಾನ್ಯ ಮಕ್ಕಳನ್ನೂ ಪ್ರೀತಿಯಿಂದ ಮುದ್ದಾಡುವ ತಾಯಿ ಹೃದಯ ಇರುವ ದೇಶದ ಹೆಮ್ಮೆಯ ಪುತ್ರ ಎಂದು ಬಣ್ಣಿಸಿದರು.

ಇದೇ ವರ್ತನೆಯನ್ನು ಬಿಜೆಪಿ ಮುಂದುವರೆಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ಸಂಸದ ರಾಹುಲ್ ಗಾಂಧಿಯವರ ಜನಪರವಾದ ಹೋರಾಟ ಮತ್ತು ಜನರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆಯಲು ಭಾರತ್ ಜೋಡೋ ನ್ಯಾಯ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯದಲ್ಲಿ ಜನರ ಅಭೂತಪೂರ್ವ ಬೆಂಬಲ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಒಗ್ಗೂಡುತ್ತಿರುವುದನ್ನು ಸಹಿಸಲಾಗದೆ ದಿಕ್ಕೆಟ್ಟಿಟರುವ ಕೇಂದ್ರದ ಬಿಜೆಪಿ ಸರ್ಕಾರ ಹಿಂದುತ್ವವನ್ನು ಗುತ್ತಿಗೆ ಪಡೆದುಕೊಂಡಂತೆ ವರ್ತಿಸಿರುವುದನ್ನು ಖಂಡಿಸಿದರು.

ಇತಿಹಾಸ ಪ್ರಸಿದ್ದ ದೇವಾಲಯ ಒಂದಕ್ಕೆ ಭೇಟಿ ನೀಡಿ ರಾಹುಲ್ ಗಾಂಧಿಯವರು ದೇವರ ದರ್ಶನಕ್ಕೆ ಮುಂದಾದಾಗ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿ ಹಲ್ಲೆ ಯತ್ನ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಯಾಗಿದೆ, ರಾಹುಲ್ ಗಾಂಧಿಯವರ ರಕ್ಷಣೆ ಮತ್ತು ದೇವಸ್ಥಾನ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದು ಅಸ್ಸಾಂ ರಾಜ್ಯದಲ್ಲಿ ಗೂಂಡಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ದೇವಾಲಯ, ಚರ್ಚ್, ಮಸೀದಿಗಳಿಗೆ ಪ್ರವೇಶ ಮುಕ್ತವಾಗಿದ್ದರೂ ನಿನ್ನೆ ನಡೆದ ರಾಮಲಲ್ಲಾ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಿಜೆಪಿ ತನ್ನ ಪಕ್ಷಕ್ಕೆ ಸೀಮಿತವೆಂಬಂತೆ ವರ್ತಿಸಿ, ರಾಹುಲ್ ಗಾಂಧಿಯವರ ತಡೆಯುವ ಪ್ರಯತ್ನ ಮಾಡಿರುವುದು ಸರಿಯಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ, ರಾಹುಲ್ ಗಾಂಧಿಯವರ ಹೋರಾಟದ ಪರವಾಗಿ ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್ ವಿಜಯ್‌ಕುಮಾರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಿದ ಮಾದಿರಯಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮುಂದಾಗಿರುವುದನ್ನು ಸಹಿಸದ ಬಿಜೆಪಿ ಇಂತಹ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆಯಾಗುತ್ತದೆ ಎಂದು ಪರಿಗಣಿಸಿ ಅವರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದಾರೆಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿಯವರು ದೇವಸ್ಥಾನ ಪ್ರವೇಶಕ್ಕೆ ಮುಂದಾದಾಗ ತಡೆ ಒಡ್ಡಿ ನಿರ್ಬಂಧ ವಿಧಿಸಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದ ಅವರು ರಾಹುಲ್ ಗಾಂಧಿಯವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹೆಚ್.ಪಿ ಮಂಜೇಗೌಡ, ಮಹಡಿಮನೆ ಸತೀಶ್, ಬಿ.ಹೆಚ್ ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ, ನಗರಾಧ್ಯಕ್ಷ ತನೂಜ್ ಕುಮಾರ್, ಮಾಜಿ ಸಿಡಿಎ ಅಧ್ಯಕ್ಷ ಸೈಯದ್ ಹನೀಫ್ ಮತ್ತಿತರರು ಇದ್ದರು.

Congress workers blocked the road and protested at Hanumanthappa Circle in the city

About Author

Leave a Reply

Your email address will not be published. Required fields are marked *