September 20, 2024

ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲಾ ಕ್ರಮ

0
ಜಿಲ್ಲಾಧಿಕಾರಿ ಕೆ.ಎನ್.ಮೀನಾ ನಾಗರಾಜ್ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿ ಕೆ.ಎನ್.ಮೀನಾ ನಾಗರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಮಂಗನ ಕಾಯಿಲೆ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಬಾಧಿತ ಪ್ರದೇಶಗಳಲ್ಲಿ ಮಂಗಗಳ ಸಾವಿನ ಪ್ರಕರಣಗಳ ಬಗ್ಗೆ ಕಣ್ಗಾವಲು ಸನ್ನದ್ಧಗೊಳಿಸಿ, ಸ್ಥಳೀಯ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ಮೀನಾ ನಾಗರಾಜ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಕೊಪ್ಪದಲ್ಲಿ ೧ ಹಾಗೂ ಎನ್.ಆರ್.ಪುರದಲ್ಲಿ ೨ ಮಂಗಗಳು ಸಾವಿಗೀಡಾಗಿರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. ಆದರೆ ಆ ವ್ಯಾಪ್ತಿಯ ಯಾರಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದರು.

ಸಧ್ಯ ಕೊಪ್ಪ ತಾಲ್ಲೂಕಿನ ಒಎಲ್‌ವಿ ಎಸ್ಟೇಟ್ ಮತ್ತು ಮೈಸೂರು ಪ್ಲಾಂಟೇಷನ್‌ಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಕಾಣಿಸಿಕೊಂಡಿವೆ. ಇಲ್ಲಿ ಮರಗಳನ್ನು ಕಡಿತಲೆ ಮಾಡಿದ ಸಂದರ್ಭದಲ್ಲಿ ಮಂಗಗಳ ಸತ್ತು ಉಣ್ಣೆಗಳು ಉತ್ಪತ್ತಿಯಾಗಿರುವ ಸಾಧ್ಯತೆ ಇದೆ. ಈ ಎರಡೂ ಪ್ರದೇಶಗಳು ಶಿವಮೊಗ್ಗ ಜಿಲ್ಲೆ ಗಡಿ ಪ್ರದೇಶಕ್ಕೆ ಹೊಂದಿಕೊಂಡಿವೆ. ಈ ವರೆಗೆ ಈ ಭಾಗದ ಒಟ್ಟು ೮೨ ಜನರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ೧೯ ಮಂದಿಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅರಣ್ಯ ಇಲಾಖೆ ಸಹಕಾರ ನೀಡುತ್ತಿವೆ. ಆರೋಗ್ಯ ಇಲಾಖೆಯು ನಿರಂತರವಾಗಿ ತಾಲ್ಲೂಕು ಮಟ್ಟದ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಸತ್ತ ಮಂಗದ ದೇಹದಲ್ಲಿ ಉತ್ಪತ್ತಿಯಾಗುವ ಉಣ್ಣೆಗಳು ಕಚ್ಚುವುದರಿಂದ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಉಣ್ಣೆಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಕೊಪ್ಪ ತಾಲ್ಲೂಕಿನ ಸುಮಾರು ೯೦೦ ಮನೆಗಳಿಗೆ ಪ್ರತಿ ಮನೆಗೆ ೪ ಬಾಟಲಿಯಂತೆ ದಿಪ ಎಂಬ ತೈಲವನ್ನು ವಿತರಿಸಲಾಗಿದ್ದು, ತೋಟಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು ಹಾಗೂ ಕಟ್ಟಿಗೆ ಸಂಗ್ರಹ ಇತರೆ ಕಾರಣಕ್ಕೆ ಅರಣ್ಯಕ್ಕೆ ಹೋಗುವವರು ಅದನ್ನು ಲೇಪಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಆರೋಗ್ಯ ಇಲಾಖೆಯಲ್ಲಿ ಈಗ ೨೮೮೩ ಬಾಟಲಿ ದಿಪ ತೈಲದ ಬಾಟಲಿಗಳು ದಾಸ್ತಾನಿದೆ ಇನ್ನಷ್ಟು ಪೂರೈಕೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಪ್ರವಾಸಿ ಜಿಲ್ಲೆಯಾಗಿರುವುದರಿಂದ ಹೋಂಸ್ಟೇ ಮಾಲೀಕರ ಸಂಘದ ಸಭೆ ಕರೆದು ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಮಂಗಗಳು ಸತ್ತು ಬಿದ್ದಿರುವುದು ಕಂಡು ಬಂದರೆ ಮಾಹಿತಿ ನೀಡುವುದು ಸೇರಿದಂತೆ ಇತರೆ ಮುನ್ನೆಚ್ಚರಿಕೆಗಳನ್ನೊಳಗೊಂಡ ಬೋರ್ಡ್‌ಗಳನ್ನು ಹಾಕಲು ತಿಳಿಸಲಾಗಿದೆ ಎಂದು ತಿಳಿಸಿದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆರೋಗ್ಯ ಇಲಾಖೆ ಇನ್ನಿತರೆ ಇಲಾಖೆಗಳನ್ನೊಳಗೊಂಡ ಮೂರ್‍ನಾಲ್ಕು ಸಭೆಗಳನ್ನು ನಡೆಸಿ ಸೂಕ್ತ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ಸೋಂಕಿತರ ಚಿಕಿತ್ಸೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವರ್ಷ ಮಳೆ ಅಭಾವ ಇರುವುದರಿಂದ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಮಳೆ ಆರಂಭವಾದರೆ ಸ್ವಾಭಾವಿಕವಾಗಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಮಂಗನ ಕಾಯಿಲೆಯು ಸಾಂಕ್ರಾಮಿಕ ರೋಗವಲ್ಲ ಅದು ಉಣ್ಣೆಗಳು ಕಚ್ಚುವುದರಿಂದ ಬರುವ ವೈರಾಣು ರೋಗವಾಗಿದೆ. ಅದಕ್ಕೆ ನಿರ್ದಿಷ್ಠ ಚಿಕಿತ್ಸೆ ಇರುವುದಿಲ್ಲ. ಇದೀಗ ತಜ್ಞರು ಹೊಸದಾಗಿ ಲಸಿಕೆಯನ್ನು ಸಂಶೋಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವತ್ಥಬಾಬು ಮಾತನಾಡಿ, ಮಂಗನ ಕಾಯಿಲೆ ಕಂಡು ಬಂದಿರುವ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಿ ಸೂಕ್ತ ಕಣ್ಗಾವಲು ಇಡಲಾಗಿದೆ ಎಂದು ತಿಳಿಸಿದರು.

ಕೊಪ್ಪ ತಾಲ್ಲೂಕು ಆಸ್ಪತ್ರೆಯಲ್ಲಿ ೧೦ ಐಸಿಯು ಬೆಡ್‌ಗಳಿರುವ ಒಂದು ವಿಶೇಷ ವಾರ್ಡನ್ನು ಮಂಗನ ಕಾಯಿಲೆ ಪೀಡಿತರ ಚಿಕಿತ್ಸೆಗೆಂದೇ ತೆರೆಯಲಾಗಿದೆ. ಸೋಂಕಿತರು ಗಂಭೀರ ಸ್ಥಿತಿಗೆ ತಲುಪಿದರೆ ಮಂಗಳೂರಿನ ಮಣಿಪಾಲ್ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತದೆ ಎಂದು ಹೇಳಿದರು.

District administration takes all steps to control monkey disease

About Author

Leave a Reply

Your email address will not be published. Required fields are marked *