September 20, 2024

ಮಾಧ್ಯಮಗಳು ಜನಾಭಿಪ್ರಾಯ ಮೂಡಿಸುವ ಸಾಮರ್ಥ್ಯ ಹೊಂದಿವೆ

0
ಸಂವಿಧಾನ ಜಾಗೃತಿ ಜಾತಾ ಅಭಿಯಾನ ಪತ್ರಕರ್ತರಿಂದ ವಿಚಾರ ಸಂಕಿರಣ

ಸಂವಿಧಾನ ಜಾಗೃತಿ ಜಾತಾ ಅಭಿಯಾನ ಪತ್ರಕರ್ತರಿಂದ ವಿಚಾರ ಸಂಕಿರಣ

ಚಿಕ್ಕಮಗಳೂರು: ಪತ್ರಿಕೋದ್ಯಮ ಇಂದು ತುಂಬಾ ಸಕ್ರಿಯವಾಗಿದ್ದು, ಎಲ್ಲೆಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಮ್ಮ ಮಾಧ್ಯಮಗಳ ಮೂಲಕ ತಿಳಿಸುತ್ತ ಆಡಳಿತ ಚುರುಕುಗೊಳ್ಳುವಂತೆ ಮಾಡಿ, ಸಮಸ್ಯೆಗಳಿಗೆ ಸ್ಪಂದಿಸಲು ಅನುವಾಗುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್ ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಜಾಗೃತಿ ಜಾತಾ ಅಭಿಯಾನ ಪತ್ರಕರ್ತರಿಂದ ವಿಚಾರ ಸಂಕಿರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವಾಗ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ನ್ಯಾಯವನ್ನು ಶೋಷಿತರಿಗೆ ಒದಗಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಮಾಧ್ಯಮ ಮನಸ್ಸುಗಳನ್ನು ಸೃಷ್ಠಿ ಮಾಡುತ್ತದೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಮಾಜಕ್ಕೆ, ಆಡಳಿತಕ್ಕೆ ಮುಟ್ಟಿಸುವ ಕೆಲಸ ಮಾಡುತ್ತದೆ. ಅಧಿಕಾರಿಗಳಾದ ನಾವು ಬೆಳಗ್ಗೆ ಎದ್ದ ತಕ್ಷಣ ಪತ್ರಿಕೆಗಳನ್ನು ಓದಿ ಅಲ್ಲಿ ವರದಿಯಾಗಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಪತ್ರಕರ್ತರ ಸಲಹೆಯಂತೆ ಸಂವಿಧಾನ ಕುರಿತು ಜಾಗೃತಿ ಜಾಥಾ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯಾ ಪ್ರದೇಶದ ವರದಿಗಾರರು, ಸಂಪಾದಕರನ್ನು ಒಳಗೊಂಡ ಶಿಬಿರವನ್ನು ಏರ್ಪಡಿಸಿ ಅಲ್ಲಿ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ಮನವರಿಕೆ ಮಾಡಿಕೊಡಲಾಗುವುದೆಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಆಶಯ ನುಡಿಗಳನ್ನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಇದೊಂದು ರಚನಾತ್ಮಕ ಕಾರ್ಯಕ್ರಮವಾಗಿದ್ದು, ಮಾಧ್ಯಮದವರ ಜೊತೆ ಸಂವಾದದಲ್ಲಿ ಬರುವ ಸಲಹೆ-ಸೂಚನೆಗಳನ್ನು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸಲು ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಂವಿಧಾನದ ೧೯(೧)ಎ ಅಡಿಯಲ್ಲಿ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಉಲ್ಲೇಖವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕೆಗಳು ದೇಶ ಸ್ವಾತಂತ್ರ್ಯ ಪಡೆಯಲು ತಮ್ಮ ಲೇಖನ, ವರದಿಗಳ ಮೂಲಕ ಜನ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿವೆ ಎಂದು ಶ್ಲಾಘಿಸಿದರು.

ಇಂದು ಸ್ವಾತಂತ್ರ್ಯ ಪಡೆದ ನಾವು ಅದರ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿರುವಂತೆ ಕರ್ತವ್ಯಗಳೂ ಇವೆ ಎಂಬುದನ್ನು ಮನಗಾಣಬೇಕಾಗಿದೆ ಎಂದು ಹೇಳಿದರು.

ವಾಕ್ ಸ್ವಾತಂತ್ರ್ಯವು ದುರುಪಯೋಗವಾಗಬಾರದು. ದೇಶದ ಸಾರ್ವಭೌಮತ್ವ, ಏಕತೆ, ಐಕ್ಯತೆ ಇವುಗಳಿಗೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕಾಗಿದೆ. ನಾಗರೀಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂವಿಧಾನದ ಆಶಯಗಳು ಹಾಗೂ ಕಾನೂನುಗಳ ಪ್ರಕಾರ ಸೌಲತ್ತು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವು ಈ ದೇಶದ ಜನರಿಗೆ ನೀಡಿರುವ ಒಂದು ಸದಾವಕಾಶ, ಸಮಾಜದಲ್ಲಿನ ಅಂಕುಡೊಂಕುಗಳಿಗೆ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿವ ನಿಟ್ಟಿನಲ್ಲಿ ಪತ್ರಿಕೋದ್ಯಮ ಕೆಲಸ ಮಾಡಬೇಕಿದೆ ಎಂದರು.

ಸಂವಿಧಾನವು ಇಂದು ನ್ಯಾಯಾಲಯಗಳಿಗೆ ಮತ್ತು ವಕೀಲರಿಗೆ ಸಂಬಂಧಿಸಿದ್ದು ಎಂಬ ಭಾವನೆ ಇದೆ. ಸಂವಿಧಾನದ ಮೂಲ ತತ್ವಗಳಾದ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮಬಾಳು ಸಮಾನತೆ, ಸಹೋದರತ್ವ ಇವುಗಳನ್ನು ತಿಳಿಸುವ ಅಗತ್ಯ ಇದೆ. ವಾಕ್ ಸ್ವಾತಂತ್ರ್ಯ ದುರ್ಬಳಕೆ ಆಗದೆ ಸ್ವ ಚಾರಿತ್ರ್ಯ, ಸ್ವಚ್ಛಂದವಾದಾಗ ಅದೊಂದು ಹೊಣೆಗಾರಿಕೆ ಎಂದು ಭಾವಿಸಬೇಕಿದೆ. ಸಂವಿಧಾನ ತತ್ವಗಳನ್ನು ಜನಪ್ರತಿನಿಧಿಗಳಿಗೂ ತಿಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಯೋಗೀಶ್ ಮಾತನಾಡಿ, ಸಂವಿಧಾನದ ಅಂಶಗಳ ಕುರಿತು ಮಾಹಿತಿ ನೀಡಿದರು. ಜ.೨೬ ರ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರಿಂದ ಉದ್ಘಾಟನೆಯಾದ ಸಂವಿಧಾನ ಜಾಗೃತಿ ಜಾಥಾ ಫೆ.೨೩ ರಂದು ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರಾದ ಸಿ.ಡಿ ಚಂದ್ರೇಗೌಡ, ಎನ್.ಕೆ ಗೋಪಿ, ನಿತ್ಯಾನಂದ, ರಘು, ಮಂಜುನಾಥ್ ಮಾತನಾಡಿ ಸಂವಿಧಾನದ ಆಶಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Seminar by Journalists of Constitution Awareness Jata Abhiyan

About Author

Leave a Reply

Your email address will not be published. Required fields are marked *