September 20, 2024

ಶ್ರೀ ಹನುಮಂತ ದೇವರ ಜಾಗ ಅತಿಕ್ರಮಣ ತೆರವಿಗೆ ಆಗ್ರಹ

0
ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ರಾಜು.ಆರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ತಾಲ್ಲೂಕು ಕಸಬಾ ಹೋಬಳಿಯ ಉಪ್ಪಳ್ಳಿ ಗ್ರಾಮದ ಶಾಂತಿ ನಗರ(ಕಲ್ದೊಡ್ಡಿ)ದಲ್ಲಿ ಶ್ರೀ ಹನುಮಂತ ದೇವರ ಜಾಗವನ್ನು ಅತಿಕ್ರಮಣ ಮಾಡಿ, ನಿವೇಶನವಾಗಿ ಪರಿವರ್ತಿಸುತ್ತಿರುವುದನ್ನು ಕೂಡಲೇ ನಿಲ್ಲಿಸಿ ಜಾಗವನ್ನು ತೆರವು ಮಾಡುವಂತೆ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ರಾಜು.ಆರ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಸರ್ವೇ ನಂ.೨೩ ರಲ್ಲಿ ೧ ಎಕರೆ ೨ಗುಂಟೆ ಹನುಮಂತ ದೇವರಿಗೆ ಸಂಬಂಧಿಸಿ ಜಾಗವಿದ್ದು, ಅದನ್ನು ಅಪರಿಚಿತ ಭೂಗಳ್ಳರು ಅತಿಕ್ರಮಣ ಮಾಡಿ, ಸರ್ವೇ ಅಧಿಕಾರಿಗಳು ಸರ್ವೇ ಮಾಡಿ ಗಡಿ ಗುರುತಿಸಿದ ನಂತರ ಕಾನೂನು ಬಾಹಿರವಾಗಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಛ ಮಾಡಿ ನಿವೇಶನವಾಗಿ ಪರಿವರ್ತಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರಭಾವಿ ರಾಜಕಾರಣಿಗಳೊಬ್ಬರ ಸಂಬಂಧಿಕರು ಸದರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆಂದು ದೂರಿದ ಅವರು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಇದೇ ಗ್ರಾಮದ ಸರ್ವೇ ನಂ.೩೧೯ ರಲ್ಲಿ ಹರಿಜನ ಕೇರಿ ಇದ್ದ ಬಗ್ಗೆ ದಿಶಾಂಕ್ ಆಪ್‌ನಲ್ಲಿ ನಮೂದಾಗಿದೆ. ಹರಿಜನರು ಮನೆ ಇಲ್ಲದೆ ನಿವೇಶನ ರಹಿತರಾಗಿ ವಾಸಿಸುತ್ತಿದ್ದು, ೩.೨೫ ಎಕರೆ ಪ್ರದೇಶದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಕಾನೂನು ಬಾಹಿರವಾಗಿ ಲೇಔಟ್ ನಿರ್ಮಾಣ ಮಾಡಿದ್ದು ಭೂಗಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೂಡಲೇ ಈ ಲೇಔಟ್ ಕಾಮಗಾರಿ ರದ್ದುಮಾಡಿ ಪರಿಶಿಷ್ಟ ಜಾತಿಯ ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಿಸಬೇಕು. ಇದೇ ಸರ್ವೇ ನಂಬರ್‌ನಲ್ಲಿ ಕಸಕನಾಯಕನಹಟ್ಟಿ ಗ್ರಾಮ ಇರುವುದು ದಾಖಲೆಗಳಲ್ಲಿ ನಮೂದಾಗಿದ್ದು, ಮಜರೆ ಗ್ರಾಮಠಾಣಾ ಜಾಗವೆಂದು ಉಲ್ಲೇಖವಾಗಿದೆ. ಇದೂ ಸಹ ಭೂಗಳ್ಳರ ಪಾಲಾಗಿದ್ದು, ಕೂಡಲೇ ಈ ನಿವೇಶನವನ್ನು ತೆರವುಮಾಡುವಂತೆ ಒತ್ತಾಯಿಸಿದರು.

ಈ ಜಾಗವನ್ನು ತೆರವು ಮಾಡಿ ಇದೇ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ ಮತ್ತು ಉಪ ಅಂಚೆ ಕಚೇರಿಯನ್ನು ನಿರ್ಮಿಸಿ ಕೊಡಲು ಮನವಿ ಮಾಡಿದ ಅವರು ವಿಳಂಭವಾದರೆ ನ್ಯಾಯಾಲಯದಲ್ಲಿ ಧಾವೆ ಹೂಡಲು ನಿರ್ಧರಿಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಂದೇ ಮಾತರಂ ಟ್ರಸ್ಟ್‌ನ ಪ್ರೀತೇಶ್, ಗಿರೀಶ್, ವಿನುತ, ಗೋವಿಂದ ಶೆಟ್ಟಿ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Demand to clear encroachment on Lord Hanuman’s land

About Author

Leave a Reply

Your email address will not be published. Required fields are marked *