September 20, 2024

ನಗರದಲ್ಲಿ ಸಂವಿಧಾನದ ಹಬ್ಬ ಅಂಗವಾಗಿ ವಿವಿಧ ಕಾರ್ಯಕ್ರಮ

0
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ. ಎನ್ ಮೀನಾ ನಾಗರಾಜ್ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ. ಎನ್ ಮೀನಾ ನಾಗರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕಳೆದ ಒಂದು ತಿಂಗಳಿನಿಂದ ಜಿಲ್ಲಾದ್ಯಂತ ಯಶಸ್ವಿಯಾಗಿ ಸಂಚರಿಸಿರುವ ಸಂವಿಧಾನದ ಜಾಗೃತಿ ಜಾಥಾದ ಅಂತಿಮ ದಿನವಾಗಿ ಜಿಲ್ಲಾಕೇಂದ್ರದಲ್ಲಿ ವಿವಿಧ ಆಕರ್ಷಣೀಯ ಕಾರ್ಯಕ್ರಮಗಳೊಂದಿಗೆ ಸಂವಿಧಾನ ಜಾಗೃತಿ ಹಬ್ಬ ಆಚರಣೆ ಮಾಡಲು ಸಿದ್ದತೆಗಳಾಗಿವೆ.

ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ,ಎನ್ ಮೀನಾ ನಾಗರಾಜ್ ಜಾಗೃತಿ ಜಾಥಾದ ಯಶಸ್ವಿಗೆ ಕಾರಣಕರ್ತರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ.ಗೋಪಾಲಕೃಷ್ಣ ಇವರುಗಳ ಸಮ್ಮುಖದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ|| ಯೋಗೀಶ್ ಅವರು ಸಂವಿಧಾನ ಹಬ್ಬ ಕಾರ್ಯಕ್ರಮದ ಮಾಹಿತಿ ನೀಡಿದರು.

ಕಳೆದ ಜ.೨೬ ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರು ಉದ್ಘಾಟಿಸುವ ಮೂಲಕ ಚಾಲನೆಯಾದ ಸಂವಿಧಾನ ಜಾಗೃತಿ ಜಾಥ ಇಡೀ ಜಿಲ್ಲಾದ್ಯಂತ ನಿಗಧಿಪಡಿಸಿದ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲೆಯಾದ್ಯಂತ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂಪೂರ್ಣವಾಗಿ ಯಶಸ್ವಿಯಾಗಿದ್ದು ವಿಭಾಗ ಮಟ್ಟಕ್ಕೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ ಜಿಲ್ಲೆ ೬ ನೇ ಸ್ಥಾನದಲ್ಲಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಜೊತೆಗೆ ಅತ್ಯಂತ ಸಂಭ್ರಮದಿಂದ ಮುಕ್ತಾಯಗೊಳಿಸಲು ಜಿಲ್ಲಾ ಮಟ್ಟದಲ್ಲಿ ಸಂವಿಧಾನದ ಹಬ್ಬ ಆಚರಿಸುವ ಮೂಲಕ ಸಮಾರೋಪ ಮಾಡಲಾಗುವುದೆಂದು ತಿಳಿಸಿದರು.

ಇದಕ್ಕಾಗಿ ವಿವಿಧ ಕಾಯರ್ತಕ್ರಮಗಳನ್ನು ಆಯೋಜನೆ ಮಾಡಿಕೊಂಡಿದ್ದು ಫೆ.೨೦ ರಂದು ಜಿಲ್ಲಾಕೇಂದ್ರದಲ್ಲಿ ಪಂಜಿನ ಮೆರವಣಿಗೆ ಹಾಗೂ ಫೆ.೨೧ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೭ ಗಂಟೆವರೆಗೆ ಅಧೀಕಾರಿಗಳ ಉಸ್ತುವಾರಿಯಲ್ಲಿ ಹಲವು ಕಾರ್ಯಕ್ರಮ ವ್ಯವಸ್ಥೆಗೊಳಿಸಲಾಗಿದೆ.

ನಾಳೆ ಬೆಳಗ್ಗೆ ೭ ಗಂಟೆಗೆ ನಗರದ ಹನುಮಂತಪ್ಪ ವೃತ್ತದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರದ ಮ್ರಮುಖ ೪ ವೃತ್ತದಿಂದ ಸ್ವಚ್ಚತಾ ಕಾರ್ಯಕ್ರಮದ ಮೂಲಕ ಕಸ ಸಂಗ್ರಹಿಸಿ ಸಾಗಿಸಲಾಗುವುದು ಸಂವಿಧಾನ ಅಂಬೇಡ್ಕರ್ ಕುರಿತು ಐಡಿಎಸ್‌ಜಿ ಕಾಲೇಜಿನಲ್ಲಿ ಗೋಡೆ ಬರಹ ಸ್ಪರ್ಧೆ ಹಾಗೂ ನಗರದ ಮುಖ್ಯರಸ್ತೆಗಳಲ್ಲಿ ಸಂವಿಧಾನ ಕುರಿತಂತೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಇದರ ಜೊತೆಗೆ ನಗರದಲ್ಲಿ ಬೆಳಗ್ಗೆ ೧೦ ಗಂಟೆಗೆ ಫ್ಲಾಗ್‌ತಾನ್ ಕಾರ್ಯಕ್ರಮ ಆಯೋಜಿಸಿದ್ದು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಿಡಿದು ತಾಲ್ಲೂಕು ಕಛೇರಿಯಿಂದ ಎಂ.ಜಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ಹಾಗೂ ನಂತರ ೧೦.೩೦ ಕ್ಕೆ ಇದೇಮಾರ್ಗದಲ್ಲಿ ಆಟೋರಿಕ್ಷಾ, ಸೈಕಲ್ ಜಾಥ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಪಾಲಿಟೆಕ್ನಿಕ್ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಜೆ ಗಾಳಿಪಟ ಸ್ಪರ್ಧೆ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮೊದಲ ಮೂರು ಸ್ಥಾನಗಳಿಗೆ ಬಹುಮಾನ ನೀಡಲಾಗುವುದು ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು. ಸಂಜೆ ಜಿಲ್ಲಾ ಆಟದ ಮೈದಾನದಲ್ಲಿ ಆಹಾರ ಮೇಳ ಏರ್ಪಡಿಸಿದ್ದು ಸಂವಿಧಾನ ಕುರುತಂತೆ ಚರ್ಚೆ, ವಿಚಾರ ವಿನಿಮಯ ಜೊತೆಗೆ ಪುಸ್ತಕಗಳ ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂವಿಧಾನ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಉಪಸ್ಥಿತರಿದ್ದರು.

Various programs in the city as part of the Constitution Festival

About Author

Leave a Reply

Your email address will not be published. Required fields are marked *