September 20, 2024

ಸಾಧಕರಾಗಬೇಕಾದರೆ ಕೆಲವನ್ನು ತ್ಯಾಗ ಮಾಡಬೇಕಾಗುತ್ತದೆ

0
ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರ

ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರ

ಚಿಕ್ಕಮಗಳೂರು: ಸಾಧಕರಾಗಬೇಕಾದರೆ ಕೆಲವನ್ನು ತ್ಯಾಗ ಮಾಡಬೇಕಾಗುತ್ತದೆ. ನಿತ್ಯ ಜೀವನದಲ್ಲಿ ಸರಳ ಶಿಸ್ತನ್ನು ಅಳವಡಿಸಿಕೊಂಡಲ್ಲಿ ವೃತ್ತಿ ಬದುಕಿನಲ್ಲೂ ಯಶಸ್ಸುಗಳಿಸಬಹುದು ಎಂದು ಆದಿಚುಂಚನಗಿರಿ ಯೂನಿವರ್ಸಿಟಿಯ ರಿಜಿಸ್ಟ್ರರ್ ಡಾ. ಸಿ.ಕೆ ಸುಬ್ಬರಾಯ ತಿಳಿಸಿದರು.

ಅವರು ಗುರುವಾರ ನಗರದ ಎಐಟಿ ಕಾಲೇಜು, ಬಿಜಿಎಸ್ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿದಿನ ಮದುವೆ, ಇತರೆ ಸಮಾರಂಭಗಳಲ್ಲಿ ಭಾಗವಹಿಸುತ್ತೇನೆ ಎಂದರೆ ಸಾಧನೆ ಆಗುವುದಿಲ್ಲ. ಅದಿಲ್ಲವಾದರೆ ಪೂರ್ತಿ ಸಮಯ ಟಿ.ವಿ., ಮೊಬೈಲ್‌ಗಳಲ್ಲಿ ಕಾಲ ಕಳೆಯುವುದರಲ್ಲಿ ಖುಷಿ ಇದೆ ಎಂದರೆ ಅದರಿಂದಲೂ ಸಾಧಕರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಖ್ಯಾತ ಉದ್ಯಮಿ ಜೆಮ್ಷಡ್ ಟಾಟ ಅವರು ಜೀವನದಲ್ಲಿ ಪ್ರತಿದಿನ ಸರಳವಾದ ಶಿಸ್ತನ್ನು ಅಳವಡಿಸಿಕೊಂಡ ಕಾರಣಕ್ಕೆ ಇಂದು ಟಾಟಾ ಸಂಸ್ಥೆ ಪಿನ್ ನಿಂದ ಹಿಡಿದು ಏರೋಪ್ಲೇನ್ ವರೆಗಿನ ಉತ್ಪನ್ನಗಳನ್ನು ತಯಾರಿಸುವ ಜಗತ್ತಿನ ಬೃಹತ್ ಸಂಸ್ಥೆಗಳಲ್ಲಿ ಒಂದಾಗಲು ಸಾಧ್ಯವಾಗಿದೆ ಎಂದರು.

ಒಬ್ಬ ವ್ಯಕ್ತಿ ಈದೇಶಕ್ಕೆ ಆ ರೀತಿಯ ಕೊಡುಗೆ ನೀಡಿದ್ದಾರೆ ಎನ್ನುವುದಾರೆ ನಮ್ಮಿಂದ ಏಕೆ ಸಾಧ್ಯವಾಗಬಾರದು. ನಮ್ಮಲ್ಲಿ ಭಗವಂತ ಎಲ್ಲಾ ರೀತಿಯ ಶಕ್ತಿಯನ್ನು ಕೊಟ್ಟಿದ್ದಾನೆ. ಆದರೆ ನಾವು ಸಣ್ಣ ಮಟ್ಟಕ್ಕೆ ಮಾತ್ರ ಸೀಮಿತವಾಗುತ್ತಿದ್ದೇವೆ. ಅದರಿಂದ ಹೊರಬರಬೇಕು. ಈಗಿನ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿವೆ. ಗೂಗಲ್‌ನಲ್ಲಿ ಹೋದರೆ ಎಲ್ಲರೀತಿಯ ಮಾಹಿತಿಗಳೂ ಇಂದು ಲಭ್ಯವಿದೆ ಅದನ್ನು ಬಳಸಿಕೊಳ್ಳಬೇಕು ಎಂದರು.

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಆ ಮಟ್ಟಿನ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತೆಂದು ಕೇಳಿದರೆ ೮ ವರ್ಷದ ತರಬೇತಿ ಅವಧಿಯಲ್ಲಿ ತಮ್ಮ ಮೊಬೈಲನ್ನು ೬ ತಿಂಗಳಿನಿಂದ ವರ್ಷದ ವರೆಗೆ ತಮ್ಮ ತಾಯಿ ಅಥವಾ ತರಬೇತುದಾರ ಬಳಿ ಕೊಟ್ಟಿರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ನಾವು ಒಂದಷ್ಟು ಸಾಧನೆ ಮಾಡಬೇಕು ಎನ್ನುವಾಗ ಒಂದಿಷ್ಟು ತ್ಯಾಗವನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಎಂಬಿಎ ಕೋರ್ಸ್‌ಗೆ ಎಲ್ಲಾ ಕಡೆಗಳಲ್ಲಿ ಅವಕಾಶಗಳಿವೆ ಕಲಿಕೆ ಸಂದರ್ಭದಲ್ಲಿ ಮೌಲ್ಯವರ್ದನೆ ಮಾಡಿಕೊಳ್ಳುವುದರಿಂದ ವೃತ್ತಿಯಲ್ಲಿ ಹೆಸರು, ಖ್ಯಾತಿ ಎಲ್ಲವನ್ನೂ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಫಾರ್ಮ್‌ಲ್ಯಾಂಡ್ ರೈನ್ ವಾಟರ್ ಹಾರ್‍ವೆಸ್ಟಿಂಗ್ ಸಿಸ್ಟಂನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾವಿರ ಅಡಿವರೆಗೆ ಕೊರೆದರು ನೀರು ಬರುತ್ತಿಲ್ಲ. ಬೋರ್‌ವೆಲ್ ಕೊರೆಸಲು ರೈತರು ಹಣ ಕೊಟ್ಟು ನೀರು ಇಲ್ಲ, ಹಣವು ಇಲ್ಲ ಎಂಬಂತಾಗಿದೆ ಎಂದು ವಿಷಾಧಿಸಿದರು.

ಕೇವಲ ೪೦೦ ರೂ. ವೇತನದಿಂದ ನನ್ನ ವೃತ್ತಿ ಜೀವನ ಆರಂಭವಾಯಿತು. ಸೇಲ್ಸ್ ಸೂಪರ್‌ವೈಸರ್ ಆಗಿ ಕೆಲಸ ಮಾಡುವಾಗ ಹಿರಿಯ ಸಹೋದ್ಯೋಗಿಯೊಬ್ಬರ ಸಹಕಾರದಿಂದ ಕಾಫಿ ತೋಟಗಳಲ್ಲಿ ಹನಿ ನೀರಾವರಿ ಕಲ್ಪಿಸುವ ಅವಕಾಶ ಸಿಕ್ಕಿತು. ಅಲ್ಲಿ ನನಗೆ ಗ್ರಾಹಕರುಗಳಿಂದ ಅತ್ಯುತ್ತಮವಾದ ಪ್ರತಿಕ್ರಿಯೆಗಳು ಬರಲಾರಂಭಿಸಿತು. ಅದರಿಂದಾಗಿ ಮನೆಗಳು, ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿಯಲ್ಲೂ ಮಳೆ ನೀರು ಕೊಯ್ಲು ಘಟಕಗಳನ್ನು ಸ್ಥಾಪಿಸುವ ಉದ್ದಿಮೆ ಆರಂಭಿಸಲು ಕಾರಣವಾಯಿತು ಎಂದು ವಿವವರಿಸಿದರು.

ಇದೇ ವೇಳೆ ತಮ್ಮ ವೃತ್ತಿ ಬದುಕಿನ ಯಶಸ್ಸಿಗೆ ಸಹಕರಿಸಿದ ಹಲವರನ್ನು ನೆನಪಿಸಿಕೊಂಡ ಅವರು, ಶ್ರದ್ಧೆ ಮತ್ತು ಛಲ ತಮ್ಮನ್ನು ಈ ಹಂತಕ್ಕೆ ಬೆಳೆಸಿದೆ, ಯುವಕರು, ವಿದ್ಯಾರ್ಥಿಗಳು ಇದನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಐಟಿ ಕಾಲೇಜು ಪ್ರಾಂಶುಪಾಲ ಸಿ.ಟಿ.ಜಯದೇವ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಎಂಬಿಎ ಮುಖ್ಯಸ್ಥ ಡಾ. ಪ್ರಕಾಶ್ ರಾವ್, ಮನೋಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

A three-day visionary workshop for MBA students

About Author

Leave a Reply

Your email address will not be published. Required fields are marked *