ಫೆ.25ಕ್ಕೆ ರಾಜ್ಯಮಟ್ಟದ ಮ್ಯಾರಥಾನ್ ರಸ್ತೆ ಓಟ ಸ್ಪರ್ಧೆ
ಚಿಕ್ಕಮಗಳೂರು: ರಾಜ್ಯ ಮಟ್ಟದ ಮ್ಯಾರಥಾನ್ ರಸ್ತೆ ಓಟ ಸ್ಪರ್ಧೆಯನ್ನು ಫೆ.೨೫ ರಂದು ಭಾನುವಾರ ಬೆಳಗ್ಗೆ ೬ ಗಂಟೆಗೆ ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ತರಬೇತುದಾರ ಕೆ.ಬಿ ಅಶೋಕ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ವಿಸ್ತಾರ್ ಪ್ಲಸ್ ಲೈಫ್ಸ್ಟೈಲ್, ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರುಗಳ ಸಹಯೋಗದೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಭವ್ಯ ಪರಿಸರ ತಾಣಗಳನ್ನು ರಾಜ್ಯಾದ್ಯಂತ ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ಈ ಮ್ಯಾರಥಾನ್ ರಸ್ತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಲು ಈ ಸ್ಪರ್ಧೆ ಪೂರಕವಾಗಲಿದೆ ಎಂದರು.
ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ೧೪ ವರ್ಷದ ಬಾಲಕ-ಬಾಲಕಿಯರಿಗೆ ೩ ಕಿ.ಮೀ, ೧೮ ವರ್ಷದಿಂದ ೩೫ ವರ್ಷದ ಮಹಿಳೆ ಮತ್ತು ಪುರಷರಿಗೆ ೧೦ ಕಿ.ಮೀ ಹಾಗೂ ೩೫ ರಿಂದ ೫೦ ವರ್ಷದ ವಯೋಮಾನದವರಿಗೆ ೧೦ ಕಿ.ಮೀ ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ರಸ್ತೆ ಓಟ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೨೫೦ ಕ್ಕೂ ಹೆಚ್ಚು ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಥ್ಲೆಟಿಕ್ ಕ್ರೀಡೆಯ ತರಬೇತುದಾರರಾದ ಫ್ರಾನ್ಸಿಸ್, ಶ್ರೀಮತಿ ಯಶೋಧ ಚಂಗಪ್ಪ ಉಪಸ್ಥಿತರಿದ್ದರು.
State level marathon road race on February 25