September 20, 2024

ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು

0
ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮ

ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮ

ಚಿಕ್ಕಮಗಳೂರು: ದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸಗಳನ್ನು ಕೇಂದ್ರ ಸರ್ಕಾರ ಯುದ್ದೋಪಾದಿಯಲ್ಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷದ ಅವಧಿಯಲ್ಲಿ ೯೦ ಸಾವಿರ ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗಿದೆ. ೨೫ ಸಾವಿರಕ್ಕಿಂತಲೂ ಹೆಚ್ಚು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಎಲ್ಲಾ ರೈಲ್ವೆ ಲೈನುಗಳ ವಿದ್ಯುಧೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ಅಗತ್ಯವಿರುವ ರೈಲ್ವೆ ಮಾರ್ಗಗಳಿಗೆ ಡಬ್ಲಿಂಗ್ ರೈಲ್ವೆ ಲೈನ್‌ಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. ಮಿತಿಮೀರಿದ ರೈಲು ಸಂಚಾರದಿಂದಾಗಿ ರಾಜ್ಯಕ್ಕೆ ಅಗತ್ಯವಿದ್ದ ಕಲ್ಲಿದ್ದಲು ಪೂರೈಕೆ ಆಗುತ್ತಿರಲಿಲ್ಲ. ಇದೀಗ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಸರಕು ಸಾಗಾಣೆಗಳ ರೈಲು ಸಂಚಾರಕ್ಕೆ ಬೇರೆ ಮಾರ್ಗ ಮತ್ತು ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಬೇರೆ ಮಾರ್ಗಗಳನ್ನು ನಿರ್ಮಿಸುವುದರ ಮೂಲಕ ಕ್ರಾಂತಿ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ೭೦ ವರ್ಷಗಳ ಅವಧಿಯಲ್ಲಿ ೭೪ ವಿಮಾನ ನಿಲ್ದಾಣಗಳಿದ್ದವು ಆದರೆ ಕಳೆದ ೧೦ ವರ್ಷಗಳ ಅವಧಿಯಲ್ಲಿ ಇನ್ನು ೭೪ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹಲವು ವರ್ಷಗಳ ಬೇಡಿಕೆಯಾಗಿದ್ದ, ಕಡೂರು ಚಿಕ್ಕಮಗಳೂರು ರೈಲು ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಸಂಚರಿಸುವ ಚಾರ್ಮಡಿ ಘಾಟ್ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಕುಸಿಯುತ್ತಿದ್ದು ಈ ವೇಳೆ ಸಕಲೇಶಪುರ, ಆಗುಂಬೆ, ಅಥವಾ ಶೃಂಗೇರಿ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ತೆರಳಬೇಕಾಗಿತ್ತು ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿ ಚಾರ್ಮಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದೆ ಎಂದರು.

ಚಿಕ್ಕಮಗಳೂರಿನಿಂದ ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ರಸ್ತೆಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ೪೦೦ ಕೋಟಿ ಅನುದಾನವನ್ನು ಮೀಸಲಿಟಿದ್ದಾರೆ ಶೃಂಗೇರಿಯಿಂದ ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಕೇಂದ್ರ ಸಚಿವರ ಮನವೂಲಿಸಿ ೨೫ ಕೋಟಿ ರೂ ಗಳನ್ನು ಮಂಜೂರು ಮಾಡಿಸಿದ್ದೇನೆ ತಮ್ಮ ಬೇಡಿಕೆ ಮೇರೆಗೆ ಕೇಂದ್ರದ ರೈಲ್ವೆ ಸಚಿವರುಗಳು ರೈಲ್ವೆ ಇಲಾಖೆಯ ಅಭಿವೃದ್ಧಿಗೆ ವಿಶೇಷ ಒತ್ತನ್ನು ನೀಡಿದ್ದಾರೆ ಎಂದರು.

ಚಿಕ್ಕಮಗಳೂರಿನಿಂದ ಹೆಚ್ಚುವರಿ ರೈಲುಗಳ ಓಡಾಟಕ್ಕಾಗಿ ಕೇಂದ್ರ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದ್ದು, ಇದಕ್ಕೆ ಕೇಂದ್ರ ಸಚಿವರು ಸ್ಪಂದಿಸಿ ಭರವಸೆ ನೀಡಿದ್ದಾರೆ, ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ಅಮೃತ್ ರೈಲ್ವೆ ನಿಲ್ದಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ರೂ. ೨೪ ಕೋಟಿಯನ್ನು ಮೀಸಲಿಡಲಾಗಿದೆ. ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಲಿಪ್ಟ್ ಸೌಲಭ್ಯ, ಎಕ್ಸಲೇಟರ್ ನಿರ್ಮಿಸಲಾಗುವುದು ರೈಲು ನಿಲ್ದಾಣದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗುವುದು, ಪ್ಲಾಟ್ ಪಾರಂ ಅಭಿವೃದ್ಧಿ ಪಡಿಸಲಾಗುವುದು ಮತ್ತು ಸಿ.ಸಿ ಕ್ಯಾಮರ ಅಳವಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮಾತನಾಡಿ ಜಿಲ್ಲೆಗೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಬೇಕಾದರೆ ರೈಲು ವ್ಯವಸ್ಥೆ, ರಸ್ತೆ ಸಂಪರ್ಕ ಅಭಿವೃದ್ಧಿ ಪಡಿಸಬೇಕು ಆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ರೈಲು ಹಳಿಗಳ ಅಭಿವೃದ್ಧಿ ಸಾಕಷ್ಟು ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಮೈಸೂರು ರೈಲ್ವೆ ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್, ಅರಸೀಕೆರೆ ರೈಲ್ವೆ ವಾಣಿಜ್ಯ ವಿಭಾಗದ ನಿರೀಕ್ಷಕ ಅಂಬರೀಷ್ ಮುಂತಾದವರಿದ್ದರು.

Running program of railway development works

About Author

Leave a Reply

Your email address will not be published. Required fields are marked *