September 20, 2024

ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯ

0
ಮೂಗ್ತಿಹಳ್ಳಿಯಲ್ಲಿ ಶಾಲಯಲ್ಲಿ ನೂತನ ಕಟ್ಟಡ ಉದ್ಘಾಟನೆ

ಮೂಗ್ತಿಹಳ್ಳಿಯಲ್ಲಿ ಶಾಲಯಲ್ಲಿ ನೂತನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು: ಇತ್ತೀಚೆಗೆ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದರೆ ಪ್ರತಿಷ್ಠೆಯಾಗಿದ್ದು, ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆಂಬ ಕೀಳರಿಮೆ ಬೇಡ ಎಂದು ವಿದ್ಯಾರ್ಥಿಗಳಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ ಮನವಿ ಮಾಡಿದರು.

ಅವರು ಇಂದು ಮೂಗ್ತಿಹಳ್ಳಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ವಿವೇಕ ಯೋಜನೆಯಡಿ ೧೬.೪೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಬೇಕೆಂಬ ನಿಟ್ಟಿನಲ್ಲಿ ಸರ್ಕಾರ ವಿವೇಕ ಯೋಜನೆಯಡಿ ಈ ಶಾಲೆಗೆ ನೂತನ ಕೊಠಡಿ ನಿರ್ಮಿಸಲು ಅನುದಾನ ನೀಡಿದ್ದು, ಇದರ ಉದ್ಘಾಟನೆ ನೆರವೇರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ದೇಶದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದವರು ಸಾಮಾನ್ಯರಾಗಿ ಜನಿಸಿ ಅಸಮಾನ್ಯರಾಗಿರುವವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವವರೇ ಆಗಿದ್ದಾರೆ. ಹಿಂದೆ ಸರ್ಕಾರಿ ಉದ್ಯೋಗಕ್ಕೆ ಸೇರಬೇಕಾದರೆ ಹಣ, ರಾಜಕೀಯ ವ್ಯಕ್ತಿಗಳ ಪ್ರಭಾವ ಬೀರಿ ಕೆಲಸಕ್ಕೆ ಸೇರಬೇಕಾಗಿತ್ತು. ಆದರೆ ಈಗ ಮೆರಿಟ್ ಆಧಾರದಲ್ಲಿ ಗುಣಮಟ್ಟದ ಶಿಕ್ಷಕರು ನೇಮಕವಾಗುತ್ತಿರುವುದರಿಂದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅದನ್ನು ಚುನಾಯಿತ ಪ್ರತಿನಿಧಗಳಾದ ನಾವು ಒಂದೊಂದೇ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮುಂದೆ ಸರ್ಕಾರಿ ಶಾಲೆಗಳ ಪ್ರವೇಶದ ಬೇಡಿಕೆ ಹೆಚ್ಚಾಗಲು ಪೋಷಕರ ಮನ ವೊಲಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನು ಬದಲಿಸುವ ಪ್ರಮುಖ ಘಟ್ಟವಾಗಿದ್ದು, ಅದಕ್ಕಾಗಿ ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಈಗ ಸಿಕ್ಕಿರುವ ಸಮಯವನ್ನು ವ್ಯರ್ಥಮಾಡಿ ಗಮನ ಬೇರೆಡೆ ಹರಿಸಿದರೆ ಇಡೀ ಬದುಕು ಕಷ್ಟವಾಗುತ್ತದೆ. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹೇಳುತ್ತಾರೆ ಶಿಕ್ಷಣ ವಿಶ್ವದ ಶಕ್ತಿಯುತ ಬಲವಾದ ಆಯುಧ, ಇದು ಪ್ರಪಂಚದ ದಿಕ್ಕನ್ನು ಬದಲಿಸುವ ದೊಡ್ಡ ಆಯುಧ ಎಂದು ಹೇಳಿದ್ದಾರೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಗ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ ಉಮೇಶ್ ಶೆಟ್ಟಿ, ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಪ್ರಭಾಕರ್, ರಾಮಸ್ವಾಮಿ, ಅಂಬಿಕಾ, ದಿನೇಶ್, ವಿಕ್ರಾಂತ್, ರಮೇಶ್, ಸತೀಶ್, ಪದ್ಮನಾಭ, ಪಿಡಬ್ಲೂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗವಿರಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಉಪಸ್ಥಿತರಿದ್ದರು. ಪ್ರಭಾಕರ್ ಸ್ವಾಗತಿಸಿ ವಂದಿಸಿದರು.

Students can see a better future if they study diligently

About Author

Leave a Reply

Your email address will not be published. Required fields are marked *