September 21, 2024

ಪ್ರತೀ ತಾಲೂಕಿಗೆ ಎರಡು ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

0
ಲಕ್ಯಾ ಗ್ರಾಮದಲ್ಲಿ ೪ ಶಾಲಾ ಕೊಠಡಿಗಳ ಉದ್ಘಾಟನೆ

ಲಕ್ಯಾ ಗ್ರಾಮದಲ್ಲಿ ೪ ಶಾಲಾ ಕೊಠಡಿಗಳ ಉದ್ಘಾಟನೆ

ಚಿಕ್ಕಮಗಳೂರು: ರಾಜ್ಯದ ಪ್ರತೀ ತಾಲೂಕಿಗೆ ಎರಡು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ಅವರು ಲಕ್ಯಾ ಗ್ರಾಮದಲ್ಲಿ ವಿವೇಕ ಯೋಜನೆಯಡಿ ಸುಮಾರು ೪೪ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ೪ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಿ, ಸರಿಸಮಾನವಾಗಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಭಾಗವಾಗಿ ಇಂದು ಲಕ್ಯಾ ಗ್ರಾಮದಲ್ಲಿ ೪ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಇಂದು ಉದ್ಘಾಟನೆಯಾಗಿರುವ ಶಾಲಾ ಕೊಠಡಿಗಳ ಈ ಸೌಲಭ್ಯವನ್ನು ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರ ಮಕ್ಕಳು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಗ್ರಾಮೀಣ ಭಾಗದಲ್ಲಿ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿದೆ. ಬಿಸಿಯೂಟ, ಹಾಲು, ಮೊಟ್ಟೆ, ಉಚಿತ ಸಮವಸ್ತ್ರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರಾಜ್‌ಶೇಖರ್ ವಹಿಸಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಶೋಭಾ ಜಗದೀಶ್, ಕಾಂತರಾಜ್ ಅರಸ್, ಮಾಜಿ ತಾ.ಪಂ ಸದಸ್ಯ ಎಲ್.ಟಿ ರಂಗಪ್ಪ, ಸರೋಜಾ ನಾಗರಾಜ್, ಶಾಂತಮ್ಮ, ಹಾಲಪ್ಪ, ಯೋಗೀಶ್, ನಾಗರಾಜ್, ಭರತೇಶ್, ಶಶಿಧರ್, ಉಮೇಶ್. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗವಿರಂಗಪ್ಪ ಉಪಸ್ಥಿತರಿದ್ದರು.

Two Karnataka public schools for each taluk

About Author

Leave a Reply

Your email address will not be published. Required fields are marked *