September 21, 2024

ಸಾಹಿತಿ ಚಟ್ನಳ್ಳಿ ಮಹೇಶ್ ಜೀವನೋತ್ಸಾಹವನ್ನು ಮೆಚ್ಚಬೇಕು

0
ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಅಭಿನಂದನಾ ಸಮಾರಂಭ

ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು: ಸಾಹಿತಿ ಚಟ್ನಳ್ಳಿ ಮಹೇಶ್ ಎಲ್ಲರಿಂದ ಒಳ್ಳೆಯವನು ಎನ್ನಿಸಿಕೊಂಡು ಇಲ್ಲಿಯವರೆಗೆ ಸಾರ್ಥಕವಾದ ಜೀವನವನ್ನು ಬಾಳಿದ್ದಾರೆ. ಅವರ ಜೀವನೋತ್ಸಾಹವನ್ನು ಮೆಚ್ಚಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಅಭಿಪ್ರಾಯಿಸಿದರು.

ಅವರು ಗುರುವಾರ ವಾಗ್ಮಿ, ಸಾಹಿತಿ, ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಚಿಂತೆಯನ್ನು ಬದಿಗಿಟ್ಟು ಚಿಂತನವನ್ನು ಮೈಗೂಡಿಸಿಕೊಂಡರೆ ದೈಹಿಕವಾಗಿ ಅನಾರೋಗ್ಯ ಇದ್ದರೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಚಟ್ನಳ್ಳಿ ಮಹೇಶ್ ಅವರು ಚಿಂತನವನ್ನು ಮೈಗೂಡಿಸಿಕೊಂಡಿರುವುದಕ್ಕೆ ಇಂದಿಗೂ ಅವರನ್ನು ಎಲ್ಲರೂ ಹೊಗಳುತ್ತಾರೆ ಎಂದರು.

ಎಂದಿಗೂ ಸಮಾಜಮುಖಿ ಕೆಲಸಗಳನ್ನು ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಯಾರು ಸದಾ ಕ್ರಿಯಾಶೀಲರಾಗಿದ್ದರೆ ದೈಹಿಕ ಅನಾರೋಗ್ಯವನ್ನು ಮೆಟ್ಟಿ ನಿಲ್ಲಲು ಸಾಧ್ಯ. ಮನುಷ್ಯ ಸೋಮಾರಿತನದಿಂದ ಹೊರಬರದೇ ಇದ್ದರೆ ಕುಬ್ಜನಾಗುತ್ತಾ ಹೋಗುತ್ತಾನೆ. ಮಾಡಬೇಕಾದ ಕಾಯಕದ ಬಗ್ಗೆ ಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ಕಾಯಿಲೆ ತನ್ನಷ್ಟಕ್ಕೆ ತಾನೇ ಹಿಂದಕ್ಕೆ ಸರಿಯುತ್ತದೆ ಎಂದರು.

ಮನುಷ್ಯನಿಗೆ ಶ್ವಾಸ ನಿಂತು ಹೋದರೆ ಆತ ಸತ್ತ ಹಾಗೆ. ಆದರೆ ವಿಶ್ವಾಸ ಕಳೆದುಕೊಂಡುಬಿಟ್ಟರೆ ಆತ ಬದುಕಿದ್ದಾಗಲೇ ಸತ್ತ ಹಾಗೆ. ಮಹೇಶ್ ಅವರು ಆ ವಿಶ್ವಾಸವನ್ನು ಎಲ್ಲರೊಂದಿಗೆ ಕಾಪಾಡಿಕೊಂಡಿದ್ದಾರೆ. ಒಬ್ಬ ಮೂಖನನ್ನೂ ಮಾತನಾಡಿಸುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಅವರಿಗೆ ವೈರತ್ವ ಎನ್ನುವುದೇ ಇಲ್ಲ.

ಮಹೇಶ್ ಕ್ರಿಯಾಶೀಲ ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ವ್ಯಕ್ತಿ. ಕಾಡಿನಲ್ಲೂ ನಾಡನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಬದುಕು ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮನುಷ್ಯ ಸ್ಥಾವರವಾದರೆ ಇಲ್ಲದ ರೋಗಗಳು ಬಂದು ಅಂಟಿಕೊಳ್ಳಲಾರಂಭಿಸುತ್ತವೆ. ಆತ ಜಂಗಮನಾದರೆ ಒಂದೊಂದೇ ರೋಗಗಳು ಹಿಂದಕ್ಕೆ ಸರಿಯಲಾರಂಭಿಸುತ್ತವೆ. ಹಾಗೆ ಮಹೇಶ್ ಇರುವಷ್ಟು ಕಾಲ ಆರೋಗ್ಯದಿಂದ ಇದ್ದು, ಸಮಾಜ ಮುಖಿಯಾಗಿಯೇ ಇರುವಂತಾಗಲಿ ಎಂದರು.

ಸಮಾರಂಭದ ಗೌರವಾಧ್ಯಕ್ಷರಾಗಿದ್ದ ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಚಟ್ನಳ್ಳಿ ಮಹೇಶ್ ಅವರದ್ದು ನಮ್ಮೊಂದಿಗೆ ಎರಡು ದಶಕಗಳ ಒಡನಾಟ, ಅವರು ನಮ್ಮೊಂದಿಗಿದ್ದು, ನಮ್ಮ ಮತ್ತು ಜನರ ನಡುವಿನ ಸಂಭಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದರು.

ಶ್ವಾಸ ಮತ್ತು ವಿಶ್ವಾಸಕ್ಕೆ ಒಂದೇ ಅಕ್ಷರದ ವ್ಯತ್ಯಾಸ. ಶ್ವಾಸ ನಿಂತರೆ ಜೀವನ ಅಂತ್ಯವಾಗುತ್ತದೆ. ವಿಶ್ವಾಸ ಹೋದರೆ ಸಂಬಂಧ ಕೊನೆಯಾಗುತ್ತದೆ. ಮನುಷ್ಯರ ನಡುವಿನ ಸಂಬಂಧಕ್ಕೆ ಶ್ವಾಸದಷ್ಟೇ ವಿಶ್ವಾಸವೂ ಮುಖ್ಯ. ಅಧಿಕಾರದ ಸಂಬಂಧ ಅಧಿಕಾರ ಇರುವವರೆಗೆ ಮಾತ್ರ. ಆದರೆ ವಿಶ್ವಾಸದ ಸಂಬಂಧ ಜೀವನದ ಕೊನೆ ವರೆಗೆ ಇರುತ್ತದೆ. ಮಹೇಶಣ್ಣ ಮತ್ತು ನನ್ನ ಜೊತೆಗಿರುವುದು ವಿಶ್ವಾಸದ ಸಂಬಂಧ. ಅದು ಕಡೆವರೆಗೆ ಇರಲಿ ಎನ್ನುವುದು ನನ್ನ ಅಪೇಕ್ಷೆ ಎಂದರು.

ಮಹೇಶಣ್ಣ ಒಂದು ರೀತಿ ಹಳ್ಳಿ ವಜ್ರವೇ, ದೇಶ ವಿದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳಲ್ಲಿ ತಮ್ಮ ವಾಗ್ಝರಿಯನ್ನು ಹರಿಸಿದ್ದರೂ ಕೂಡ ಮಹೇಶಣ್ಣನಿಗೆ ಅಹಂಕಾರ ಮೆತ್ತಿಲ್ಲ.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ೬೦ ಸಂವತ್ಸರ ಪೂರೈಸಿರುವ ಚಟ್ನಳ್ಳಿ ಮಹೇಶ್ ಸದಾ ಕ್ರಿಯಾಶೀಲರಾಗಿರುವವರು ಅವರು ನಮ್ಮ ಸಮಾಜದ ಆಸ್ತಿ ಎಂದರು.

ಸಮಾರಂಭದಲ್ಲಿ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹಾಗೂ ಅಭಿನಂದನಾ ಸಮಿತಿ ಖಜಾಂಚಿ ಅಣಬೇರು ರಾಜಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಪ್ರಭುಲಿಂಗಶಾಸ್ತ್ರಿ, ಡಾ.ಜೆಪಿ.ಕೃಷ್ಣೇಗೌಡ, ಚಂದ್ರಶೇಖರ್, ಧನಂಜಯ ಸರ್ಜಿ, ಮುಕ್ತ ಕಾಗಲಗಿ ಇತರರು ಹಾಜರಿದ್ದರು.
ಇದೇ ವೇಳೆ ಚಟ್ನಳ್ಳಿ ಮಹೇಶ್ ಅವರನ್ನು ಕುರಿತ ಹಳ್ಳಿ ವಜ್ರ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

Literary Chatnalli Mahesh’s zest for life should be admired

About Author

Leave a Reply

Your email address will not be published. Required fields are marked *