September 21, 2024

ಕಾಫಿನಾಡಿನಲ್ಲಿ ಶ್ರದ್ಧ-ಭಕ್ತಿಯಿಂದ ಶಿವರಾತ್ರಿ ಆಚರಣೆ

0
ಕಾಪಿನಾಡಿನಲ್ಲಿ ಶ್ರದ್ಧ-ಭಕ್ತಿಯಿಂದ ಶಿವರಾತ್ರಿ ಆಚರಣೆ

ಕಾಪಿನಾಡಿನಲ್ಲಿ ಶ್ರದ್ಧ-ಭಕ್ತಿಯಿಂದ ಶಿವರಾತ್ರಿ ಆಚರಣೆ

ಚಿಕ್ಕಮಗಳೂರು: ಶಿವರಾತ್ರಿ ಅಂಗವಾಗಿ ಶುಕ್ರವಾರ ನಗರದೆಲ್ಲೆಡೆ ಜಪ, ತಪ, ಭಜನೆ, ಜಾಗರಣೆ, ವಿಶೇಷ ಪೂಜೆಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಶಿವಾಲಯಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಏಕಾಗ್ರತೆಯಿಂದ ಪರಶಿವನ ನಾಮ ಸ್ಮರಣೆ ಮಾಡಿದ ಭಕ್ತರು, ಆಹೋ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಉಪವಾಸ ವ್ರತಗಳನ್ನು ನಡೆಸಿ, ಪರಮೇಶ್ವರನ ಕೃಪೆಗೆ ಪಾತ್ರರಾದರು.

ಈಶ್ವರ ದೇವಾಲಯಗಳಲ್ಲಿ ನಿರಂತರ ಘಂಟಾನಾದ, ಅಖಂಡ ಭಜನೆ, ಬಿಲ್ವಪತ್ರಾರ್ಚನೆ, ಪ್ರಸಾದ ವಿನಿಯೋಗ ಇನ್ನಿತರೆ ಧಾರ್ಮಿಕ ಆಚರಣೆಗಳು ನಡೆದವು. ರಾತ್ರಿ ಶಿವನ ದರ್ಶನ ಮಾಡಿ ಜಾಗರಣೆ ಆರಂಭಿಸಿದರು. ಮುಂಜಾನೆಯಿಂದಲೇ ಜನರು ಬಳಿ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಹಲವು ಭಕ್ತರು ೨೪ ಗಂಟೆ ಅಖಂಡ ಧ್ಯಾನದಲ್ಲಿ ಕುಳಿತರು. ಶತ ರುದ್ರಾಭಿಷೇಕ, ರುದ್ರ ಮಂತ್ರ ಪಠನ, ಸಾಮೂಹಿಕ ಏಕಾದಶ, ರುದ್ರ, ಶಿವ ನಮಸ್ಕಾರಗಳು ಶ್ರದ್ಧೆಯಿಂದ ಆಚರಿಸಲ್ಪಟ್ಟವು.

ನಗರದ ನಾಲ್ಕು ದಿಕ್ಕುಗಳಲ್ಲೂ ಇರುವ ಪುರಾತನ ಶಿವನ ದೇವಸ್ಥಾನಗಳಲ್ಲಿ ಹರನಾಮ ಸ್ಮರಣೆ ಕಂಡುಬಂತು. ಶ್ರೀ ಬೋಳ ರಾಮೇಶ್ವರ ದೇವಾಲಯ, ಅರವಿಂದನಗರದ ಶ್ರೀ ಸೋಮೇಶ್ವರ ಸನ್ನಿಧಿ, ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಾಸ್ಥಾನ, ಉಪ್ಪಳ್ಳಿಯಲ್ಲಿರುವ ಸೋಮೇಶ್ವರ ದೇವಸ್ಥಾನಗಳಲ್ಲಿ ನಿರಂತರ ಅಭಿಷೇಕ, ವಿಶೇಷ ಪೂಜೆಗಳು ನಡೆದವು.

ಬೋಳರಾಮೇಶ್ವರ ದೇವಸ್ಥಾನದಲ್ಲಿ ಅರ್ಚಕ ಕುಮಾರಸ್ವಾಮಿ ನೇತೃತ್ವದಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಪುಷ್ಪಾರ್ಚನೆ, ಅಲಂಕಾರ ಮಹಾಮಂಗಳಾರತಿ ನೆರವೇರಲ್ಪಟ್ಟಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಸಂಜೆಯಿಂದ ಬೆಳಗಿನ ಜಾವದ ವರೆಗೆ ಮಹಿಳೆಯರು ಮಕ್ಕಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಬೋಳರಾಮೇಶ್ವರ ದೇವಸ್ಥಾನದ ಬಳಿ ಭಕ್ತರ ಸರತಿಸಾಲು ಅರಣ್ಯ ಇಲಾಖೆ ಕಛೇರಿವರೆಗೂ ಬೆಳೆದಿತ್ತ್ತು. ರಾತ್ರಿಯಿಡೀ ನಾಲ್ಕು ಜಾವದಲ್ಲೂ ನಿರಂತರವಾಗಿ ಗಂಗಾಜಲದಿಂದ ಶಿವನಿಗೆ ರುದ್ರಾಭಿಶೇಕ ಮಾಡಲಾಯಿತು. ಆಹೋರಾತ್ರಿ ಭಕ್ತರಿಂದ ಭಜನೆ. ಶಿವನಾಮ ಸ್ಮರಣೆ ನಡೆದವು. ಪ್ರತಿ ವರ್ಷದಂತೆ ಮುಜರಾಯಿ ಇಲಾಖೆಯಿಂದ ಪೂರೈಸಲಾದ ಗಂಗಾಜಲವನ್ನು ಶಿವಾಲಯಗಳಲ್ಲಿ ಭಕ್ತರಿಗೂ ವಿತರಿಸಿ, ದೇವರ ಅಭಿಷೇಕಕ್ಕೂ ಬಳಸಲಾಯಿತು.

ಶಿವಾಲಯಗಳಲ್ಲ್ಲಿ ಸಾಮೂಹಿಕ ರುದ್ರಪಠಣ, ಶ್ರೀ ಧನ್ವಂತರಿ ಮೃತ್ಯುಂಜಯ ಹಾಗೂ ಶ್ರೀಕಂಠೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಂಜೆ ಪ್ರದೋಷ ಪೂಜೆ ನಡೆಯಿತು. ಭ್ರಹ್ಮಕುಮಾರೀಸ್ ಸಂಸ್ಥೆ ವತಿಯಿಂದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸಹಸ್ರ ಲಿಂಗ ದರ್ಶನ ಹಾಗೂ ಸಂಜೆ ಶಿವನ ಅವತಾರ, ಆತ್ಮ ಪರಮಾತ್ಮನ ನೈಜ ಗುಣಗಳ ಬಗ್ಗೆ ಜಾಗೃತಿ ಮೂಡಿಸುವ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Celebrating Shivratri with devotion in Kapinad

 

 

About Author

Leave a Reply

Your email address will not be published. Required fields are marked *