September 21, 2024

ದೇಶದ ಸರ್ವಾಂಗೀಣ ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೋಮ್ಮೆ ಅಧಿಕಾರಕ್ಕೆ ಬರಬೇಕು

0
ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪರಿಕ್ರಮ ಯಾತ್ರೆ ಕಾರ್ಯಕ್ರಮ

ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪರಿಕ್ರಮ ಯಾತ್ರೆ ಕಾರ್ಯಕ್ರಮ

ಚಿಕ್ಕಮಗಳೂರು: ದೇಶದ ಸರ್ವಾಂಗೀಣ ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹತ್ತು ಹಲವು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಪ್ರತಿ ವ್ಯಕ್ತಿಯ ಮನಸಿಗೆ ಮುಟ್ಟಿಸುವ ಕೆಲಸವನ್ನು ಎಲ್ಲಾ ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಕರೆ ನೀಡಿದರು.

ಅವರು ತಾಲ್ಲೂಕಿನ ಮುಗಳವಳ್ಳಿಯಲ್ಲಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪರಿಕ್ರಮ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರು ದೇಶದ ರೈತರು, ಸರ್ವ ಜನಾಂಗಕ್ಕೂ ಕೆಲಸ ಮಾಡುತ್ತಿದ್ದಾರೆ. ಅದನ್ನು ಪ್ರತಿ ವ್ಯಕ್ತಿಯ ಮನಸಿಗೆ ಮುಟ್ಟಿಸುವ ಕೆಲಸವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ಎಂದಿಗೂ ಸುಳ್ಳು ಹೇಳುತ್ತಾ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ. ನಾವು ಅಂಬೇಡ್ಕರ್ ಅನುಯಾಯಿಗಳೆಂದು ಸೃಷ್ಠಿ ಮಾಡಿಕೊಂಡು ಬಂದಿದ್ದಾರೆ. ಆದರೆ ಅಂಬೇಡ್ಕರ್ ಚುನಾವಣೆ ಸ್ಪರ್ಧಿಸಿದ ಸಂದರ್ಭದಲ್ಲಿ ಓರ್ವ ಅನಕ್ಷರಸ್ಥನನ್ನು ನಿಲ್ಲಿಸಿ ಅಂಬೇಡ್ಕರ್‌ರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅಂದು ಅಂಬೇಡ್ಕರ್ ಅವರ ಪರವಾಗಿ ಕೆಲಸ ಮಾಡಿದ್ದು ಜನಸಂಘ ಎಂದರು.

ಈ ದೇಶಕ್ಕೆ ಸಂವಿಧಾನ ಕೊಟ್ಟು, ಬಡವರಿಗೆ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ನಿಧನ ಹೊಂದಿದಾಗ ಅವರ ಸಮಾಧಿಗೂ ಕಾಂಗ್ರೆಸ್ ಜಾಗ ಕೊಡಲಿಲ್ಲ. ಆದರೆ ಇಂದಿರಾ ಗಾಂಧಿಗೆ ೫೦ ಎಕರೆ, ರಾಜೀವ್‌ಗಾಂಧಿಗೆ ೭೦ ಎಕರೆ ಹೀಗೆ ಉಳಿದವರಿಗೆಲ್ಲ ಜಾಗ ಕೊಟ್ಟರು. ಅಂಬೇಡ್ಕರ್ ನಿಧನರಾದಾಗ ಒಂದು ಗೌರವವನ್ನೂ ಸಲ್ಲಿಸದ ಕಾಂಗ್ರೆಸಿಗರು ಅಂಬೇಡ್ಕರ್ ಪರ ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.

ರೈತರ ಬಗ್ಗೆಯೂ ಇದೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಚುನಾವಣೆಗೆ ಮುನ್ನ ಸಿದ್ದರಾಮಯ್ಯ ೧೦ ಕೆಜಿ ಅಕ್ಕಿ ಎಂದರು ಈಗೆಲ್ಲಿ ಕೊಡುತ್ತಿದ್ದಾರೆ. ಮೋದಿ ಅವರು ಕೊಡುತ್ತಿರುವ ೫ ಕೆಜಿ ಅಕ್ಕಿಯನ್ನು ನಾನು ಕೊಟ್ಟೆ ಎಂದು ಸುಳ್ಳು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದರು.

ಸ್ವಾತಂತ್ರ್ಯ ನಂತರ ಇಡೀ ದೇಶದ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಹಾಕಿದ್ದೇ ಇಲ್ಲ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗೆ ಪ್ರತಿ ವರ್ಷ ೬ ಸಾವಿರ ರೂ. ಹಣ ಹಾಕುತ್ತಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರದ ೪ ಸಾವಿರ ರೂ.ಹಣವನ್ನು ಯಡಿಯೂರಪ್ಪ ಸರ್ಕಾರದಲ್ಲಿ ಹಾಕಲಾಗುತ್ತಿತ್ತು. ಅದನ್ನು ರದ್ದು ಪಡಿಸಿರುವ ಸಿದ್ದರಾಮಯ್ಯ ಸರ್ಕಾರ ರೈತರ ಪರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ರೈತ ಮೊರ್ಚಾ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದಿನದಲ್ಲಿ ೧೮ ಗಂಟೆಗಳ ಕಾಲ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದವರನ್ನು ಎಂದಿಗೂ ಅವರು ಹತ್ತಿರ ಸೇರಿಸುವುದಿಲ್ಲ. ಲಂಚಮುಕ್ತ, ಕಪ್ಪು ಚುಕ್ಕೆ ರಹಿತವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ತಾಯಿ ನಿಧನರಾದ ಸಂದರ್ಭದಲ್ಲೂ ಸಂಸ್ಕಾರವನ್ನು ನೆರವೇರಿಸಿ ಮರು ಕ್ಷಣದಿಂದಲೇ ದೈನಂದಿನ ಕೆಲಸಕ್ಕೆ ಹಾಜರಾಗಿದ್ದರು ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದೊಡ್ಡದು ಎನ್ನುವ ಭಾವನೆಯಲ್ಲಿ ಕಾರ್ಯಕರ್ತರೆಲ್ಲರೂ ಕೆಲಸ ಮಾಡಬೇಕು. ಯಾರು ಅಭ್ಯರ್ಥಿ ಎನ್ನುವುದು ನಮಗೆ ಮುಖ್ಯವಲ್ಲ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರು.

ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರ ೧೫ ದಿನ ತೆಗೆದುಕೊಂಡಿದೆ. ಇದಲ್ಲದೆ ಮುಖ್ಯಮಂತ್ರಿಗಳಿಗೆ ಬಾಂಬ್ ಬೆದರಿಕೆ ಹಾಕುವ ಹಂತಕ್ಕೆ ಅವರು ಬಂದಿದ್ದಾರೆ. ಮತಕ್ಕಾಗಿ ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಿರುವುದು ಇದಕ್ಕೆ ಕಾರಣ ಎಂದು ದೂರಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಕೈಚೆಲ್ಲಿ ಕುಳಿತಿದ್ದರೆ ಪರಿಸ್ಥಿತಿ ಏನಾಗುತ್ತಿತೆಂಬುದು ಊಹಿಸಲು ಆಸಾಧ್ಯ. ಆದರೆ ರಾತ್ರಿ ಹಗಲು ಕೆಲಸ ಮಾಡಿದ ಪ್ರಧಾನಿಗಳು ಕೋವಿಡನ್ನು ಓಡಿಸಿ ನಮ್ಮನ್ನೆಲ್ಲಾ ಬದುಕಿಸಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಿರಂಜನ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಪುಣ್ಯಪಾಲ್, ಕೆ.ಪಿ.ವೆಂಕಟೇಶ್, ನಾಗರಾಜ್, ದಿನೇಶ್ ಮುಗುಳವಳ್ಳಿ, ದಿನೇಶ್ ಪಾದಮನೆ ಇತರರು ಭಾಗವಹಿಸಿದ್ದರು.

Gram Parikrama Yatra program organized by BJP District Farmer Morcha

About Author

Leave a Reply

Your email address will not be published. Required fields are marked *