September 20, 2024

ಪ್ರಾಣದ ಹಂಗು ತೊರೆದು ಲೈನ್‌ಮ್ಯಾನ್‌ಗಳ ಕರ್ತವ್ಯ ಪ್ರಶಂಸನೀಯ

0
ಲೈನ್‌ಮ್ಯಾನ್ ದಿವಸ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ಲೈನ್‌ಮ್ಯಾನ್ ದಿವಸ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ಚಿಕ್ಕಮಗಳೂರು: ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರತಿನಿತ್ಯ ಜನರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಲೈನ್‌ಮ್ಯಾನ್‌ಗಳ ಕರ್ತವ್ಯ ಪ್ರಶಂಸನೀಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ಅವರು ಇಂದು ಕವಿಪ್ರನಿನಿ ನೌಕರರ ಸಭಾ ಭವನದಲ್ಲಿ ಮೆಸ್ಕಾಂ ಹಾಗೂ ಕಾರ್ಯಪಾಲನಾ ವಿಭಾಗ ಏರ್ಪಡಿಸಿದ್ದ ಲೈನ್‌ಮ್ಯಾನ್ ದಿವಸ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

೧೯೭೫ ರಲ್ಲಿ ವಿಶ್ವಸಂಸ್ಥೆ ವಿಶ್ವ ಮಹಿಳಾ ದಿನಾಚರಣೆಯನ್ನು ಪ್ರಾರಂಭ ಮಾಡಿದ ನಂತರ ಪ್ರತೀ ವರ್ಷ ಮಾ.೮ ರಂದು ಸರ್ಕಾರ ವತಿಯಿಂದ ಆಚರಿಸುತ್ತಾ ಬರುತ್ತಿದ್ದು, ಮೆಸ್ಕಾಂನಿಂದ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸಾವಿರಾರು ವರ್ಷಗಳ ಹಿಂದೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮ ಸಮಾಜದಲ್ಲಿ ಧಾರ್ಮಿಕವಾಗಿ ಎಲ್ಲಾ ರೀತಿಯ ಸಮಾನತೆ ನೀಡಬೇಕೆಂಬ ಉದ್ದೇಶದಿಂದ ಹೋರಾಟ ಮಾಡಿದ ೧೨ನೇ ಶತಮಾನದಲ್ಲಿ ಕಾಯಕ ಯೋಗಿ ಜಗಜ್ಯೋತಿ ಬಸವಣ್ಣ, ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಈ ಇಬ್ಬರೂ ಮಹನೀಯರನ್ನು ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿದ್ದಾರೆ. ಆದರೆ ಗಂಡೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿಲ್ಲ. ತೊಟ್ಟಿಲು ತೂಗುವ ಕೈಗಳು ಮಾತ್ರವಲ್ಲದೆ ಅವಕಾಶ ಸಿಕ್ಕರೆ ದೇಶವನ್ನು ಆಳಬಲ್ಲಳು ಎಂಬುದಕ್ಕೆ ೧೬ ವರ್ಷಗಳ ಕಾಲ ಸಮೃದ್ಧ ಆಡಳಿತ ನಡೆಸಿದ ಉಕ್ಕಿನ ಮಹಿಳೆ ದಿವಂಗತ ಶ್ರೀಮತಿ ಇಂದಿರಾಗಾಂಧಿ ಎಂದು ಬಣ್ಣಿಸಿದರು.

ಯಾವುದೇ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳುತ್ತಾರೆ. ಈಗ ಪ್ರಪಂಚ ಬದಲಾಗಿದೆ ಕಾರಣ ಕೇವಲ ಪುರಷನ ಹಿಂದೆ ಮಾತ್ರ ಮಹಿಳೆ ಕೆಲಸ ಮಾಡುವುದಿಲ್ಲ. ಸ್ವಾವಲಂಬಿಯಾಗಿ ಸಮಾಜದ ಮುನ್ನಲೆಗೆ ಬಂದು ಕೆಲಸ ಮಾಡುತ್ತಾ ಅವರ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಪ್ರಥಮ ಬಾರಿಗೆ ಲೈನ್‌ಮ್ಯಾನ್ ದಿವಸ್ ಆಚರಣೆ ಮಾಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ನಗರದಲ್ಲಿ ಪೌರ ಕಾರ್ಮಿಕರು ಆರೋಗ್ಯವಾಗಿದ್ದು ಕೆಲಸ ಮಾಡಿದರೆ ನಾಗರೀಕರ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಅದೇ ರೀತಿ ಯಾವುದೇ ಗ್ರಾಮ, ನಗರ, ಪಟ್ಟಣ ವಿದ್ಯುತ್ ಇಲ್ಲದೆ ಒಂದು ದಿನ ಇರಲು ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ಮೆಸ್ಕಾಂ ಇಲಾಖೆ ಸಿಬ್ಬಂದಿ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡುವ ಲೈನ್‌ಮ್ಯಾನ್‌ಗಳ ಕರ್ತವ್ಯ ಶ್ಲಾಘನೀಯ ಎಂದರು.

ತಮ್ಮ ಪ್ರಾಣದ ಹಂಗನ್ನು ತೊರೆದು ಯೋಧರು ದೇಶ ಕಾಯುತ್ತಾರೆ. ಅದರಂತೆ ಮೆಸ್ಕಾಂ ಇಲಾಖೆಯ ಲೈನ್‌ಮ್ಯಾನ್‌ಗಳ ಕರ್ತವ್ಯವೂ ಅಷ್ಟೇ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರ ಹಿತ ಕಾಯುವ ಮೂಲಕ ಅವರನ್ನು ಸಂರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸ್ವಾಗತಿಸಿ ಮಾತನಾಡಿ, ಇತಿಹಾಸ ಸೃಷ್ಠಿಸಿದ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ವಿಶ್ವ ಮಹಿಳಾ ದಿನಾಚರಣೆ ಇದಕ್ಕೆ ಪೂರಕ ಎಂದು ಹೇಳಿದರು.

ವೀರ ವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಸಾಹಿತ್ಯ ಕ್ಷೇತ್ರದಲ್ಲಿ ಅಕ್ಕಮಹಾದೇವಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರ ಸವಿ ನೆನಪಿಗಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

೧೯೭೫ ರ ಮಾ.೮ ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿದವು. ೧೮-೧೯ನೇ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಹೋರಾಟ ನಡೆದಿದ್ದು ಸರ್ಕಾರಿ ವಲಯದಲ್ಲಿಯೂ ಮಹಿಳೆಯರಿಗೆ ಸಮಾನ ಉದ್ಯೋಗ ನೀಡಬೇಕೆಂದು ಆಗ್ರಹಿಸುತ್ತ ಪ್ರಪಂಚದಾದ್ಯಂತ ಜಾಗತಿಕವಾಗಿ ಮಹಿಳಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಮಹಿಳೆ ಒಂದು ಕುಟುಂಬದ ಆಧಾರ ಸ್ಥಂಭವಾಗಿ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ವಿಜ್ಞಾನ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಮಾಡಿರುವ ಸಾಧನೆಯನ್ನು ಸ್ಮರಿಸುವ ದಿನ ಮಾ.೮ ಎಂದು ತಿಳಿಸಿದರು.

ವೇದಿಕೆಯಲ್ಲಿ ಮೆಸ್ಕಾಂ ಇಲಾಖೆಯ ಇಂಜಿನಿಯರ್‌ಗಳಾದ ಲೋಕೇಶ್, ಮಾರುತಿ, ರಾಜಶೇಖರ್, ಗ್ರಾಮಸ್ಥರುಗಳಾದ ದೇವರಾಜ್, ಗೋಪಾಲ್, ಲೋಕೇಶ್, ಸತೀಶ್, ರಮೇಶ್, ವಿರೂಪಾಕ್ಷ, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ಮತ್ತಿತರರು ಉಪಸ್ಥಿತರಿದ್ದರು.

Lineman Divas and International Women’s Day programme

About Author

Leave a Reply

Your email address will not be published. Required fields are marked *