September 20, 2024

ಮೋಕ್ಷದ ಮಾರ್ಗ ತೋರಿದ ಸಂತರ ಪೈಕಿ ಕೈವಾರ ತಾತಯ್ಯ

0
ಯೋಗಿನಾರಾಯಣ ಯತೀಂದ್ರ (ಕೈವಾರ ತಾತಯ್ಯ) ೨೯೮ನೇ ಜಯಂತಿ ಆಚರಣೆ

ಯೋಗಿನಾರಾಯಣ ಯತೀಂದ್ರ (ಕೈವಾರ ತಾತಯ್ಯ) ೨೯೮ನೇ ಜಯಂತಿ ಆಚರಣೆ

ಚಿಕ್ಕಮಗಳೂರು:  ಧರ್ಮ ಬೋಧಕರು, ಶ್ರೇಷ್ಠ ಸಂತರು, ಜ್ಞಾನ, ಮೋಕ್ಷದ ಮಾರ್ಗ ತೋರಿದ ಸಂತರ ಪೈಕಿ ಕೈವಾರ ತಾತಯ್ಯ ಅವರೂ ಒಬ್ಬರು ಎಂದು ಸಾಹಿತಿಗಳಾದ ಶ್ರೀನಿವಾಸ ನಾಯ್ಡ್ ತಿಳಿಸಿದರು.

ನಗರದ ಹೊರ ವಲಯದ ಸಗನಿಪುರ ರಸ್ತೆಯಲ್ಲಿ ಶ್ರೀ ಯೋಗಿನಾರೇಯಣ ದೇವಸ್ಥಾನ ಕೈವಾರಗಿರಿ ಜಾಗದಲ್ಲಿ ಆಯೋಜಿಸಲಾಗಿದ್ದ ಯೋಗಿನಾರಾಯಣ ಯತೀಂದ್ರ (ಕೈವಾರ ತಾತಯ್ಯ) ೨೯೮ನೇ ಜಯಂತಿ ಆಚರಣೆ ಸಮಾರಂಭವನ್ನುಉದ್ಘಾಟಿಸಿಮಾತನಾಡಿದರು.

ಭಾರತವು ಗುರು ಪರಂಪರೆಗೆ ಹೆಸರಾದ ದೇಶ. ಇಲ್ಲಿನ ದಶದಿಕ್ಕುಗಳಲ್ಲಿಯೂ ಗುರು ಮಹಿಮೆಯ ಹತ್ತು ಹಲವು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಇಂತಹ ಗುರು ಪರಂಪರೆಯ ಸಾರ್ಥಕ ಮತ್ತು ಸಾಧಕ ಮಹಾಮಹಿಮರಲ್ಲಿ ಕೈವಾರ ಯೋಗಿ ನಾರೇಯಣ ಯತೀಂದ್ರರು ಪ್ರಾತಃ ಸ್ಮರಣೀಯರಾಗಿದ್ದಾರೆ.

ಕ್ರಿಸ್ತ ಶಕ ೧೭೨೬ ರಲ್ಲಿ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಬಳಿಯ ಕೊತ್ತಪಲ್ಲಿ ಗ್ರಾಮದಲ್ಲಿ ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಗಳ ಏಕಮಾತ್ರ ಸುಪುತ್ರರಾಗಿ ಜನಿಸಿದರು. ಬಲಿಜ ಜನಾಂಗಕ್ಕೆ ಸೇರಿದ ಬಾಲಕ ನಾರಾಯಣ ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು, ಹತ್ತಿರದ ಸೋದರ ಸಂಬಂಧಿಗಳ ಕುಟುಂಬದಲ್ಲಿ ಬೆಳೆಯುತ್ತಾರೆ. ಬಾಲ್ಯದಲ್ಲಿ ತೆಲುಗು, ಕನ್ನಡ ಮತ್ತು ಸಂಸ್ಕೃತ ಭಾಷೆಯ ಜ್ಞಾನ ಪಡೆದುಕೊಳ್ಳುತ್ತಾರೆ. ಕುಟುಂಬದ ವಿಘಟನೆಯಿಂದ ಚಿಕ್ಕ ಪ್ರಾಯದಲ್ಲಿಯೇ ಆಧ್ಯಾತ್ಮಿಕ ಸಾಧನೆ ಬಗ್ಗೆ ಮನ ಹರಿಯಿತು.

ಆದರೂ ಸಂಬಂಧಿಗಳ ಒತ್ತಾಸೆ ಮೇರೆಗೆ ಸೋದರತ್ತೆಯ ಮಗಳು ಮುನಿಯಮ್ಮಳೊಂದಿಗೆ ವಿವಾಹವಾಗುತ್ತದೆ. ಕ್ರಮೇಣ ಒಂದು ಹೆಣ್ಣು, ಎರಡು ಗಂಡು ಮಕ್ಕಳು ಜನಿಸಿದರು. ಕುಲಕಸುಬಾದ ಬಳೆ ಮಾರಾಟಕ್ಕೆ ಹೋದಾಗ ನಾರಾಯಣ ಹೆಣ್ಣು ಮಕ್ಕಳನ್ನು ತಮ್ಮ ತಾಯಿ ಸಮಾನ ಎಂದೇ ಭಾವಿಸಿ ಅವರು ದುಡ್ಡು ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು ಇಲ್ಲವಾದರೆ ಇಲ್ಲ. ಇದರಿಂದಾಗಿ ಕುಟುಂಬದ ನಿರ್ವಹಣೆ ದುಸ್ತರವಾಯಿತು.

ಹೆಂಡತಿ ಮುನಿಯಮ್ಮ ಹೀಗೇ ಆದರೆ ಮನೆ ಮಂದಿ ಬೀದಿಪಾಲು ಆಗಬೇಕಾಗುತ್ತದೆ ಎಂದೆಣಿಸಿ ಮನೆ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ.
ನಾರಾಯಣ ಮನೆ ಬಿಟ್ಟು ಹೊರಟು ತನ್ನ ಆರಾಧ್ಯ ದೈವ ಶ್ರೀ ಅಮರ ನಾರೇಯಣನ ಧ್ಯಾನಿಸುತ್ತಾ ನಡೆದಾಗ ಮಾರ್ಗ ಮಧ್ಯೆ ಪರದೇಶಿ ಸ್ವಾಮಿಗಳಿಂದ ಬೀಜಾಕ್ಷರಿ ಮಂತ್ರೋಪದೇಶ ಪಡೆಯುತ್ತಾರೆ. ನರಸಿಂಹ ಗವಿಯಲ್ಲಿ ಕುಳಿತು ಬೆಣಚು ಕಲ್ಲನ್ನು ಬಾಯಿಯಲ್ಲಿ ಹಾಕಿಕೊಂಡು “ಓಂ ನಮೋ ಅಮರ ನಾರೇಯಣಯ” ಎಂಬ ಮಂತ್ರವನ್ನು ಜಪಿಸಲು ಆರಂಭಿಸುತ್ತಾರೆ. ದೀರ್ಘಕಾಲದ ತಪಸ್ಸಿನ ಫಲವಾಗಿ ಬೆಣಚು ಕಲ್ಲು, ಕಲ್ಲು ಸಕ್ಕರೆಯಾಗಿ ಪರಿವರ್ತನೆಯಾಯಿತು.

ನಾರಾಯಣ ಎಂಬ ವ್ಯಕ್ತಿ ಶ್ರೀ ಯೋಗಿ ನಾರೇಯಣ ಯತೀಂದ್ರರಾಗಿ ಬದಲಾದರು. ಲೋಕಾನುಭವ, ವಿವಿಧ ಊರುಗಳ ತಿರುಗಾಟ, ದಾಸರ – ವಚನಕಾರರ ರಚನೆಗಳ ಆಲಿಸುವಿಕೆ ಮತ್ತು ಭಜನಾ ಗಾಯನದ ಮೂಲಕ ಆ ಎಲ್ಲಾ ತತ್ತ್ವಪದಗಳ ಸಾರವನ್ನು ಹೀರಿ ತಮ್ಮ ರಚನೆಗಳನ್ನು ಅತ್ಯುತ್ಕೃಷ್ಟವಾಗಿ ರಚಿಸಿ ಮುಂದಿನ ಪೀಳಿಗೆಗೆ ಮೀಸಲಿರಿಸಿದರು.

ಹೀಗೆ ರಚಿಸಿದ ಸಾಹಿತ್ಯದಲ್ಲಿ “ಕಾಲಜ್ಞಾನ – ಭವಿಷ್ಯವಾಣಿ” ಒಂದು ವಿಶೇಷ ಗ್ರಂಥವಾಗಿದೆ. ಜಗತ್ತಿನಲ್ಲಿ ರಚನೆಯಾದ ಕಾಲಜ್ಞಾನ ಕೃತಿಗಳಲ್ಲಿ ಇದು ಕೊನೆಯದು ಎಂಬ ಪ್ರತೀತಿಯಿದೆ.

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ವಿಚಾರ, ಮೊಸರು ಮಾರುವವನು ಮನೆ ಮನೆ ಬೀದಿ ಬೀದಿ ತಿರುಗಿ ಮೊಸರನ್ನು ಮಾರುವ ಮತ್ತು ಹೆಂಡದಂಗಡಿಯವ ಕುಳಿತಲ್ಲೇ ಝಣ ಝಣ ಕಾಂಚಾಣ ಎಣಿಸಿಕೊಳ್ಳುವ ಅಂಶಗಳನ್ನು ತಾತಯ್ಯನವರು ಕಾಲ ಜ್ಞಾನ ಕೃತಿಯಲ್ಲಿ ದಾಖಲಿಸಿದ್ದಾರೆ.

ತಮ್ಮ ಯೋಗ ವಿದ್ಯೆ, ತಪಸ್ಸಿಧ್ಧಿಯಿಂದ ೧೧೦ ವರ್ಷಗಳ ಕಾಲ ತುಂಬು ಜೀವನ ನಡೆಸಿ ತಮ್ಮ ಇಚ್ಚಾಮರಣ ಶಕ್ತಿಯನುಸಾರ ಕೈವಾರ ಕ್ಷೇತ್ರದಲ್ಲಿ ಜೀವಸಮಾಧಿಯಾದರು .

ತಾತಯ್ಯನವರ ತಪೋಭೂಮಿಯಾದ ಕೈವಾರವು ತೀರ್ಥಕ್ಷೇತ್ರವಾಗಿ ಭಕ್ತರ ಬೇಡಿಕೆಗಳನ್ನು ಈಡೇರಿಸುವಂತಹ ಶಕ್ತಿಕ್ಷೇತ್ರವಾಗಿ ಪರಿವರ್ತನೆಗೊಂಡಿದೆ.

ಇಂತಹ ಮಹಾನ್ ಚೇತನ ಶ್ರೀ ಯೋಗಿ ನಾರೇಯಣ ಯತೀಂದ್ರರ ಜನ್ಮ ಜಯಂತಿಯನ್ನು ಈ ದಿನ ಕರ್ನಾಟಕ ರಾಜ್ಯಾದ್ಯಂತ ಬಲು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಆನಂದ್ ಶೆಟ್ಟಿ ಮಾತನಾಡಿ ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು, ಜನಾಂಗದ ಎಲ್ಲರ ಸಲಹೆ ಸಹಕಾರ ಅಗತ್ಯ ಎಂದರು. ಸರ್ಕಾರ ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸದೆ ನಮ್ಮನ್ನು ನಿರ್ಲ್ಯಕ್ಷ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ತಾತಯ್ಯನವರ ಜಯಂತಿಯನ್ನು ಸರ್ಕಾರವೇ ಅರ್ಥಪೂರ್ಣವಾಗಿ ಆಚರಿಸಬೇಕು, ಎಲ್ಲಾ ರೀತಿಯ ಸಹಕಾರ ನಮ್ಮ ಸಮಾಝದ ವತಿಯಿಂದ ನೀಡುತ್ತೇವೆ ಎಂದರು.

ತಾಲ್ಲೂಕು ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ ಜನಾಂಗದ ಪ್ರತಿ ಮನೆಗಳಿಗೂ ಕೈವಾರ ತಾತಯ್ಯನವರ ಭಾವಚಿತ್ರವನ್ನು ನೀಡಿದ್ದೇವೆ, ಸಮಾಜದ ಅಭಿವೃದ್ಧಿಗೆ ಎಲ್ಲರು ಕೈ ಜೊಡಿಸುವಂತೆ ತಿಳಿಸಿದರು.

ಬಲಿಜ ಜನಾಂಗದವರಾದ ಮಲ್ಲಿಗೆ ಸುಧೀರ್ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಶ್ರೀ ಯೋಗಿನಾರೇಯಣ ಬಲಿಜ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷರಾದ ಸಿ.ಟಿ.ಜಯವರ್ಧನ್, ಪ್ರಧಾನ ಕಾರ್ಯದರ್ಶಿ ಆರ್.ಕುಮಾರ್, ಖಜಾಂಚಿ ಪೂಜಾರ್ ಮಂಜಪ್ಪ, ಲೆಕ್ಕ ಪರಿಶೋಧಕರಾದ ರತೀಶ್‌ಕುಮಾರ್, ಸಹಕಾರ್ಯದರ್ಶಿ ಮಹೇಶ್, ಕಾನೂನು ಸಲಹೆಗಾರರಾದ ಜಿ.ಬಾಲಕೃಷ್ಣ, ಶ್ರವಣ್, ನಿರ್ದೇಶಕರಾದ ಯಶ್ವಂತ್, ಗಿರೀಶ್, ಅಲೋಕ್, ಪ್ರಸನ್ನಕುಮಾರ್, ಗಂಗಾಧರ, ದಿವಾಕರ, ಮಹೇಶ್, ಧರ್ಮಶೆಟ್ಟಿ, ವಾಸುದೇವನಾಯ್ಡು, ವಿಶ್ವನಾಥ್, ಸುರೇಶ್, ನಿತ್ಯಾನಂದ, ಲಕ್ಷ್ಮೀಶ್, ಮರಿಶೆಟ್ಟಿ, ಚನ್ನಶೆಟ್ಟಿ ಉಪಸ್ಥಿತರಿದ್ದರು.

298th birth anniversary celebration of Yoginarayana Yathindra (Kaiwara Tataya).

About Author

Leave a Reply

Your email address will not be published. Required fields are marked *