September 19, 2024

Elephant captured in Mudigere’s Talavara : ಮೂಡಿಗೆರೆಯ ತಳವಾರದಲ್ಲಿ ಪುಂಡಾನೆ ಸೆರೆ

0

ಮೂಡಿಗೆರೆ:  ತಾಲೂಕಿನ ತಳವಾರ ಗ್ರಾಮದಲ್ಲಿ ಪುಂಡಾನೆಯೊಂದನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ಆರು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ, ಶನಿವಾರ ಪುಂಡಾನೆಯನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಆನೆ ಜೊತೆಗಿದ್ದ ಮತ್ತೊಂದು ಆನೆ ತಪ್ಪಿಸಿಕೊಂಡು ಗಾಬರಿಯಿಂದ ಓಡಾಡುತ್ತಿರುವ ಮಾಹಿತಿಯಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಅಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಮೂಡಿಗೆರೆ ಹಾಗೂ ಆಲ್ದೂರು ವಲಯದ ತತ್ಕೋಳ, ಕುಂದೂರು ಹುಲ್ಲೆಮನೆ, ತಳವಾರ, ಕುಂಡ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 3 ಕಾಡಾನೆಗಳು ಜನ ವಸತಿ ಪ್ರದೇಶಕ್ಕೆ ಬಂದು ಉಪಟಳ ನೀಡುತ್ತಿದ್ದವು. ಈ ಭಾಗದಲ್ಲಿ ಒಂದೇ ವರ್ಷದಲ್ಲಿ 3 ಮಂದಿ ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ಒಂದು ಗಂಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದು, ಆ ಆನೆಯನ್ನು ಸಕ್ರೆಬೈಲಿನ ಸಾಕಾನೆಗಳ ಬಿಡಾರಕ್ಕೆ ಕಳುಹಿಸಲಾಯಿತು.

ಶನಿವಾರ ತಳವಾರ ಬಳಿ ಮತ್ತೊಂದು ಆನೆ ಕಂಡು ಬಂದಿದ್ದು, ಅದಕ್ಕೆ ಅರೆವಳಿಕೆ ಮದ್ದು ನೀಡಿ ಖೆಡ್ಡಾಗೆ ಕೆಡವಲಾಯ್ತು. ಆದರೆ ಪುಂಡಾನೆ ಎಚ್ಚರಗೊಂಡಾಗ ಸಾಕಾನೆ ಜೊತೆ ಕಾದಾಟಕ್ಕೆ ಮುಂದಾಯ್ತು. ಸುಮಾರು ಒಂದು ಗಂಟೆಗಳ ಕಾಲ ಸಾಕಾನೆಗಳ ಜೊತೆಗೆ ಕಾಡಾನೆ ಕಾದಾಟ ನಡೆಸಿತು. ಕೊನೆಗೆ ಮೊದಲೇ ಕಾಡಾನೆಯ ಕಾಲುಗಳಿಗೆ ಕಟ್ಟಿದ ಹಗ್ಗದ ಮೂಲಕ ಹಿಂದೆ-ಮುಂದೆ ಸಾಕಾನೆಗಳು, ಕಾಡಾನೆಯನ್ನು ಕಾಡಿನಿಂದ ಹೊರಕ್ಕೆ ತರಲು ಹರಸಾಹಸ ಮಾಡಿದ್ದವು.

ಈ ವೇಳೆ ಸೆರೆಯಾದ ಕಾಡಾನೆಯನ್ನು ನೋಡಲು ಜನರು ಬರಬೇಡಿ ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು. ಆದರೂ ಕೂಡ ನೂರಾರು ಸಂಖ್ಯೆಯಲ್ಲಿ ಜನರು ಕಾಡಿಗೆ ದೌಡಾಯಿಸಿದರು.

3 ಆನೆಗಳ ಪೈಕಿ, 2 ಆನೆಗಳನ್ನು ಸೆರೆಹಿಡಿಯಲಾಗಿದ್ದು, ಮತ್ತೊಂದು ಆನೆ ಹಿಡಿಯಬೇಕಾಗಿದೆ. ಈ ಮೂರು ಆನೆಗಳು ಒಟ್ಟಾಗಿ ಓಡಾಡುತ್ತಿದ್ದು, ಅವುಗಳಲ್ಲಿ 2 ಆನೆಗಳನ್ನು ಹಿಡಿದಿದ್ದು, ಈಗ ಒಂಟಿಯಾಗಿರುವ ಆನೆಯ ಚಲನವಲನ ಬೇರೆಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಯವರು ತಿಳಿಸಿದ್ದಾರೆ.

Elephant captured in Mudigere’s Talavara

About Author

Leave a Reply

Your email address will not be published. Required fields are marked *

You may have missed